ADVERTISEMENT

ಗುಬ್ಬಿ ಕ್ಷೇತ್ರ ಸ್ಥಿತಿ – ಗತಿ| ಶ್ರೀನಿವಾಸ್ ನಿರ್ಧಾರದ ಮೇಲೆ ಚಿತ್ರಣ ಬದಲು

ಪ್ರತಿಷ್ಠೆ ಕಣವಾದ ಗುಬ್ಬಿ; ಬೀಸುತ್ತಿದೆ ಬದಲಾವಣೆ ಗಾಳಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 5:59 IST
Last Updated 21 ಫೆಬ್ರುವರಿ 2023, 5:59 IST
ಗುಬ್ಬಿ ವಿಧಾನಸಭಾ ಕ್ಷೇತ್ರ
ಗುಬ್ಬಿ ವಿಧಾನಸಭಾ ಕ್ಷೇತ್ರ   

ಗುಬ್ಬಿ: ಜಿಲ್ಲೆಯಲ್ಲೇ ಗುಬ್ಬಿ ವಿಧಾನಸಭಾ ಕ್ಷೇತ್ರ ಪ್ರತಿಷ್ಠಿತ ಕಣವಾಗಿದ್ದು, ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಯಾರು ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಕಾಣಿಸುತ್ತಿಲ್ಲ.

ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದ್ದರೆ, ಕಾಂಗ್ರೆಸ್, ಬಿಜೆಪಿಯಲ್ಲಿ ಗೊಂದಲ ಮುಂದುವರೆದಿದೆ. ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಡಬಾರದು ಎಂದು ಕಾಂಗ್ರೆಸ್ ಸ್ಥಳೀಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಇದರಿಂದ ವಿಚಲಿತರಾಗಿದ್ದಾರೆ. ಪಕ್ಷಾಂತರ ಮಾಡಬೇಕೆ? ಪಕ್ಷೇತರವಾಗಿ ಸ್ಪರ್ಧಿಸಬೇಕೆ? ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಬಜೆಟ್ ಅಧಿವೇಶನದ ನಂತರ ನಿರ್ಧಾರ ಕೈಗೊಳ್ಳಲಿದ್ದು, ನಂತರ ಕ್ಷೇತ್ರದ ಚಿತ್ರಣ ಹೊಸ ರೂಪ ಪಡೆದುಕೊಳ್ಳಲಿದೆ.

ಶ್ರೀನಿವಾಸ್ ಮೊದಲಿಗೆ ಸ್ವತಂತ್ರವಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದು, ನಂತರ ಜೆಡಿಎಸ್ ಸೇರಿ ಸತತವಾಗಿ 3 ಬಾರಿ ಆಯ್ಕೆಯಾಗಿದ್ದರು. ಆ ಮೂಲಕ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು ಜೆಡಿಎಸ್ ಭದ್ರಕೋಟೆಯನ್ನಾಗಿ ಪರಿವರ್ತಿಸಿದ್ದರು.

ADVERTISEMENT

ಜೆಡಿಎಸ್‌ನಲ್ಲಿ ತಾಕಲಾಟ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬದ ವಿರುದ್ಧ ತೊಡೆತಟ್ಟಿದ ಪರಿಣಾಮ ಪಕ್ಷದಿಂದ ಹೊರಗೆ ಹಾಕಿಸಿಕೊಂಡಿದ್ದು, ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಲು ಶ್ರೀನಿವಾಸ್ ಕಸರತ್ತು ನಡೆಸುತ್ತಿದ್ದಾರೆ. ಹಿಂದೆ ದಳಪತಿಗಳ ಪ್ರಭಾವದಿಂದ ಒಕ್ಕಲಿಗರ ಮತಗಳು ಅವರ ಕೈ ಹಿಡಿದಿದ್ದವು. ಜತೆಗೆ ಇತರೆ ಸಮುದಾಯಗಳ ಮತ ಬ್ಯಾಂಕ್ ಗಟ್ಟಿ ಮಾಡಿಕೊಂಡು ಆಯ್ಕೆ ಆಗುತ್ತಾ ಬಂದಿದ್ದರು. ಪ್ರಸ್ತುತ ಜೆಡಿಎಸ್‌ನಿಂದ ಹೊರಗೆ ಬಂದಿರುವುದರಿಂದ ಒಕ್ಕಲಿಗರ ಮತಗಳು ಕೈ ಹಿಡಿಯಲಾರವು ಎಂಬ ಮಾತುಗಳು ಕೇಳಿ ಬರುತ್ತಿವೆ.

ಸತತ ನಾಲ್ಕು ಬಾರಿ ಶಾಸಕರಾಗಿದ್ದರೂ, ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳೇ ಅಭಿವೃದ್ಧಿಗೆ ಕನ್ನಡಿ ಹಿಡಿಯುತ್ತವೆ. ಸೋಲಿನ ಭೀತಿಯಿಂದಲೇ ಕುಕ್ಕರ್ ಹಂಚುತ್ತಿದ್ದಾರೆ ಎಂಬ ಆರೋಪ ಚರ್ಚೆಗೆ ಗ್ರಾಸವಾಗಿದೆ.

ದಳಪತಿಗೆ ಪ್ರತಿಷ್ಠೆ: ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ದಳಪತಿಗಳು ವರ್ಷದ ಹಿಂದೆಯೇ ಬಿ.ಎಸ್.ನಾಗರಾಜು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿ ಕ್ಷೇತ್ರದಲ್ಲಿ ರಂಗು ತುಂಬಿದ್ದಾರೆ. ಯಾವುದೇ ಕಾರಣಕ್ಕೂ ಶ್ರೀನಿವಾಸ್ ಗೆಲ್ಲಲು ಬಿಡಬಾರದು ಎಂದು ಪಣತೊಟ್ಟಂತೆ ಕಾಣುತ್ತಿದೆ. ನಾಗರಾಜು ಅವರಿಗೆ ಕ್ಷೇತ್ರದಲ್ಲಿ ಮತಗಳನ್ನು ಕ್ರೋಡೀಕರಿಸುವಷ್ಟು ವೈಯಕ್ತಿಕ ವರ್ಚಸ್ಸು ಇಲ್ಲದಿದ್ದರೂ, ದೇವೇಗೌಡ, ಕುಮಾರಸ್ವಾಮಿ ಹೆಸರಿನಲ್ಲಿ ಮತಯಾಚನೆ ನಡೆಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಗೊಂದಲ: ಶ್ರೀನಿವಾಸ್ ಕಾಂಗ್ರೆಸ್ ಸೇರಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಪಕ್ಷದ ಸ್ಥಳೀಯ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಪಕ್ಷ ಸೇರ್ಪಡೆಗೆ ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಜಿ.ಎಸ್.ಪ್ರಸನ್ನ ಕುಮಾರ್, ಹೊನ್ನಗಿರಿಗೌಡ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿರುವ ಪ್ರಸನ್ನಕುಮಾರ್ ಸಮುದಾಯದ ಮತಗಳ ಜೊತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಪಡೆದುಕೊಂಡರೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಟಿಕೆಟ್ ಪಡೆದೇ ತೀರಬೇಕೆಂಬ ಛಲದಿಂದ ಮುನ್ನಡೆದಿರುವುದು ಶ್ರೀನಿವಾಸ್ ಅವರಿಗೆ
ನುಂಗಲಾರದ ತುತ್ತಾಗಿದೆ.

ಬಿಜೆಪಿಯಲ್ಲಿ ಅವ್ಯವಸ್ಥೆ: ಮನೆಯೊಂದು ಮೂರು ಬಾಗಿಲು ಎಂಬ ಸ್ಥಿತಿಗೆ ಬಿಜೆಪಿ ತಲುಪಿದೆ. ತಾ.ಪಂ ಮಾಜಿ ಸದಸ್ಯ ಅ.ನಾ.ಲಿಂಗಪ್ಪ ಹೆಸರು ಇದಕ್ಕಿದ್ದಂತೆ ಮುನ್ನೆಲೆಗೆ ಬಂದಿರುವುದು ಕಾರ್ಯಕರ್ತರ ಅಚ್ಚರಿಗೆ ಕಾರಣವಾಗಿದೆ. ಜೆಡಿಎಸ್‌ನಿಂದಲೇ ರಾಜಕೀಯ ಅಸ್ತಿತ್ವ ಕಂಡುಕೊಂಡಿದ್ದ ಜಿ.ಎನ್.ಬೆಟ್ಟಸ್ವಾಮಿ ಬದಲಾದ ಸನ್ನಿವೇಶನದಲ್ಲಿ ಶ್ರೀನಿವಾಸ್ ವಿರುದ್ಧ ಒಮ್ಮೆ ಕೆಜೆಪಿಯಿಂದ, ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಟಿಕೆಟ್ ಸಿಕ್ಕರೆ ಅನುಕಂಪದ ಜತೆಗೆ ಹಿಂದುಳಿದ, ಲಿಂಗಾಯತ ಸಮುದಾಯ ಕೈಹಿಡಿಯುವ ಭರವಸೆಯಲ್ಲಿ ಇದ್ದಾರೆ. ಬಿಜೆಪಿಯಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಂಡಿರುವ ಜಿ.ಪಂ ಮಾಜಿ ಸದಸ್ಯ ಚಂದ್ರಶೇಖರಬಾಬು (ಗ್ಯಾಸ್ ಬಾಬು) ಸಹ ಆಕಾಂಕ್ಷಿಯಾಗಿದ್ದಾರೆ.

ಇವರೆಲ್ಲರ ನಡುವೆ ‘ಪ್ರಬಲ’ರಾಗಿರುವ ಎಸ್.ಡಿ.ದಿಲೀಪ್ ಕುಮಾರ್ ಬಿಜೆಪಿಯಿಂದ ಟಿಕೆಟ್ ಪಡೆದೇ ತೀರುತ್ತೇನೆ ಎಂಬ ಭರವಸೆಯಲ್ಲಿದ್ದಾರೆ. ಆದರೆ ದಿಲೀಪ್ ಸಾಮಾನ್ಯ ಜನರೊಡನೆ ಬೆರೆಯುವ ಸ್ವಭಾವ ಕಡಿಮೆ ಎನ್ನುವ ವಿಚಾರ ಪಕ್ಷ ಹಾಗೂ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ.

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಲಿಂಗಾಯತರೇ ಪ್ರಬಲರಾಗಿದ್ದು, ನಂತರದ ಸ್ಥಾನದಲ್ಲಿ ಒಕ್ಕಲಿಗ ಮತದಾರರಿದ್ದಾರೆ. ಈವರೆಗೂ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವರೇ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಯಾರೇ ಸ್ಪರ್ಧಿಸಿದರೂ ಪ್ರಬಲ ಸಮುದಾಯಗಳ ಜತೆಗೆ ಹಿಂದುಳಿದ, ಪರಿಶಿಷ್ಟರ ಮತಗಳನ್ನು ಪಡೆದುಕೊಂಡವರಿಗೆ ಗೆಲುವಿನ ಬಾಗಿಲು ತೆರೆಯಲಿದೆ.

ಮೂರು ಪಕ್ಷಗಳ ಹೋರಾಟ

ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕೆಂಬ ಪಣ ತೊಟ್ಟಿರುವ ಶಾಸಕರ ಪತ್ನಿ, ಪುತ್ರ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಉಡುಗೊರೆ ನೀಡುವ ಕೆಲಸವೂ ನಡೆದಿದೆ.

ಎರಡು ಬಾರಿ ಸೋತಿರುವ ಬಿಜೆಪಿಯ ಜಿ.ಎನ್.ಬೆಟ್ಟಸ್ವಾಮಿ, ಈ ಬಾರಿ ಅನುಕಂಪ ಗಿಟ್ಟಿಸುವ ಪ್ರಯತ್ನದಲ್ಲಿ ಇದ್ದಾರೆ. ಅಭಿವೃದ್ಧಿಯಲ್ಲಿ ಆಗಿರುವ ಹಿನ್ನಡೆಯನ್ನು ಜನರ ಮುಂದಿಡುತ್ತಿದ್ದಾರೆ. ಎಸ್.ಡಿ.ದಿಲೀಪ್ ಕುಮಾರ್ ಲಿಂಗಾಯತ ಸಮುದಾಯದ ಮತಗಳನ್ನೇ ನಂಬಿ ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಒಂದು ವೇಳೆ ಬಿಜೆಪಿಯಿಂದ ಬೆಟ್ಟಸ್ವಾಮಿ ಅವರಿಗೆ ಟಿಕೆಟ್ ಸಿಕ್ಕರೆ ಲಿಂಗಾಯತ ಸಮುದಾಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಒಬ್ಬರು ಕಣಕ್ಕಿಳಿಯುವ ಸೂಚನೆಗಳೂ ಕಂಡುಬರುತ್ತಿವೆ. ಜತೆಗೆ ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೊನೆ ಕ್ಷಣದಲ್ಲಿ ಚಿತ್ರಣ ಬದಲಾಗುವ ಸಾಧ್ಯತೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.