ADVERTISEMENT

ಮಗುವಿಗೆ ಜನ್ಮ ನೀಡಿದ 14ರ ಬಾಲಕಿ!

ಅಧಿಕಾರಿಗಳ ಸಮನ್ವಯತೆ ಕೊರತೆ, ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 21:41 IST
Last Updated 27 ಫೆಬ್ರುವರಿ 2025, 21:41 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕುಣಿಗಲ್ (ತುಮಕೂರು): ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯತೆ ಕೊರತೆ, ನಿರ್ಲಕ್ಷ್ಯ ಮತ್ತು ಸರಿಯಾದ ಸಮಯಕ್ಕೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಕಾರಣ ಪರಿಶಿಷ್ಟ ಜಾತಿಯ 14 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿನ ತಾಯಿಯಾಗಿದ್ದಾಳೆ.

ಬಾಲಕಿ ಎಂಟು ವಾರ ಗರ್ಭಿಣಿಯಾಗಿದ್ದಾಗಲೇ ಈ ಮಾಹಿತಿಯನ್ನು ಪೊಲೀಸರು ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ. ಆದರೆ, ಬಾಲಕಿಗೆ ಹೆರಿಗೆಯಾಗುವವರೆಗೂ ಸಂಬಂಧಿಸಿದ ಯಾವ ಇಲಾಖೆಗಳು ಈ ಬಗ್ಗೆ ಗಮನ ಹರಿಸಿಲ್ಲ.

ADVERTISEMENT

ಬಾಲಕಿಗೆ ಬುಧವಾರ ಮನೆಯಲ್ಲಿ ಸಹಜ ಹೆರಿಗೆಯಾಗಿದೆ. ಗಂಡು ಮಗುವಿಗೆ ಜನ್ಮ ನೀಡಿದ ನಂತರ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದೆ. ಬಾಲಕಿಯ ತಾಯಿ ಆಕೆಯನ್ನು ಚಿಕಿತ್ಸೆಗಾಗಿ ಯಡಿಯೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಮಹಿಳಾ ವೈದ್ಯರ ತಪಾಸಣೆ ನಂತರ ವಿಷಯ ಬೆಳಕಿಗೆ ಬಂದಿದೆ.

ತಕ್ಷಣ ಅವರು ಅಮೃತೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತಂಡ ಗುರುವಾರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ಅಮೃತೂರು ಪೊಲೀಸರಿಗೆ ದೂರು ನೀಡಿದೆ. 

ಯಾರು ಹೊಣೆ?: ಯಡಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2024ರ ಜುಲೈ 12 ರಂದು ತಪಾಸಣೆಗೆ ಬಂದಿದ್ದ ಬಾಲಕಿ ಅದಾಗಲೇ ಎಂಟು ವಾರದ  ಗರ್ಭಿಣಿಯಾಗಿದ್ದಳು. ಗರ್ಭಿಣಿ ಹೆಸರು ನೋಂದಾಯಿಸಿಕೊಂಡು ಆಸ್ಪತ್ರೆಯ ಸಿಬ್ಬಂದಿ ಆಕೆಗೆ ತಾಯಿ ಕಾರ್ಡ್ ನೀಡಿ ಪ್ರಸವಪೂರ್ವ ಸೇವೆ ಆರಂಭಿಸಿದ್ದರು.

ಆದರೆ, ಅಂದೇ ಈ ಬಗ್ಗೆ ಮಾಹಿತಿ ನೀಡದ ಆಸ್ಪತ್ರೆಯ ವೈದ್ಯಾಧಿಕಾರಿಗಳು ಅದಾದ ಐದು ತಿಂಗಳ ನಂತರ, ಡಿಸೆಂಬರ್‌ 31, 2024 ರಂದು ಕುಣಿಗಲ್‌ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಅದಾಗಲೇ ಬಾಲಕಿ ಏಳೂವರೆ ತಿಂಗಳು ಗರ್ಭಿಣಿಯಾಗಿದ್ದಳು!

ಶಾಲಾ ದಾಖಲಾತಿ ಪ್ರಕಾರ ಬಾಲಕಿಗೆ ಇನ್ನೂ 14 ವರ್ಷ 3 ತಿಂಗಳಾಗಿದ್ದು, ಅಪ್ರಾಪ್ತಳಾದ ಆಕೆ ಗರ್ಭಿಣಿಯಾಗಿದ್ದಾಳೆ. ಹಾಗಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಕೋರಿ ಆಸ್ಪತ್ರೆ ಆರೋಗ್ಯ ಅಧಿಕಾರಿಯು ಡಿಸೆಂಬರ್‌ 31ರಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು, ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ, ಜಿಲ್ಲಾ ರಕ್ಷಣಾ ಮಕ್ಕಳ ಘಟಕ, ತಾಲ್ಲೂಕು ಆರೋಗ್ಯ ಅಧಿಕಾರಿ ಹಾಗೂ ಅಮೃತೂರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು.

ದೂರು ನೀಡಿದರೆ ಮಾತ್ರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹಿಂಬರಹ ನೀಡಿದ್ದರು. ಪತ್ರ ವ್ಯವಹಾರ ನಡೆಸಿ ಎಲ್ಲಾ ಇಲಾಖೆಗಳೂ ಕೈ ತೊಳೆದುಕೊಂಡಿದ್ದವು. ಯಾರೂ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸದ ಕಾರಣ ಬಾಲಕಿ ಇದೀಗ ಗಂಡು ಮಗುವಿನ ತಾಯಿಯಾಗಿದ್ದಾಳೆ.

ಪ್ರಕರಣವನ್ನು ಗಮನಕ್ಕೆ ತಂದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದ ಕಾರಣ ಬಾಲಕಿಗೆ ಈ ಪರಿಸ್ಥಿತಿ ಬಂದೊದಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ದೂರಿದ್ದಾರೆ.

ಜುಲೈನಲ್ಲಿಯೇ ಪ್ರಕರಣ ಬೆಳಕಿಗೆ ಬಂದರೂ ಡಿಸೆಂಬರ್‌ ಕೊನೆಗೆ ಮಾಹಿತಿ ನೀಡಲಾಗಿದೆ. ಅದಾಗಲೇ ಬಾಲಕಿ ಗರ್ಭಿಣಿಯಾಗಿ ಏಳೂವರೆ ತಿಂಗಳಾಗಿತ್ತು ಎಂದು ಉಳಿದ ಇಲಾಖೆಯ ಅಧಿಕಾರಿಗಳು ಮರು ಆರೋಪ ಮಾಡಿದ್ದಾರೆ.

ಮೂವರ ವಿರುದ್ಧ ಪ್ರಕರಣ ದಾಖಲು
ಅಪ್ರಾಪ್ತೆ ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಪತಿ ಹಾಗೂ ಪೋಷಕರ ವಿರುದ್ಧ ಬಾಲ ವಿವಾಹ ತಡೆ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಅಡಿ ಗುರುವಾರ ರಾತ್ರಿ ಅಮೃತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಡೆಯೂರು ವೃತ್ತದ ಮೇಲ್ವಿಚಾರಕಿ ಭಾಗ್ಯಲಕ್ಷ್ಮಿ ದೇವಿ ದೂರು ನೀಡಿದ್ದರು.

ಬಾಲ್ಯ ವಿವಾಹ

ತಾಯಿ ಜೊತೆ ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಬಾಲಕನೊಬ್ಬನನ್ನು ಪ್ರೀತಿಸುತ್ತಿದ್ದಳು.  ಕಳೆದ ವರ್ಷ ಇಬ್ಬರೂ ಅಪ್ರಾಪ್ತರು ವಿವಾಹವಾಗಿದ್ದರು. ಆಗ ಇಬ್ಬರಿಗೂ ಇನ್ನೂ ಮದುವೆ ವಯಸ್ಸು ಆಗಿರಲಿಲ್ಲ. ಅದೊಂದು ಬಾಲ್ಯ ವಿವಾಹವಾಗಿತ್ತು. ಬಾಲಕಿ ಐದು ತಿಂಗಳ ಗರ್ಭಿಣಿಯಾದಾಗ ಬಾಲಕ ಆಕೆಯನ್ನು ತೊರೆದಿದ್ದ. ಈಗ ಬಾಲಕ ನಾಪತ್ತೆಯಾಗಿದ್ದಾನೆ.

ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿತ್ತು. ಗರ್ಭಿಣಿ ನೋಂದಣಿ, ತಾಯಿ ಕಾರ್ಡ್ ನೀಡಿ ಪ್ರಸವ ಪೂರ್ವ ಸೇವೆಗಳನ್ನೂ ನೀಡಲಾಗಿತ್ತು ಎಂದು ಬಾಲಕಿಯ ತಾಯಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.