ADVERTISEMENT

ಕೊರಟಗೆರೆ: ಎಲ್ಲೆಡೆ ಕಳಪೆ ಕಾಮಗಾರಿಯದ್ದೇ ಸದ್ದು

ಅವೈಜ್ಞಾನಿಕ ಕಾಮಗಾರಿ: ಗುಣಮಟ್ಟವಿಲ್ಲದ ಪೈಪ್‌ ಬಳಕೆ: ಅನುಷ್ಠಾನ ಹಂತದಲ್ಲೇ ಮುಗ್ಗರಿಸಿದ ಯೋಜನೆ

ಎ.ಆರ್.ಚಿದಂಬರ
Published 14 ಆಗಸ್ಟ್ 2024, 7:02 IST
Last Updated 14 ಆಗಸ್ಟ್ 2024, 7:02 IST
ಚಿಕ್ಕಪಾಳ್ಯದಲ್ಲಿ ಕೊಳಾಯಿ ಅಳವಡಿಸಿರುವ ಸಿಮೆಂಟ್ ದಿಂಡು ಒಂದೇ ವಾರದಲ್ಲಿ ಬಿರುಕು ಬಿಟ್ಟಿದೆ
ಚಿಕ್ಕಪಾಳ್ಯದಲ್ಲಿ ಕೊಳಾಯಿ ಅಳವಡಿಸಿರುವ ಸಿಮೆಂಟ್ ದಿಂಡು ಒಂದೇ ವಾರದಲ್ಲಿ ಬಿರುಕು ಬಿಟ್ಟಿದೆ   

ಕೊರಟಗೆರೆ: ತಾಲ್ಲೂಕಿನಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಯೋಜನೆ ಅನುಷ್ಠಾನ ಪ್ರಾರಂಭದ ಹಂತದಲ್ಲೇ ಮುಗ್ಗರಿಸಿದೆ.

ಕಳಪೆ ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ಆರೋಪ ಬಂದಿದ್ದು, ಈ ಬಗ್ಗೆ ‘ಪ್ರಜಾವಾಣಿ’ ಈ ಹಿಂದೆ ಗಮನ ಸೆಳೆದಿತ್ತು. ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕಳಪೆ ಗುಣಮಟ್ಟದ ಪೈಪ್, ಸಿಮೆಂಟ್ ಗೋಡೆ, ಕಾಂಕ್ರಿಟ್ ಬದಲಾವಣೆ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ. ಸುದ್ದಿ ಪ್ರಕಟವಾದ ನಂತರ ಎಲ್ಲೆಲ್ಲಿ ಕಳಪೆ ಕಾಮಗಾರಿ ನಡೆದಿತ್ತೊ ಆ ಸ್ಥಳಗಳಿಗೆ ಖುದ್ದು ಅಧಿಕಾರಿಗಳೇ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿದ್ದಾರೆ. ಕಳಪೆ ಕಂಡುಬಂದಾಗ ಕೂಡಲೇ ಅದನ್ನು ಬದಲಾಯಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

ಕೆಲವೆಡೆ ಕಾಂಕ್ರಿಟ್ ರಸ್ತೆಗಳನ್ನು ಕಟರ್ ಮೂಲಕ ತೆಗೆಯದೆ ಜೆಸಿಬಿ ಬಳಸಿ ರಸ್ತೆ ಅಗೆಯಲಾಗಿದೆ. ಅಂತಹ ಕಡೆಗಳಲ್ಲಿ ಸದ್ಯಕ್ಕೆ ತೇಪೆ ಹಾಕುವ ಕೆಲಸವನ್ನೂ ಮಾಡಲಾಗಿದೆ. ತೇಪೆ ಹಾಕುವ ಭರದಲ್ಲಿ ಕೆಲವೆಡೆ ಗುಣಮಟ್ಟ ಕಾಯ್ದುಕೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ADVERTISEMENT

ನಿಯಮದ ಪ್ರಕಾರ 20 ಮನೆಗಳಿಗಿಂತ ಜಾಸ್ತಿ ಇರುವ ಗ್ರಾಮಗಳ ಮನೆ ಮನೆಗೆ ಕೊಳಯಿ ಅಳವಡಿಸಿ ನೀರು ಒದಗಿಸುವುದಾಗಿದೆ. ₹193 ಕೋಟಿ ವೆಚ್ಚದ ಕಾಮಗಾರಿಯಲ್ಲಿ ಶೇ 14ರಷ್ಟು ಹಣ ಈಗಾಗಲೇ ಬಳಕೆಯಾಗಿದೆ. ತಾಲ್ಲೂಕಿನ 337 ಹಳ್ಳಿಗಳು ಈ ಯೋಜನೆಗೆ ಒಳಪಟ್ಟಿವೆ. ಸುಮಾರು 280 ಹಳ್ಳಿಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಅದರಲ್ಲಿ 49 ಗ್ರಾಮಗಳಲ್ಲಿ ಈಗಾಗಲೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. 30 ಕಡೆಗಳಲ್ಲಿ ಕಾಮಗಾರಿ ಗುತ್ತಿಗೆ ಪಡೆದು ಕೆಲಸ ಪ್ರಾರಂಭಿಸದ ಕಾರಣಕ್ಕೆ ಗುತ್ತಿಗೆ ರದ್ದುಪಡಿಸಿ ಮರು ಗುತ್ತಿಗೆಗೆ ಆದೇಶಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಇಲಾಖೆಯಿಂದ ಕಾಮಗಾರಿ ಗುತ್ತಿಗೆ ಮೂಲಕ ನಡೆಯುತ್ತಿದೆ. ಆನ್‌ಲೈನ್ ಟೆಂಡರ್ ಮೂಲಕ ಗುತ್ತಿಗೆದಾರರು ಗುತ್ತಿಗೆ ಪಡೆದು ಕಾಮಗಾರಿ ಮಾಡುತ್ತಾರೆ. ಹಾಗಾಗಿ ಒಂದೊಂದು ಗ್ರಾಮದಲ್ಲೂ ಒಬ್ಬೊಬ್ಬ ಗುತ್ತಿಗೆದಾರರು ಕಾಮಗಾರಿ ಮಾಡುತ್ತಾರೆ. ಕೆಲವೆಡೆ ನಾಲ್ಕೈದು ಗ್ರಾಮದ ಗುತ್ತಿಗೆ ಪಡೆದು ಒಬ್ಬರೇ ಗುತ್ತಿಗೆದಾರರು ಕೆಲಸ ಮಾಡಿರುವುದು ಇದೆ.

ಕೆಲವೆಡೆ ಪೈಪ್‌ಗಳನ್ನು ಮಣ್ಣಿನ ಆಳಕ್ಕೆ ಹಾಕದೇ ಬೇಕಾಬಿಟ್ಟಿಯಾಗಿ ಪೈಪ್‌ಲೈನ್ ಅಳವಡಿಸಲಾಗಿದೆ. ಹಲವು ಗ್ರಾಮಗಳಲ್ಲಿ ಗುಣಮಟ್ಟದ ಪೈಪ್ ಹಾಗೂ ಸಾಮಗ್ರಿ ಬಳಸಿಲ್ಲ. ಕಳಪೆ ಗುಣಮಟ್ಟದ ಪೈಪ್ ಹಾಗೂ ಕೊಳಾಯಿ ಹಾಕಲು ನಿಲ್ಲಿಸಿರುವ ಸಿಮೆಂಟ್ ಗೋಡೆ, ಹಾಕಿದ ಕೆಲವೇ ದಿನಗಳಲ್ಲಿ ಹಾಳಾಗುತ್ತಿವೆ. ಕೆಲವೆಡೆ ಸಿಮೆಂಟ್ ಗೋಡೆ ಹಾಗೂ ಅದರ ಬುಡದಲ್ಲಿ ಹಾಕಲಾಗಿರುವ ಕಾಂಕ್ರಿಟ್ ಕೊಳಾಯಿಯಲ್ಲಿ ನೀರು ಬರುವ ಮುನ್ನವೇ ಹಾಳಾಗುತ್ತಿವೆ. ಹಲವೆಡೆ ಮನೆಗಳಲ್ಲಿ ವಿದ್ಯುತ್ ತಂತಿ ಎಳೆಯಲು ಬಳಸುವ ಮಾದರಿಯ ಪೈಪ್‌ಗಳನ್ನು ಹಾಕಲಾಗಿದೆ. ಮಣ್ಣಲ್ಲಿ ಸರಿಯಾಗಿ ಹುಗಿಯದ ಕಾರಣ ಕೆಲವೆಡೆ ಪೈಪ್ ಮಡಚಿಕೊಂಡು ಅಥವಾ ಒತ್ತಿಕೊಂಡು ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ನೀರು ಬಿಡುವ ಮುನ್ನವೇ ಹಾಳಾಗಿ ಹೋಗಿವೆ.

ಯೋಜನೆಯಡಿ ಅಳವಡಿಸುವ ಪೈಪ್‌ಲೈನ್ ಹಾಗೂ ಕೊಳಾಯಿ ಕನಿಷ್ಠ 35 ವರ್ಷ ಬಾಳಿಕೆ ಬರಬೇಕು ಎಂಬ ನಿಯಮವಿದೆ. ಆದರೆ ಈಗಾಗಲೇ ಅಳವಡಿಸಿರುವ ಪೈಪ್‌ಲೈನ್ ಹಾಗೂ ಕಾಮಗಾರಿ ಕನಿಷ್ಠ ಎರಡು-ಮೂರು ವರ್ಷ ಬಾಳಿಕೆ ಬಂದರೆ ಹೆಚ್ಚು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತಾಲ್ಲೂಕಿನ ಗಡಿಭಾಗದ ಕೆಲವು ಗ್ರಾಮಗಳಲ್ಲಿ ತರಾತುರಿಯಲ್ಲಿ ಪೈಪ್‌ಲೈನ್‌ ಹಾಕಲಾಗಿದೆ. 80ಕ್ಕೂ ಹೆಚ್ಚು ಮನೆಗಳಿರುವ ತಾಲ್ಲೂಕಿನ ಗಡಿಭಾಗದ ಚಿಕ್ಕಪಾಳ್ಯ ಗ್ರಾಮದಲ್ಲಿ ಯೋಜನೆ ಕಳಪೆ ಮಾಡಲಾಗಿದೆ ಎಂಬ ಬಗ್ಗೆ ‘ಪ್ರಜಾವಾಣಿ’ ಈ ಹಿಂದೆ ಗಮನ ಸೆಳೆದ ಕಾರಣಕ್ಕೆ ಗ್ರಾಮದಲ್ಲಿ ಪೈಪ್‌ಲೈನ್ ಬದಲಾವಣೆಗೆ ಸೂಚಿಸಲಾಗಿದೆ.

ತಾಲ್ಲೂಕಿನ 280 ಗ್ರಾಮದಲ್ಲಿ ಕಾಮಗಾರಿ ನಡೆದಿದೆ. ಅದರಲ್ಲಿ ಕೆಲವು ಗ್ರಾಮಗಳಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ. ಕಳಪೆ ಸಾಮಗ್ರಿ ಬಳಸಿ ಯೋಜನೆ ಪೂರ್ಣಗೊಳಿ‌ಸಲಾಗಿದೆ. ಕಳಪೆ ಇರುವೆಡೆಗಳಲ್ಲಿ ಮರು ಕಾಮಗಾರಿಗೆ ಸೂಚಿಸಲಾಗಿದೆ.

ವಡ್ಡಗೆರೆಯಲ್ಲಿ ರಸ್ತೆ ಅಗೆದು ಪೈಪ್‌ಲೈನ್ ಬೇಕಾಬಿಟ್ಟಿಯಾಗಿ ಬಿಡಲಾಗಿದೆ 
ಬಹುತೇಕ ಕಡೆಗಳಲ್ಲಿ ನೀರಿನ ಕೊಳಾಯಿಗೆ ಅಳವಡಿಸಲು ಬಳಸುತ್ತಿರುವ ಸಿಮೆಂಟ್ ದಿಂಡು
ನಲ್ಲಿ ಹಾಕಲು ನಮ್ಮ ಕೇರಿಯ ರಸ್ತೆಯನ್ನೇ ಹಾಳು ಮಾಡಿದ್ದಾರೆ. ಇದರಿಂದ ಮನೆ ಮುಂದೆ ಓಡಾಡುವುದು ಕಷ್ಟವಾಗಿದೆ. ರಸ್ತೆ ಹಾಳುಗೆಡವಿರುವ ಕಾರಣ ದ್ವಿಚಕ್ರ ವಾಹನ ನಮ್ಮ ಮನೆ ಮುಂದೆ ಬರದಂತಾಗಿದೆ.
ಚಿಕ್ಕಣ್ಣ ಗ್ರಾಮಸ್ಥ ಚಿಕ್ಕಪಾಳ್ಯ
ಯೋಜನೆ ಉದ್ದೇಶ ಚೆನ್ನಾಗಿದೆ. ಆದರೆ ಕೆಲವೆಡೆ ಬೇಕಾಬಿಟ್ಟಿ ಕಾಮಗಾರಿ ಮಾಡಿ ಮುಗಿಸಲಾಗಿದೆ. ಜೆಸಿಬಿ ಬಳಸುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಇದೇ ಯೋಜನೆ ಮುಂದೊಂದು ದಿನ ಬಹುಕೋಟಿ ಹಗರಣವಾದರೂ ಆಶ್ಚರ್ಯ ಇಲ್ಲ ಎಂಬಂತೆ ಕಾಮಗಾರಿಗಳು ನಡೆಯುತ್ತಿವೆ.
ಮಹಮದ್ ಕೊರಟಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.