ಕಲ್ಲೂರಿನ ಮುಖ್ಯ ರಸ್ತೆಯಲ್ಲಿ ಗುಂಡಿ ಬಿದ್ದು ನೀರು ನಿಂತಿದೆ
ಗುಬ್ಬಿ: ತಾಲ್ಲೂಕಿನ ಗಡಿಭಾಗದ ಕಡಬ ಹೋಬಳಿ ಕಲ್ಲೂರು ಗ್ರಾಮ ತಾಲ್ಲೂಕಿನಲ್ಲಿಯೇ ಉತ್ತಮ ವ್ಯಾಪಾರ ಕೇಂದ್ರವಾಗಿದೆ.
ಪ್ರತಿ ಗುರುವಾರ ಕುರಿ, ಮೇಕೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ. ಇದರ ಜೊತೆಗೆ ತೆಂಗಿನಕಾಯಿ, ಬಾಳೆಕಾಯಿ, ದವಸ, ಧಾನ್ಯ ಹಾಗೂ ತರಕಾರಿ ವ್ಯಾಪಾರವೂ ನಡೆಯುತ್ತದೆ. ವ್ಯಾಪಾರಕ್ಕಾಗಿ ಸಂತೆಗೆ ಬರುವ ಮಾರಾಟಗಾರರು ಹಾಗೂ ವ್ಯಾಪಾರಿಗಳಿಗೆ ಅಗತ್ಯ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.
ಕಲ್ಲೂರು ಸಂತೆಯಲ್ಲಿ ಉತ್ತಮ ತಳಿಯ ಕುರಿ, ಮೇಕೆಗಳು ಸಿಗುವುದರಿಂದ ಸಾಕಾಣಿಕೆ ಮಾಡುವವರು ಮರಿಗಳ ಖರೀದಿಗೆ ಬಂದರೆ ವ್ಯಾಪಾರಿಗಳು ಮಾಂಸಕ್ಕಾಗಿ ಕುರಿ, ಮೇಕೆಗಳನ್ನು ಕೊಳ್ಳಲು ಹೊರ ಜಿಲ್ಲೆಗಳಿಂದಲೂ ಬರುತ್ತಾರೆ. ಕಲ್ಲೂರು ಸಂತೆ ಕುರಿ, ಮೇಕೆಗಳ ವ್ಯಾಪಾರಕ್ಕೆ ಸೀಮಿತವಾಗದೆ, ರೇಷ್ಮೆ ಸೀರೆಗಳಿಗೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ.
ತಾಲ್ಲೂಕಿನ ಗಡಿಯ ಈ ಗ್ರಾಮ ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದರೂ, ಗುಬ್ಬಿ ತಾಲ್ಲೂಕು ಆಡಳಿತ ವ್ಯಾಪ್ತಿಯಲ್ಲಿಯೇ ಇದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮಲತಾಯಿ ಧೋರಣೆಯಿಂದಾಗಿ ಅಭಿವೃದ್ಧಿ ಮರಿಚಿಕೆಯಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ಜಿಲ್ಲೆಯಲ್ಲಿಯೇ ಹೆಚ್ಚು ವಹಿವಾಟು ನಡೆಯುವ ಗ್ರಾಮವಾಗಿದ್ದರೂ ಮೂಲ ಸೌಕರ್ಯಗಳಿಲ್ಲದೆ ನಲುಗುತ್ತಿದೆ. ಮಳೆ ಬಂದಾಗ ವ್ಯಾಪಾರಿಗಳ ಸ್ಥಿತಿಯಂತೂ ಹೇಳತೀರದು. ಸಂತೆ ನಡೆಯುವ ಜಾಗದಲ್ಲಿ ಗುಂಡಿಗಳು ಬಿದ್ದಿದ್ದು, ನೀರು ನಿಲ್ಲುತ್ತಿದೆ. ಇದರಿಂದ ವ್ಯಾಪಾರಿಗಳು ನೀರಿನಲ್ಲಿಯೇ ನಿಂತು ವ್ಯವಹಾರ ಮಾಡುವಂತಾಗುತ್ತಿದೆ. ಇಂತಹ ಅನಾನುಕೂಲ ಪರಿಸ್ಥಿತಿಯಿಂದಾಗಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.
ಗ್ರಾಮ ಪಂಚಾಯಿತಿಯಿಂದ ಸಂತೆ ಮೈದಾನದಲ್ಲಿ ಸುಂಕ ವಸೂಲಿ ಮಾಡಲು ವರ್ಷಕ್ಕೊಮ್ಮೆ ಹರಾಜು ಮಾಡಲಾಗುತ್ತಿದೆ. ಅದರಿಂದ ಬಂದ ಹಣದಲ್ಲಿ ಸಂತೆ ಮೈದಾನ ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತಿತ್ತು. ಆದರೆ ಸಂಬಂಧಿಸಿದವರು ಗಮನಹರಿಸದೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ತೊಂದರೆಗೆ ಸಿಲುಕುವಂತಾಗಿದೆ ಎಂದು ಸ್ಥಳೀಯ ವಾಸು ಬೇಸರ ವ್ಯಕ್ತಪಡಿಸಿದ್ದಾರೆ.
ಸಂತೆಯ ದಿನಗಳಂದು ದೂರದಿಂದ ಬರುವ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಶೌಚಾಲಯ ನಿರ್ಮಾಣದ ಅಗತ್ಯವಿದೆ. ಸಂತೆಗೆ ಬರುವ ಮಹಿಳಾ ವ್ಯಾಪಾರಿಗಳ ಸ್ಥಿತಿ ಹೇಳತೀರದಾಗಿದೆ. ಗ್ರಾಮ ಪಂಚಾಯಿತಿಯವರು ಕೇವಲ ಸುಂಕ ವಸೂಲಿ ಮಾಡಿದರೆ ಸಾಲದು. ಅಗತ್ಯ ಸೌಕರ್ಯ ಒದಗಿಸುವತ್ತಲೂ ಗಮನ ಹರಿಸಬೇಕು ಎನ್ನುವುದು ಮಹಿಳಾ ವ್ಯಾಪಾರಿಗಳ ಒತ್ತಾಯ.
ಹಬ್ಬದ ಸಂದರ್ಭಗಳಲ್ಲಿ ಕುರಿ, ಮೇಕೆಗಳ ವ್ಯಾಪಾರ ಹೆಚ್ಚಾಗುವುದರಿಂದ ವಾಹನ ಸಂಚಾರ ಸಾಧ್ಯವಾಗದೆ ದಟ್ಟಣೆ ಹೆಚ್ಚುತ್ತದೆ. ತೆಂಗಿನಕಾಯಿ ವ್ಯಾಪಾರದಿಂದ ಪ್ರಾರಂಭವಾಗುವ ಗುರುವಾರದ ಸಂತೆ, ಕುರಿ, ಮೇಕೆ ಅನಂತರ ತರಕಾರಿ, ದವಸ, ಧಾನ್ಯಗಳ ವ್ಯಾಪಾರ ನಡೆಯುವುದು. ಬಿಸಿಲು ಹಾಗೂ ಮಳೆಯಿಂದ ರಕ್ಷಣೆಗೆ ಯಾವುದೇ ಸೌಕರ್ಯಗಳನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಒದಗಿಸದಿರುವುದು ಅನ್ಯಾಯ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.
ಕಲ್ಲೂರು ಸಂತೆಯ ಅವ್ಯವಸ್ಥೆ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು ಹಾಗೂ ಸಂಸದರ ಗಮನದಲ್ಲಿದ್ದರೂ ಅಗತ್ಯ ಕ್ರಮಕ್ಕೆ ಮುಂದಾಗದಿರುವುದು ದುರಾದೃಷ್ಟಕರ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮಾತ್ರ ಅಭಿವೃದ್ಧಿ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಚುನಾವಣೆಯ ನಂತರ ಅಭಿವೃದ್ಧಿ ಮರೆತು ರಾಜಕೀಯದಲ್ಲಿ ತೊಡಗುತ್ತಿದ್ದಾರೆ. ಪರಿಸ್ಥಿತಿ ಅರಿತು ಸಂಬಂಧಿಸಿದವರು ಮೂಲಸೌಕರ್ಯ ಒದಗಿಸಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ಸಾರ್ವಜನಿಕರು.
ಜನರು ಏನಂದರು ಕಲ್ಲೂರು ಉತ್ತಮ ವ್ಯಾಪಾರ ಕೇಂದ್ರವಾಗಿದ್ದರೂ ಮೂಲ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಜನಪ್ರತಿನಿಧಿಗಳು ಗಮನಹರಿಸಿ ಅಗತ್ಯ ಸೌಕರ್ಯ ಕಲ್ಪಿಸಿ ಕೊಟ್ಟಲ್ಲಿ ರಾಜ್ಯದಲ್ಲಿಯೇ ಉತ್ತಮ ವ್ಯಾಪಾರ ಕೇಂದ್ರವಾಗಿ ಬೆಳೆಯುವುದು.ವೆಂಕಟೇಶ್, ಗ್ರಾಮಸ್ಥ
ಸಂತೆ ವ್ಯಾಪಾರದಿಂದ ಹೆಚ್ಚು ಸುಂಕ ವಸೂಲಿಯಾಗುತ್ತಿದ್ದರೂ, ಗ್ರಾಮ ಪಂಚಾಯಿತಿಯವರು ಅಗತ್ಯ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ವ್ಯಾಪಾರಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಟ್ಟಲ್ಲಿ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಆದಾಯದ ಮೂಲವಾಗುತ್ತದೆ.ಎಜಾದ್ ಪಾಷ, ವ್ಯಾಪಾರಿ
ಕಲ್ಲೂರು ಸಂತೆ ಮೈದಾನದ ಮೂಲಕ ಹಾದುಹೋಗಿರುವ ಯಡೆಯೂರು ರಸ್ತೆ ಹಾಗೂ ಮೈಸೂರು ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ವಾಹನ ಚಲಾಯಿಸುವುದು ಕಷ್ಟವಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಗರ್ಭಿಣಿಯರು, ಹಿರಿಯ ನಾಗರಿಕರ ಹಾಗೂ ರೋಗಿಗಳ ಪಾಡು ಹೇಳತೀರದಾಗಿದೆ. ತಕ್ಷಣ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು.ಹೇಮಂತ್, ಆಟೊ ಚಾಲಕ
ಕುರಿ ಮೇಕೆ ವ್ಯಾಪಾರದಲ್ಲಿ ಬದುಕು ಕಟ್ಟಿಕೊಂಡಿರುವ ಅನೇಕ ಸ್ಥಳೀಯರಿಗೆ ವ್ಯಾಪಾರ ಇಲ್ಲವಾದಲ್ಲಿ ತೊಂದರೆ ಉಂಟಾಗುವುದು. ಅಗತ್ಯ ಸೌಕರ್ಯ ಒದಗಿಸಿದಲ್ಲಿ ದೂರದ ವ್ಯಾಪಾರಿಗಳು ಬಂದು ವಹಿವಾಟು ಹೆಚ್ಚಾಗುವ ಜೊತೆಗೆ ಗ್ರಾಮ ಪಂಚಾಯಿತಿಗೂ ಉತ್ತಮ ಆದಾಯದ ಮೂಲವಾಗುವುದು.ನಾಗರಾಜು, ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.