ADVERTISEMENT

ತುಮಕೂರು: ಮಳೆಗಾಗಿ ಮುಗಿಲು ನೋಡುವುದೇ ಕೆಲಸ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 4:35 IST
Last Updated 24 ಸೆಪ್ಟೆಂಬರ್ 2021, 4:35 IST
ರಾಗಿ ಬೆಳೆ ಒಣಗಿರುವುದು
ರಾಗಿ ಬೆಳೆ ಒಣಗಿರುವುದು   

ತುಮಕೂರು: ರೈತರಿಗೆ ಮುಗಿಲು ನೋಡುವುದು ಬಿಟ್ಟರೆ ಬೇರೆ ದಾರಿ ಕಾಣುತ್ತಿಲ್ಲ. ವರುಣ ಈಗ ಕೃಪೆ ತೋರಬಹುದು, ನಾಳೆ ಕಣ್ಣು ಬಿಡಬಹುದು ಎಂದು ಕಣ್ಣು, ಬಾಯಿ ಬಿಡುತ್ತಿದ್ದರೂ ಕರುಣೆ ಮಾತ್ರ
ಬಂದಿಲ್ಲ.

ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಭೂತಾಯಿ ಒದ್ದೆಯಾಗಿಲ್ಲ. ಜೀವರಾಶಿ ಹನಿಹನಿಗೂ ಪರಿತಪಿಸುತ್ತಿದ್ದರೂ ವರುಣನ ಕೋಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೇ ಹೊರತು ಮನಸ್ಸು ಮಾತ್ರ ಕರಗುತ್ತಿಲ್ಲ. ‘ವರುಣ ದೇವ’ ಕೋಪಿಸಿಕೊಂಡಿದ್ದಾನೆ ಎಂದು ಒಲಿಸಿಕೊಳ್ಳಲು ಜನರು ನಾನಾ ವಿಧದ ಕಸರತ್ತು ನಡೆಸಿದ್ದಾರೆ. ಕಪ್ಪೆಗಳಿಗೆ ಮದುವೆ ಮಾಡುವುದು, ಮಕ್ಕಳ ನಡುವೆ ವಿವಾಹ ಏರ್ಪಡಿಸುವುದು, ದೇವರಿಗೆ ವಿಶೇಷ ಪೂಜೆ, ಅಭಿಷೇಕ ಕೈಗೊಳ್ಳುವುದು, ಮಳೆರಾಯನ ಮೂರ್ತಿಮಾಡಿ ಮೆರವಣಿಗೆ ನಡೆಸಿ, ಪೂಜಿಸುವುದು ಸೇರಿದಂತೆ ಹಿಂದೆ ಆಚರಣೆ ಮಾಡಿದ ನೆನಪುಗಳನ್ನು ಮತ್ತೆ ತಂದುಕೊಂಡು ಎಲ್ಲಾ ರೀತಿಯಲ್ಲೂ ಮೊರೆ ಹೋಗುತ್ತಿದ್ದಾರೆ.

ಇಂತಹ ಆಚರಣೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿದ್ದು, ಮಳೆ ಇಲ್ಲದ ಮುಂದಿನ ಜೀವನವನ್ನು ನೆನಪಿಸಿಕೊಂಡು ಕಣ್ಣೀರಾಗುತ್ತಿದ್ದಾರೆ. ಮನುಷ್ಯ ಜನ್ಮ ಹೇಗೋ ತಡೆದುಕೊಳ್ಳುತ್ತದೆ. ಮನೆಯಲ್ಲಿರುವ ಕಾಳು, ಪಡಿತರದಲ್ಲಿ ಸಿಗುವ ಆಹಾರ ಬಳಸಿಕೊಂಡು ನಾಲ್ಕು ದಿನ ಕತೆಯಾಕಬಹುದು. ಆದರೆ ಮೂಕ ಪ್ರಾಣಿಗಳನ್ನು ಏನು ಮಾಡುವುದು ಎಂಬ ದೊಡ್ಡ ಚಿಂತೆ ಕಾಡಲಾರಂಭಿಸಿದೆ. ಬೆಳೆ ಬೆಳೆಯುವುದು ಹೋಗಲಿ, ಜಾನುವಾರುಗಳಿಗೆ ಕನಿಷ್ಠ ಮೇವಾದರೂ ಸಿಕ್ಕಿದರೆ ಒಂದಷ್ಟು ದಿನಗಳು ಬದುಕಿಸಿಕೊಳ್ಳಬಹುದು ಎಂಬ ಚಿಂತೆಯಲ್ಲಿದ್ದಾರೆ.

ADVERTISEMENT

ಮೇವಿನ ಜತೆಗೆ ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗಿ ಕಾಡಲಿದ್ದು, ಬೇಸಿಗೆಯನ್ನು ನೆನಪಿಸಿಕೊಂಡರೆ ಭಯವಾಗುತ್ತದೆ ಎಂದು ಗುಬ್ಬಿ ತಾಲ್ಲೂಕು ಕಡಬ ಗ್ರಾಮದ ನಾರಾಯಣಗೌಡ ಆತಂಕ ವ್ಯಕ್ತಪಡಿಸುತ್ತಾರೆ. ಇದು ಇವರೊಬ್ಬರು, ಈ ಒಂದು ಗ್ರಾಮದ ಸಮಸ್ಯೆಯಲ್ಲ. ಇಡೀ ಜಿಲ್ಲೆಯಲ್ಲಿ ಇಂತಹ
ವಾತಾವರಣ ಕಂಡುಬರುತ್ತಿದೆ. ಹೇಮಾವತಿ ನೀರು ಹರಿದು ಕೆರೆಗಳನ್ನು ತುಂಬಿಸಿರುವ ಕಡೆಗಳಲ್ಲಿ ಹೆಚ್ಚಿನ ಸಮಸ್ಯೆಯಾಗದು. ಹೇಮಾವತಿ ನೀರು ಎಲ್ಲಾ ಕೆರೆಗಳ ಒಡಲು ತುಂಬಿಸುವುದಿಲ್ಲ. ಜಿಲ್ಲೆಯಲ್ಲಿ ಶೇ 10ರಿಂದ 20 ಪ್ರದೇಶಗಳಿಗೆ ನೀರುಣಿಸಬಹುದು. ಉಳಿದ ಪ್ರದೇಶಗಳಲ್ಲಿ ಈಗಲೂ ಬೆಂಗಾಡಿನ ಸ್ಥಿತಿಯನ್ನು ಕಾಣಬಹುದಾಗಿದೆ.

ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗಿದ್ದು, ಈಗಾಗಲೇ ಪಾತಾಳ ಮುಟ್ಟಿದೆ. ಕೆಲವು ತಾಲ್ಲೂಕುಗಳಲ್ಲಿ ಒಂದು ಸಾವಿರ ಅಡಿಗಳ ವರೆಗೆ ಕೊಳವೆ ಬಾವಿ ಕೊರೆಸಿದರೂ ಒಂದನಿಯೂ ಜಿನುಗುತ್ತಿಲ್ಲ. ಹಲವು ಪ್ರದೇಶಗಳನ್ನು ಕಪ್ಪು, ಬೂದು ಪಟ್ಟಿಗೆ ಸೇರಿಸಲಾಗಿದೆ. ಹೇಮಾವತಿ ಹರಿದಿರುವ ಗುಬ್ಬಿ, ತಿಪಟೂರು, ತುರುವೇಕೆರೆ ಕುಣಿಗಲ್‌ ಭಾಗದ ಸೀಮಿತ ಪ್ರದೇಶಗಳನ್ನು ಹೊರತುಪಡಿಸಿದರೆ ಉಳಿದೆಡೆ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದೆ. ಕೆಲವು ಕಡೆಗಳಲ್ಲಿ ಅತಿಯಾಗಿ ಅಂತರ್ಜಲ ಬಳಕೆಯಾಗಿದ್ದು, ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಮುಂದಿನ ದಿನಗಳಲ್ಲೂ ಮಳೆಯಾಗದಿದ್ದರೆ ಕುಡಿಯುವ ನೀರಿಗೆ ತೀವ್ರ ಅಭಾವ ಕಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.