ಶಿರಾ: ಜಾನಪದ ಸೊಗಡನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗಲು ಶ್ರಮಿಸುತ್ತಿರುವ ಸಿದ್ದಪ್ಪ ಅವರಲ್ಲಿನ ಜಾನಪದ ಕಲೆಯನ್ನು (ಕಿನ್ನರಿ ಜೋಗಿ) ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದೆ.
ಶಿರಾ ತಾಲ್ಲೂಕಿನ ತಾವರೆಕೆರೆ ಗ್ರಾಮದ ಸಮೀಪದ ಜೋಗೀರಹಟ್ಟಿಯಲ್ಲಿ ವಾಸವಾಗಿರುವ ಹಂದಿಜೋಗಿ ವಂಶಸ್ಥ ಸಿದ್ದಪ್ಪ (65) ಊರೂರು ಅಲೆದಾಟ ನಡೆಸಿ ಕಿನ್ನರಿ ಪದಗಳನ್ನು ಹಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ಶೆಟ್ಟಪ್ಪ ಅವರ ಪುತ್ರ ಸಿದ್ದಪ್ಪ ಅವರು ತಾತ, ಮುತ್ತಾತನ ಕಾಲದಿಂದಲೂ ಬಂದಿರುವ ಕಲೆಯನ್ನು ಉಳಿಸಬೇಕು ಎನ್ನುವ ಹಂಬಲದಿಂದ ಜೋಗಿ ಪದಗಳು, ಅರ್ಜುನ್ ಜೋಗಿ ಹಾಡು, ಪಾಂಡವರ 12 ವರ್ಷಗಳ ವನವಾಸದ ಹಾಡು, ಅರಗಿನ ಪರ್ವ, ಜನಪದ ಸಂಸ್ಕೃತಿಯ ಗೀತೆಗಳನ್ನು ಹಾಡುತ್ತಾರೆ.
ತುಮಕೂರು, ಚಿತ್ರದುರ್ಗ ಜಿಲ್ಲೆ ಸೇರಿದಂತೆ ಪಕ್ಕದ ಆಂಧ್ರಪ್ರದೇಶದಲ್ಲಿ ಸಹ ಊರೂರು ಅಲೆದಾಟ ನಡೆಸುವ ಮೂಲಕ ಮನೆ ಮನೆಗಳಿಗೆ ತೆರಳಿ ಜಾನಪದ ಕಲೆ ಉಳಿಸುವ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕ ಜನಪದ ಅಕಾಡೆಮಿ ಇವರ ಸೇವೆಯನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿ ಜೊತೆಗೆ ₹ 25 ಸಾವಿರ, ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.
ಸ್ವಂತ ಮನೆ ಇಲ್ಲ: ಹಳ್ಳಿಯಿಂದ ಹಳ್ಳಿಗೆ ಅಲೆಯುವ ಹಂದಿ ಜೋಗಿ ಸಮುದಾಯದ ಇವರು ಹೋದ ಕಡೆಗಳಲ್ಲಿ ನೆಲೆ ಇಲ್ಲದೆ ಗುಡಿಸಲು ಅಥವಾ ಮರದಡಿಯಲ್ಲಿ ವಾಸವಿದ್ದು ಕಿನ್ನರಿ ಕಲೆ ಉಳಿಸುವ ಕೆಲಸ ಮಾಡುತ್ತಿದ್ದಾರೆ. ತಾಲ್ಲೂಕಿನ ತಾವರೆಕೆರೆ ಜೋಗೀರಹಟ್ಟಿಯಲ್ಲಿ ಸುಮಾರು 30 ವರ್ಷಗಳಿಂದ ಸುಮಾರು 30ರಿಂದ 40 ಕುಟುಂಬಗಳು ಟೆಂಟ್ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಇವರಲ್ಲಿ ಯಾರಿಗೂ ಸಹ ಸ್ವಂತ ಮನೆ ಇಲ್ಲ. ಸರ್ಕಾರ ಈಗಲಾದರೂ ಗುರುತಿಸಿ ಇವರಿಗೆ ಸ್ವಂತ ಸೂರು ಕಲ್ಪಿಸುವ ಕೆಲಸ ಮಾಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.