ADVERTISEMENT

ಯುವ ಶಕ್ತಿಯಿಂದ ‘ಆತ್ಮನಿರ್ಭರ ಭಾರತ’ ನಿರ್ಮಾಣ: ನಿವೃತ್ತ ನ್ಯಾಯಮೂರ್ತಿ ಕೃಷ್ಣಭಟ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:10 IST
Last Updated 12 ಜನವರಿ 2026, 7:10 IST
<div class="paragraphs"><p>ತುಮಕೂರಿನ ರಾಮಕೃಷ್ಣ–ವಿವೇಕಾನಂದ ಆಶ್ರಮದಲ್ಲಿ ಭಾನುವಾರ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಸಮ್ಮೇಳನದಲ್ಲಿ&nbsp;‘ವಿವೇಕ-ವಿದ್ಯಾರ್ಥಿ’ ಪರೀಕ್ಷೆಯ ರ್‍ಯಾಂಕ್‌ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.&nbsp;</p></div>

ತುಮಕೂರಿನ ರಾಮಕೃಷ್ಣ–ವಿವೇಕಾನಂದ ಆಶ್ರಮದಲ್ಲಿ ಭಾನುವಾರ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಸಮ್ಮೇಳನದಲ್ಲಿ ‘ವಿವೇಕ-ವಿದ್ಯಾರ್ಥಿ’ ಪರೀಕ್ಷೆಯ ರ್‍ಯಾಂಕ್‌ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. 

   

ತುಮಕೂರು: ದೃಢತೆ, ಸಮಗ್ರತೆ, ಅಚಲ ನಂಬಿಕೆ, ಆತ್ಮ ವಿಶ್ವಾಸ, ಪ್ರಾಮಾಣಿಕತೆಯಿಂದ ಮಾತ್ರ ಆತ್ಮ ನಿರ್ಭರ ಭಾರತ ನಿರ್ಮಾಣ ಸಾಧ್ಯ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಕೃಷ್ಣಭಟ್‌ ಅಭಿಪ್ರಾಯಪಟ್ಟರು.

ನಗರದ ರಾಮಕೃಷ್ಣ–ವಿವೇಕಾನಂದ ಆಶ್ರಮದಲ್ಲಿ ಭಾನುವಾರ ಆಶ್ರಮದ 33ನೇ ವಾರ್ಷಿಕೋತ್ಸವ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಆತ್ಮ ನಿರ್ಭರ ಭಾರತ ನಿರ್ಮಾಣದಲ್ಲಿ ಯುವ ಸಮೂಹ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಶಕ್ತಿಯುತವಾದ ಯುವ ಜನಾಂಗವನ್ನು ನಿರ್ಮಿಸುವ ನಿಟ್ಟಿನಲ್ಲಿ ಶಿಕ್ಷಕರು, ಸಮಾಜ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಯುವ ಜನತೆಯಿಂದ ಮಾತ್ರ ಶಕ್ತಿಯುತವಾದ ರಾಷ್ಟ್ರ, ಆತ್ಮ ನಿರ್ಭರ ಭಾರತ ನಿರ್ಮಾಣ ಸಾಧ್ಯ ಎಂದರು.

ಆರೋಗ್ಯ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣೇಗೌಡ, ‘ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಪ್ರೀತಿಯಿಂದ ನಮ್ಮ ಕರ್ತವ್ಯ ನಿರ್ವಹಿಸಬೇಕು. ರಾಷ್ಟ್ರದ ಉಳಿವು, ಬೆಳವಣಿಗೆಗೆ ಸ್ವಾಮಿ ವಿವೇಕಾನಂದರ ಸಂದೇಶಗಳು ಅನಿವಾರ್ಯವಾಗಿವೆ’ ಎಂದು ಹೇಳಿದರು.

ರಾಣೆಬೆನ್ನೂರು ರಾಮಕೃಷ್ಣ–ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದ, ‘ಶಾರೀರಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ ಶಕ್ತಿಗಳ ವೃದ್ಧಿಯಿಂದ ವ್ಯಕ್ತಿತ್ವದಲ್ಲಿ ಸಮಗ್ರತೆ ಮೂಡುತ್ತದೆ. ಸಹವಾಸ ಹಾಗೂ ಪರಿಸರ ವ್ಯಕ್ತಿತ್ವ ರೂಪಿಸುತ್ತದೆ. ಭಗವದ್ಗೀತೆ ಹಾಗೂ ಉಪನಿಷತ್ತುಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಕರ್ನಾಟಕ ರಾಮಕೃಷ್ಣ-ವಿವೇಕಾನಂದ ಭಾವ ಪ್ರಚಾರ ಪರಿಷತ್ತಿನಿಂದ ಆಯೋಜಿಸಿದ್ದ ‘ವಿವೇಕ-ವಿದ್ಯಾರ್ಥಿ’ ಸ್ಪರ್ಧಾತ್ಮಕ ಪರೀಕ್ಷೆಯ ರ್‍ಯಾಂಕ್‌ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ರಾಮಕೃಷ್ಣ–ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಸ್ವಾಮಿ ಧೀರಾನಂದ, ಸ್ವಾಮಿ ಪರಮಾನಂದ, ಚಿತ್ರದುರ್ಗದ ಸ್ವಾಮಿ ಬ್ರಹ್ಮನಿಷ್ಠಾನಂದ, ಹರಿಹರದ ಸ್ವಾಮಿ ಆತ್ಮದೀಪಾನಂದ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.