ಕೊರಟಗೆರೆ: ತಾಲ್ಲೂಕಿನ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸ್ಥಳೀಯ ರೈತರಿಗೆ ಸಾಲ ನೀಡದೇ ಇದ್ದರೂ ಅವರ ಪಹಣಿಗಳಲ್ಲಿ ‘ಸಾಲ’ ಎಂದು ನಮೂದಾಗಿದೆ ಎಂದು ರೈತರು ಆರೋಪಿಸಿದರು. ವಾರ್ಷಿಕ ಸಭೆಯನ್ನು ರದ್ದು ಪಡಿಸಲಾಯಿತು.
ಕೋಳಾಲ ಹೋಬಳಿ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಸಭೆಗೆ ಸದಸ್ಯರಿಗೆ 15 ದಿನ ಮೊದಲೇ ಆಹ್ವಾನ ಪತ್ರಿಕೆ ನೀಡಬೇಕಿತ್ತು. ಆದರೆ ಸಂಘದ ಎರಡು ಬಣಗಳ ನಡುವಿನ ಭಿನ್ನಾಭಿಪ್ರಾಯ ಹಾಗೂ ಜಟಾಪಟಿಯಿಂದ ಸದಸ್ಯರಿಗೆ ಆಹ್ವಾನ ನೀಡದೆ ಸಭೆ ಕರೆಯಲಾಗಿದೆ ಎಂದು ಕೆಲ ಸದಸ್ಯರು ಹಾಗೂ ರೈತರು ಆರೋಪಿಸಿದರು. ಹಾಗಾಗಿ ಸಭೆ ರದ್ದು ಪಡಿಸಲಾಯಿತು.
ನಾಲ್ಕು ವರ್ಷದಿಂದ ಸಹಕಾರ ಸಂಘದಿಂದ ಯಾವುದೇ ಸಾಲ ಸೌಲಭ್ಯ ನೀಡಿಲ್ಲ. ಆದರೂ ರೈತರ ಪಹಣಿಯಲ್ಲಿ ‘ಸಾಲ’ ಎಂದು ಉಲ್ಲೇಖವಾಗಿದೆ. ಒಂದು ಚೀಲ ಗೊಬ್ಬರ ಕೂಡ ಮಾರಾಟ ಮಾಡಿಲ್ಲ ಎಂದು ರೈತರು ಸಭೆಯಲ್ಲಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಇದರ ಜೊತೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಸಂಘದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಬೇಜವಾಬ್ದಾರಿ ತೋರಿದ್ದಾರೆ. ಇದರಿಂದಾಗಿಯೇ ಸಭೆ ರದ್ದಾಗಲು ಕಾರಣ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬೋರಣ್ಣ ಮಾತನಾಡಿ, ‘ಸಬೆಗೆ ಸಂಘದ ಸದಸ್ಯರಿಗೆ ಆಹ್ವಾನ ನೀಡಿಲ್ಲ ಎಂದು ಸಭೆಯಲ್ಲಿ ತಿಳಿಸಲಾಗಿದೆ. ನನಗೂ ಯಾವುದೇ ಆಮಂತ್ರಣ ನೀಡಿಲ್ಲ. ಸಂಘದ ಆಡಳಿತ ಮಂಡಳಿ ರೈತರ ಪಹಣಿಯಲ್ಲಿ ಸಾಲ ಮಂಜೂರು ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿಂದೆ ಸಾಲ ನೀಡುವ ಸಂದರ್ಭದಲ್ಲಿ ಪಹಣಿಯಲ್ಲಿ ಸಾಲ ಮಂಜೂರು ಆಗಿದೆ ಎಂದು ಬಂದಿದ್ದು, ನಾನೇ ಖುದ್ದು ನಿಂತು ಉಲ್ಲೇಖ ತೆರವುಗೊಳಿಸಲಾಗುವುದು. ಸಭೆ ರದ್ದಾದ ವಿಷಯವನ್ನ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದರು.
ಸಂಘದ ಅಧ್ಯಕ್ಷ ಧನಂಜಯ ಮಾತನಾಡಿ, ನಮ್ಮ ಮನೆಯ ಸದಸ್ಯರಿಗೆ ಆರೋಗ್ಯದ ಸಮಸ್ಯೆ ಇರುವ ಕಾರಣ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ವಾರ್ಷಿಕ ಸಭೆ ಆಯೋಜನೆ ಮಾಡಲು ತಿಳಿಸಲಾಗಿತ್ತು. ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ದೂರಿದ್ದಾರೆ. ಆದ್ದರಿಂದ ಸಭೆ ಮುಂದೂಡಲಾಗಿದೆ ಎಂದರು.
ಗ್ರಾಪಂ ಸದಸ್ಯ ಹಾಗೂ ವಿಎಸ್ಎಸ್ಎನ್ ನಿರ್ದೇಶಕ ಮಂಜುನಾಥ್ ಮಾತನಾಡಿದರು. ಸಂಘದ ಸಿಇಒ ತಿಮ್ಮಯ್ಯ, ಉಪಾಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕರಾದ ಮತ್ತರಾಜು, ಪ್ರಕಾಶ್, ಮಂಜುನಾಥ್, ನವೀನ್‌ಕುಮಾರ್, ರಂಗದಾಸಯ್ಯ, ರಮೇಶ್, ನಲ್ಲಪ್ಪ, ಪಾರ್ವತಮ್ಮ, ಭಾಗ್ಯಮ್ಮ, ಕೃಷ್ಣಪ್ಪ, ಮುಖಂಡರಾದ ವೆಂಕಟಗೌಡ, ಮಂಜುನಾಥ್, ನರಸೇಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.