ADVERTISEMENT

ರಾಜ್ಯೋತ್ಸವ ಪ್ರಶಸ್ತಿ: ತುಮಕೂರು ಜಿಲ್ಲೆಗೆ ಎರಡು ಗರಿ

ಹಿರಿಯ ಛಾಯಾಗ್ರಹಕ ತಿಪಟೂರಿನ ಬಿ.ಎಸ್‌.ಬಸವರಾಜು ಮತ್ತು ವಾಲಿಬಾಲ್ ತರಬೇತುದಾರ ಎಚ್‌.ಬಿ.ನಂಜೇಗೌಡ ಅವರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 11:35 IST
Last Updated 28 ಅಕ್ಟೋಬರ್ 2020, 11:35 IST
ಬಿ.ಎಸ್.ಬಸವರಾಜು ಮತ್ತು ಎಚ್‌.ಬಿ.ನಂಜೇಗೌಡ
ಬಿ.ಎಸ್.ಬಸವರಾಜು ಮತ್ತು ಎಚ್‌.ಬಿ.ನಂಜೇಗೌಡ   

ತುಮಕೂರು: ಚಲನಚಿತ್ರ ಕ್ಷೇತ್ರದಲ್ಲಿನ ಸಾಧನೆಗಾಗಿ ಹಿರಿಯ ಛಾಯಾಗ್ರಾಹಕ ತಿಪಟೂರಿನ ಬಿ.ಎಸ್.ಬಸವರಾಜು ಹಾಗೂ ಕ್ರೀಡಾ ಕ್ಷೇತ್ರದಲ್ಲಿನ (ವಾಲಿಬಾಲ್ ತರಬೇತಿ) ಸಾಧನೆಗಾಗಿ ಗುಬ್ಬಿ ತಾಲ್ಲೂಕಿನ ಕಲ್ಲೂರು ಕ್ರಾಸ್ ಬಳಿಯ ಕುಣಾಘಟ್ಟದ ನಿವಾಸಿ ಎಚ್‌.ಬಿ.ನಂಜೇಗೌಡ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಇಬ್ಬರು ಸಾಧಕರು ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.

ಕ್ಯಾಮೆರಾ ಕಣ್ಣು: 55 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಕೆಲಸದಲ್ಲಿ ತೊಡಗಿರುವ ಬಸವರಾಜು ಅವರು 120ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ADVERTISEMENT

ಬಸವರಾಜು ಅವರು ಮೊದಲಿಗೆ ಒರಿಯಾ ಭಾಷೆಯ ರಘುನಾಥ್ ಅವರ ನಿರ್ದೇಶನ ‘ಹೀರಾ ಮೋತಿ ಔರ್ ಮಾಣಿಕ್ಯ’ ಸಿನಿಮಾದಲ್ಲಿ ಕೆಲಸ ಮಾಡಿದರು. ಇದು ಅವರು ಪೂರ್ಣ ಪ್ರಮಾಣದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಚಿತ್ರ. ಅಲ್ಲಿಂದ ತಮಿಳು ಸಿನಿಮಾಗಳತ್ತ ಮುಖ ಮಾಡಿದರು. ಆ ನಂತರ ಕನ್ನಡ ಸಿನಿಮಾಕ್ಕೆ ಬಂದರು. ‘ಅಂಧದ ಅರಮನೆ’ ಅವರು ತೊಡಗಿದ ಮೊದಲ ಕನ್ನಡ ಚಿತ್ರ.

1968–69ರಲ್ಲಿ ಎಂಟತ್ತು ಜನರು ಸೇರಿ ‘ಊರ್ವಶಿ’ ಸಿನಿಮಾವನ್ನು ನಿರ್ಮಿಸಿದರು. ಪುಟ್ಟಣ್ಣ ಕಣಗಾಲ್ ಅವರ ‘ಮಾನಸ ಸರೋವರ’, ‘ಧರಣಿ ಮಂಡಲ ಮಧ್ಯದೊಳಗೆ’, ‘ಅಮೃತಗಳಿಗೆ’ ಸಿನಿಮಾಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿದರು. ‘ಬೂತಯ್ಯನ ಮಗ ಅಯ್ಯು’ ಅವರಿಗೆ ಹೆಚ್ಚಿನ ಮನ್ನಣೆ ತಂದುಕೊಟ್ಟಿತು. ‘ಉಪಾಸನೆ’, ‘ಪುಟ್ಟ ಹೆಂಡ್ತಿ’, ‘ಕಾವ್ಯ’, ‘ರಾವಣ ರಾಜ್ಯ’, ‘ನೆನಪಿನ ದೋಣಿ’ ‘ನನ್ನ ಗೋಪಾಲ’ ಇವು ಅವರು ಛಾಯಾಗ್ರಹಕರಾಗಿ ಕೆಲಸ ಮಾಡಿದ ಪ್ರಮುಖ ಚಿತ್ರಗಳು. ವಿ.ಕೆ.ರಾಮಮೂರ್ತಿ, ಕೂಡ್ಲು ರಾಮಕೃಷ್ಣ, ಎ.ಟಿ.ರಘು ಹೀಗೆ ಹಲವು ನಿರ್ದೇಶಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಋತ್ವಿಕ್ ಸಿಂಹ ಅವರ ರಸಋಷಿ ಕುವೆಂಪು ಅವರು ಛಾಯಾಗ್ರಹಕರಾಗಿ ಕೆಲಸ ಮಾಡಿದ ಕೊನೆಯ ಸಿನಿಮಾ. ಜೀವಮಾನದ ಸಾಧನೆಗಾಗಿ ಅವರಿಗೆ ರಾಜ್ಯ ಸರ್ಕಾರ ನೀಡುವ ಡಾ.ವಿಷ್ಣುವರ್ಧನ್ ಪ್ರಶಸ್ತಿ ಸಂದಿದೆ.

ಹಲವರ ರೂಪಿಸಿದ ಗುರು: ಸಾವಿರಾರು ವಾಲಿಬಾಲ್ ಕ್ರೀಡಾಪಟುಗಳಿಗೆ ಎಚ್‌.ಬಿ.ನಂಜೇಗೌಡ ಅವರು ತರಬೇತುದಾರರಾಗಿದ್ದಾರೆ. ಅವರ ಬಹಳಷ್ಟು ಶಿಷ್ಯರು ಏಕಲವ್ಯ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

1978ರಿಂದ 94ರವರೆಗೆ ಅವರು ವಾಲಿಬಾಲ್ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಟಿ.ಬಿ.ಸತೀಶ್, ರವೀಂದ್ರ ಹೀಗೆ ಹಲವು ಮಂದಿ ನಂಜೇಗೌಡ ಅವರ ಶಿಷ್ಯರು ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಂತರರಾಷ್ಟ್ರೀಯ ವಾಲಿಬಾಲ್ ಪಟುಗಳಾದ ಬಾಲಜಿ ಪ್ರಭು, ಮಂಜುನಾಥ್ ಬಾಗನಕೊಪ್ಪ, ನಾಗರಾಜ ಹೆಗ್ಗಡೆ ಹೀಗೆ ಹಲವು ಮಂದಿ ಶಿಷ್ಯರು ಇದ್ದಾರೆ.

ಯುವಜನ ಮತ್ತು ಸೇವಾ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ನಂಜೇಗೌಡ ನಿವೃತ್ತರಾಗಿದ್ದಾರೆ. ನಂತರ ತುಮಕೂರು, ಗುಬ್ಬಿ, ಕಲ್ಲೂರು, ನಿಟ್ಟೂರಿನಲ್ಲಿ ನಡೆಯುವ ವಾಲಿಬಾಲ್ ಪಂದ್ಯಾವಳಿಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡುತ್ತಿದ್ದಾರೆ. 1994ರಲ್ಲಿ ದಸರಾ ಕ್ರೀಡಾ ಪ್ರಶಸ್ತಿಗೂ ನಂಜೇಗೌಡ ಅವರು ಪುರಸ್ಕೃತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.