
ಕೊರಟಗೆರೆ: ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಭೂ ಮಾಫಿಯಾ ಚಟುವಟಿಕೆ ಹೆಚ್ಚಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಖರಾಬು, ಗೋಮಾಳ ಮತ್ತು ಖಾಲಿ ಜಾಗ ಮಣ್ಣು ಗುರಿಯಾಗಿಸಿಕೊಂಡು ರಾತ್ರೋರಾತ್ರಿ ಮಣ್ಣು ಸಾಗಾಟ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ತಾಲ್ಲೂಕಿನ ಗಂಟಿಗಾನಹಳ್ಳಿ ಸರ್ವೆ ನಂ.26ರ ಸುಮಾರು 24.4 ಎಕರೆ ಸರ್ಕಾರಿ ಖರಾಬು ಮತ್ತು ಗೋಮಾಳ ಜಾಗವನ್ನು ಭಾರೀ ಪ್ರಮಾಣದಲ್ಲಿ ಅಗೆದು ಹಾಕಲಾಗಿದೆ. ಸಾವಿರಾರು ಲೋಡ್ ಮಣ್ಣು ಸಾಗಾಟವಾಗಿದೆ. ಈ ಜಾಗದಲ್ಲಿ ಆಳವಾದ ಕಂದಕಗಳು ನಿರ್ಮಾಣಗೊಂಡಿವೆ. ಮುಂಗಾರು ಮಳೆ ಸಮಯದಲ್ಲಿ ಈ ಕಂದಕಗಳು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.
ಸ್ಥಳೀಯರೊಬ್ಬರು ಮಾತನಾಡಿ, ‘ರಾತ್ರಿ 10ರಿಂದ ಬೆಳಗ್ಗೆ 4ಗಂಟೆವರೆಗೆ ಟಿಪ್ಪರ್ ಲಾರಿಗಳ ಸಂಚಾರ ಹೆಚ್ಚಿರುತ್ತದೆ. ಹಗಲಿನ ವೇಳೆಯಲ್ಲೂ ಕೆಲವೊಮ್ಮೆ ಮಣ್ಣು ಸಾಗಣೆ ನಡೆಯುತ್ತದೆ. ಆದರೆ, ಯಾವುದೇ ಅಧಿಕಾರಿಗಳು ಈ ಬಗ್ಗೆ ಕೇಳುತ್ತಿಲ್ಲ’ ಎಂದು ಆರೋಪಿಸಿದರು.
ಹೆಸರು ಹೇಳಲು ಇಚ್ಛಿಸದ ರೈತರೊಬ್ಬರು, ‘ನಮ್ಮ ಗ್ರಾಮದ ಗೋಮಾಳ ಜಾಗವನ್ನೇ ಕಂದಕ ಮಾಡಿ ಬಿಟ್ಟಿದ್ದಾರೆ. ಮಳೆ ಬಂದರೆ ನೀರು ತುಂಬಿ ಮಕ್ಕಳು, ಜಾನುವಾರುಗಳಿಗೆ ಅಪಾಯವಾಗುತ್ತದೆ. ದೂರು ನೀಡಿದರೂ ಯಾರೂ ಗಮನಹರಿಸುತ್ತಿಲ್ಲ’ ಎಂದರು.
ಲೇಔಟ್‌ಗಳಿಗೆ ಸರ್ಕಾರಿ ಮಣ್ಣು ಸಾಗಾಟ: ವಿವಿಧೆಡೆ ನಿರ್ಮಾಣ ಹಂತದಲ್ಲಿರುವ ಖಾಸಗಿ ಲೇಔಟ್‌ಗಳಿಗೆ ತಾಲ್ಲೂಕಿನ ಹೊನ್ನಾರನಹಳ್ಳಿ ಸೇರಿದಂತೆ ಹೊಳವನಹಳ್ಳಿ ಹೋಬಳಿ ಸರ್ಕಾರಿ ಜಮೀನುಗಳಿಂದ ಮಣ್ಣು ಸಾಗಿಸಲಾಗುತ್ತಿದೆ ಎಂಬ ಅನುಮಾನ ಇದೆ.
ಕಲ್ಲುಗಣಿಗಾರಿಕೆಗೂ ಕಡಿವಾಣ ಇಲ್ಲ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕಲ್ಲು ಗಣಿಗಾರಿಕೆ ಕೂಡ ನಿಯಮ ಉಲ್ಲಂಘಿಸಿ ನಡೆಯುತ್ತಿದೆ ಎಂಬ ಆರೋಪ ಇದೆ. ಪರಿಸರ ಅನುಮತಿ, ಸುರಕ್ಷತಾ ಕ್ರಮ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಯಮ ಕಡೆಗಣಿಸಿ ನೈಸರ್ಗಿಕ ಸಂಪತ್ತು ದೋಚಲಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ತಾಲ್ಲೂಕು ಆಡಳಿತಕ್ಕೆ ಈ ಚಟುವಟಿಕೆ ಕುರಿತು ಮಾಹಿತಿ ಇದ್ದರೂ ಕ್ರಮ ಕೈಗೊಳ್ಳತ್ತಿಲ್ಲ. ರಾತ್ರಿ ವೇಳೆ ಸಾಗುವ ಲಾರಿಗಳ ಸಂಚಾರ ಮತ್ತು ಯಂತ್ರಗಳ ಕಾರ್ಯಾಚರಣೆ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿದೆ.
ಹೊಳವನಹಳ್ಳಿ ಹೋಬಳಿ ಮುಖಂಡರೊಬ್ಬರು, ‘ಸರ್ಕಾರಿ ಜಮೀನು ಲೂಟಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಯಾರೂ ಮಾತನಾಡಲು ಧೈರ್ಯ ಮಾಡುತ್ತಿಲ್ಲ. ಮಾತನಾಡಿದರೆ ಬೆದರಿಕೆ ಎದುರಿಸಬೇಕಾಗುತ್ತದೆ. ಲೇಔಟ್ ಮಾಡುವವರಿಗೆ ಸರ್ಕಾರಿ ಮಣ್ಣು ಹೇಗೆ ಸಿಗುತ್ತಿದೆ? ಅಧಿಕಾರಿಗಳ ಬೆಂಬಲವಿಲ್ಲದೇ ಇದು ಸಾಧ್ಯವೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.