
ಕೊರಟಗೆರೆ: ಪಟ್ಟಣದ ನಾಲ್ಕನೇ ವಾರ್ಡ್‌ನ ಬಡ ಕುಟುಂಬದ ಕೆ.ಎಸ್. ಲಕ್ಷ್ಮೀಶ 26ನೇ ವಯಸ್ಸಿನಲ್ಲೇ ಸಿವಿಲ್ ನ್ಯಾಯಾಧೀಶರಾಗಿದ್ದಾರೆ.
ಯಶೋದಮ್ಮ ಮತ್ತು ಶ್ರೀನಿವಾಸ ದಂಪತಿ ಪುತ್ರ ಕೆ.ಎಸ್. ಲಕ್ಷ್ಮೀಶ 25ನೇ ರ‍್ಯಾಂಕ್ ಪಡೆದು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಲಕ್ಷ್ಮೀಶ ಅವರ ತಾಯಿ ಬೀಡಿ ಸುತ್ತುವ ಕೆಲಸ ಮಾಡಿದರೆ, ತಂದೆ ಇರುವ ಅಲ್ಪ ಜಮೀನಿನಲ್ಲಿ ಕೃಷಿ ಹಾಗೂ ಕೂಲಿ ಕೆಲಸ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಸಂತೆಗಳಲ್ಲಿ ತರಕಾರಿ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಲಕ್ಷ್ಮೀಶ ಶಾಲಾ ದಿನಗಳಲ್ಲೇ ಅಮ್ಮನ ಜೊತೆ ಬೀಡಿ ಸುತ್ತುವುದು, ಪೊಟ್ಟಣ ಕಟ್ಟುವುದು, ಅಪ್ಪನೊಂದಿಗೆ ಹೊಲದಲ್ಲಿ ಕೃಷಿ ಚಟುವಟಿಕೆಗಳಿಗೆ ಕೈಜೋಡಿಸುವುದು ಹಾಗೂ ಸಂತೆ ದಿನಗಳಲ್ಲಿ ತರಕಾರಿ ಮೂಟೆ ಹೊತ್ತು ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದರು.
ವಿಜ್ಞಾನದಿಂದ ಕಾನೂನಿಗೆ: ಪಟ್ಟಣದಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಅವರು ತುಮಕೂರಿನಲ್ಲಿ ಪದವಿ ವಿಜ್ಞಾನ ಶಿಕ್ಷಣಕ್ಕೆ ಸೇರ್ಪಡೆಯಾದರು. ಆದರೆ ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ ವಿದ್ಯಾಭ್ಯಾಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಬೆಂಗಳೂರಿನಲ್ಲಿ ಮಾರ್ಷಲ್ ಕೆಲಸಕ್ಕೆ ಸೇರಿದರು. ನಾಲ್ಕು ತಿಂಗಳ ಬಳಿಕ ಎಲ್‌ಎಲ್‌ಬಿ ಪದವಿಗೆ ಸೇರ್ಪಡೆಗೊಂಡರು. ಸ್ನಾತಕೋತ್ತರ ಕಾನೂನು ಪದವಿ ಓದುತ್ತಿದ್ದ ವೇಳೆಯೇ ನ್ಯಾಯಾಧೀಶ ಹುದ್ದೆಯ ಪರೀಕ್ಷೆ ಬರೆದು 25ನೇ ರ‍್ಯಾಂಕ್ ಪಡೆದಿದ್ದಾರೆ.
‘ನ್ಯಾಯಾಧೀಶ ಎಚ್.ಆರ್. ರವಿಕುಮಾರ್ ಮಾರ್ಗದರ್ಶನ ಹಾಗೂ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ನೀಡಿದ ಕೋಚಿಂಗ್ ನೆರವಾಯಿತು’ ಎನ್ನುತ್ತಾರೆ ಲಕ್ಷ್ಮೀಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.