
ಕೊರಟಗೆರೆ: ಕೊರಟಗೆರೆ ಪಟ್ಟಣ ಪಂಚಾಯಿತಿ ಇದೀಗ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ರಾಜ್ಯ ಸರ್ಕಾರದ ಹೊಸ ಅಧಿಸೂಚನೆಯೊಂದಿಗೆ ಕೊರಟಗೆರೆ ಪ್ರದೇಶ ನಗರಾಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದೆ.
ಕೊರಟಗೆರೆ ತಾಲ್ಲೂಕು ಈಗಾಗಲೇ ವ್ಯಾಪಾರ, ಶಿಕ್ಷಣ, ಸಾರಿಗೆ ಹಾಗೂ ಆರೋಗ್ಯ ಸೇವೆಗಳ ಕೇಂದ್ರವಾಗಿ ಬೆಳೆಯುತ್ತಿತ್ತು. ಎರಡು ದಶಕಗಳಲ್ಲಿ ಪಟ್ಟಣದ ಜನಸಂಖ್ಯೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಳ ಕಂಡುಬಂದಿರುವ ಕಾರಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
2011ರ ಜನಗಣತಿ ಪ್ರಕಾರ ಕೊರಟಗೆರೆ ಪ್ರದೇಶದಲ್ಲಿ 24,264 ಜನ ವಾಸವಿದ್ದು, 17.53 ಚದರ ಕಿಲೋಮೀಟರ್ ವಿಸ್ತೀರ್ಣವಿದೆ. ಪ್ರತಿ ಚದರ ಕಿಲೋಮೀಟರಿಗೆ 1,384 ಜನರ ಸಾಂದ್ರತೆ ದಾಖಲಾಗಿದೆ. ಈ ಅಂಕಿ ಅಂಶಗಳು ಪ್ರದೇಶದ ನಗರೀಕರಣದ ಪ್ರಮಾಣವನ್ನು ಸ್ಪಷ್ಟಪಡಿಸುತ್ತವೆ.
ಶೇ. 69ರಷ್ಟು ಕೃಷಿಯೇತರ ಚಟುವಟಿಕೆ ನಡೆಯುತ್ತಿದ್ದು, ವ್ಯಾಪಾರ, ಸಣ್ಣ ಕೈಗಾರಿಕೆಗಳು ಹಾಗೂ ಸೇವಾ ವಲಯಗಳು ಸ್ಥಳೀಯ ಆರ್ಥಿಕತೆಗೆ ಪ್ರಮುಖವಾಗಿ ಅಗತ್ಯವಿದ್ದು, ಅವುಗಳು ಸ್ಥಾಪನೆಗೊಳ್ಳುವ ನಿರೀಕ್ಷೆ ಹೆಚ್ಚಿಸಿದೆ.
ಪುರಸಭೆ ರಚನೆಗೆ ಸಂಬಂಧಿಸಿದ ಆಡಳಿತಾತ್ಮಕ ಕ್ರಮಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಹೊಸ ಗಡಿನಿರ್ಣಯ, ಆಡಳಿತ ವಿಂಗಡಣೆ, ಬಜೆಟ್ ವ್ಯವಸ್ಥೆ ಹಾಗೂ ಚುನಾವಣೆ ಪ್ರಕ್ರಿಯೆ ಕುರಿತು ಸರ್ಕಾರ ಮುಂದಿನ ದಿನಗಳಲ್ಲಿ ಪ್ರಕಟಣೆ ಹೊರಡಿಸಲಿದೆ.
ಭರವಸೆ ನೀಡಿದ್ದ ಜಿ.ಪರಮೇಶ್ವರ
ವಿಧಾನ ಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೊರಟಗೆರೆಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಭರವಸೆಯನ್ನು ಪರಮೇಶ್ವರ್ ನೀಡಿದ್ದರು. ಅದರಂತೆ ಈಗ ಪುರಸಭೆಯನ್ನಾಗಿ ಪರಿವರ್ತಿಸಲು ಕ್ರಮ ವಹಿಸಿರುವುದು ಸ್ವಾಗತಾರ್ಹ. ಪರಮೇಶ್ವರ ನುಡಿದಂತೆ ಶಾಶ್ವತ ಕೆಲಸ ಮಾಡಿದ್ದಾರೆ. ಇದರಿಂದ ಪಟ್ಟಣದ ಸುತ್ತಮುತ್ತ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿಗೆ ವೇಗ ನೀಡಿದಂತಾಗಿದೆ. ಹಳ್ಳಿಗಳು ಈಗ ಪಟ್ಟಣದೊಂದಿಗೆ ಗುರುತಿಸಿಕೊಳ್ಳುವುದರಿಂದ ಆ ಭಾಗದ ನಿವೇಶನ ಸೇರಿದಂತೆ ಜಮೀನುಗಳ ಮೌಲ್ಯ ಹೆಚ್ಚಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.