
ತುಮಕೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ₹8 ಲಕ್ಷ, 4 ಖಾಲಿ ಚೆಕ್ ಪಡೆದು ವಂಚಿಸಿದ ಆರೋಪದ ಮೇರೆಗೆ ರೈಲ್ವೆ ಇಲಾಖೆಯ ಟ್ರ್ಯಾಕ್‌ಮ್ಯಾನ್, ಸರಸ್ವತಿಪುರಂ ನಿವಾಸಿ ಎಚ್.ಆರ್.ವೆಂಕಟೇಶಯ್ಯ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಬೆಸ್ಕಾಂನಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಚೆಕ್, ಹಣ ಪಡೆದು ವಂಚಿಸಿದ್ದಾರೆ. ಇವರ ವಿರುದ್ಧ ಕ್ರಮಕೈಗೊಂಡು ಹಣ ವಾಪಸ್ ಕೊಡಿಸಬೇಕು’ ಎಂದು ಕೋರಿ ಬೆಂಗಳೂರಿನ ಸಿ.ವಿಜಯಕುಮಾರಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
‘ಬೆಸ್ಕಾಂನಲ್ಲಿ ಎಸ್‌ಬಿಡಿ ಆಪರೇಟರ್ ಕೆಲಸ ಕೊಡಿಸುತ್ತೇನೆ. ಇದಕ್ಕಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ, ₹13 ಲಕ್ಷ ನಗದು ನೀಡಬೇಕು’ ಎಂದು ವೆಂಕಟೇಶಯ್ಯ ಬೇಡಿಕೆ ಇಟ್ಟಿದ್ದರು. ‘ಉದ್ಯೋಗಕ್ಕೆ ಸೇರಿದ ನಂತರ ಹಣ ಸಂಗ್ರಹ ಮಾಡಬೇಕಾಗುತ್ತದೆ. ಭದ್ರತೆಗಾಗಿ ಮೊದಲೇ 4 ಖಾಲಿ ಚೆಕ್‌ಗಳನ್ನು ನೀಡಬೇಕು’ ಎಂದಿದ್ದರು. ಅದರಂತೆ ಚೆಕ್‌ಗಳನ್ನು ಸಹ ನೀಡಿದ್ದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2023ರಲ್ಲಿ ಹಣ ನೀಡಿದ ನಂತರ ಬೆಂಗಳೂರಿನಲ್ಲಿ ಕನ್ಸಲ್ಟೆನ್ಸಿ ಮುಖಾಂತರ ಒಂದು ತಿಂಗಳು ತರಬೇತಿ ಕೊಡಿಸಿದ್ದರು. ತರಬೇತಿ ಮುಗಿದ ನಂತರ ಬೆಸ್ಕಾಂ ವತಿಯಿಂದ ನೀಡುವಂತೆ ₹12,800 ಸಂಬಳ ನನ್ನ ಬ್ಯಾಂಕ್ ಖಾತೆ ಜಮಾ ಮಾಡಿದ್ದರು. ಸ್ವಲ್ಪ ದಿನ ಮನೆಯಲ್ಲಿ ಇರಿ, ಆದೇಶದ ಪ್ರತಿ ಸಿಕ್ಕ ನಂತರ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ನಂಬಿಸಿದ್ದರು. ನಂತರ ಮೋಸ ಹೋಗಿರುವುದು ಗೊತ್ತಾಯಿತು ಎಂದು ವಿಜಯಕುಮಾರಿ ಆರೋಪಿಸಿದ್ದಾರೆ.
ಹಣ ವಾಪಸ್ ಕೇಳಿದಾಗ ₹1 ಲಕ್ಷ ನೀಡಿದ್ದಾರೆ. ಬಾಕಿ ಹಣ, ಅಸಲಿ ದಾಖಲಾತಿ ಕೊಡುತ್ತಿಲ್ಲ. ಖಾಲಿ ಚೆಕ್, ದಾಖಲಾತಿ ದುರುಪಯೋಗವಾದರೆ ವೆಂಕಟೇಶಯ್ಯ ಅವರೇ ಕಾರಣ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.