ತುಮಕೂರು: ಸಚಿವ ಸಂಪುಟದಿಂದ ‘ಅಹಿಂದ’ ನಾಯಕ ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು, ಅಭಿಮಾನಿಗಳು, ವಾಲ್ಮೀಕಿ ಸಮುದಾಯದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳು, ಸಮುದಾಯದ ಪ್ರಮುಖರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ರಾಜಣ್ಣ ಅವರಿಗೆ ಬೆಂಬಲ ವ್ಯಕ್ತಪಡಿಸಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಹೈ ಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದರು. ಸಚಿವ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವಂತೆ ಆಗ್ರಹಿಸಿದರು.
ತಪ್ಪು ಮಾಡಿದ್ದರೆ ರಾಜಣ್ಣ ಅವರಿಂದ ರಾಜೀನಾಮೆ ಪಡೆದುಕೊಳ್ಳಬಹುದಿತ್ತು. ಅದು ಬಿಟ್ಟು ಸಚಿವ ಸ್ಥಾನದಿಂದ ವಜಾ ಮಾಡಬಾರದಿತ್ತು. ವಜಾ ಮಾಡುವ ಮೂಲಕ ಅವಮಾನ ಮಾಡಲಾಗಿದೆ. ಕಾಂಗ್ರೆಸ್ ಹೈ ಕಮಾಂಡ್ ನಡೆ ಸರಿಯಾಗಿಲ್ಲ. ಹಿಂದುಳಿದ ವರ್ಗಗಳ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಸತ್ಯ ಹೇಳಿದರು ಎಂಬ ಒಂದೇ ಕಾರಣಕ್ಕೆ ಇಂತಹ ದೊಡ್ಡ ಶಿಕ್ಷೆ ಕೊಡುವ ಅಗತ್ಯವಿರಲಿಲ್ಲ. ಬುದ್ಧಿಮಾತು ಹೇಳಿ ಸರಿಪಡಿಸಬಹುದಿತ್ತು. ಈಗ ಆಗಿರುವ ತಪ್ಪು ಸರಿಪಡಿಸಲು ಮತ್ತೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಸೇರಿದ ಪ್ರತಿಭಟನಕಾರರು, ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋರಾಟಕ್ಕೆ ಚಾಲನೆ ನೀಡಿದರು. ಟೌನ್‌ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನಂತರ, ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಭೆಯಲ್ಲಿ ಮಾತನಾಡಿದ ಪ್ರಮುಖರು ಕಾಂಗ್ರೆಸ್ ಹೈ ಕಮಾಂಡ್ ನಡೆಯನ್ನು ಖಂಡಿಸಿದರು. ರಾಜಣ್ಣ ಅವರನ್ನು ವಜಾ ಮಾಡಿರುವುದು ಜಿಲ್ಲೆಯ ಅಹಿಂದ ವರ್ಗಕ್ಕೆ ತುಂಬಾ ನೋವಾಗಿದೆ. ಕಳೆದ ಐದು ದಶಕಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ 7 ಸ್ಥಾನ ಗೆಲ್ಲಲು ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದಾರೆ. ಪರಿಶಿಷ್ಟರು, ಅಹಿಂದ ವರ್ಗದವರಿಗೆ ನೆರವಾಗುತ್ತಾ ಬಂದಿದ್ದಾರೆ ಎಂದು ಹೇಳಿದರು.
ಮುಖಂಡರಾದ ಕಲ್ಲಹಳ್ಳಿ ದೇವರಾಜು, ಸಿಂಗದಹಳ್ಳಿ ರಾಜ್‍ಕುಮಾರ್, ಗಂಗಣ್ಣ, ಬಿ.ಬಿ.ವೆಂಕಟೇಗೌಡ, ಪ್ರತಾಪ್ ಮದಕರಿ, ಪುರುಷೋತ್ತಮ್, ಟಿ.ಪಿ.ಮಂಜುನಾಥ್, ಲಕ್ಷ್ಮಿನಾರಾಯಣ, ಕುಂದೂರು ತಿಮ್ಮಯ್ಯ, ಧನಿಯಕುಮಾರ್, ಬಿ.ಜಿ.ಕೃಷ್ಣಪ್ಪ, ಜಿ.ಜೆ.ರಾಜಣ್ಣ, ಮಾರುತಿ ಗಂಗಹನುಮಯ್ಯ, ನರಸೀಯಪ್ಪ, ಎಚ್.ಆರ್.ಹನುಮಂತರಾಯಪ್ಪ, ನಿಸಾರ್ ಅಹ್ಮದ್, ಕಿಡಿಗಣ್ಣಪ್ಪ, ಮಲ್ಲಸಂದ್ರ ಶಿವಣ್ಣ, ಮಿಡಿಗೇಶಿ ಮಲ್ಲಿಕಾರ್ಜುನಯ್ಯ, ಪಿ.ಮೂರ್ತಿ, ಜಿ.ಆರ್.ರವಿ, ನಾಗೇಶ್‍ಬಾಬು, ನಾರಾಯಣಗೌಡ, ತರಕಾರಿ ನಾಗರಾಜ್, ಟಿ.ವಿ.ಮಹಾಲಿಂಗಪ್ಪ, ರಾಮಚಂದ್ರಯ್ಯ, ಕೆಂಪಹನುಮಯ್ಯ, ಮಂಜೇಶ್, ಕುಪ್ಪೂರು ಶ್ರೀಧರ್, ಕುಂದೂರು ಮುರುಳಿ, ರಾಯಸಂದ್ರ ರವಿಕುಮಾರ್, ವೆಂಕಟಾಚಲ, ಶಾಂತಕುಮಾರ್, ಗುರುರಾಘವೇಂದ್ರ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.