
ಕುಣಿಗಲ್: ಅರಣ್ಯೀಕರಣದ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘ, ಅಮ್ ಆದ್ಮಿ, ದಲಿತ ಹಕ್ಕುಗಳ ಹೋರಾಟ ಸಮಿತಿ ಹಾಗೂ ಕೆ.ಆರ್.ಎಸ್ ಪದಾಧಿಕಾರಿಗಳು ತಾಲ್ಲೂಕಿನ ಹುಲಿಯೂರುದುರ್ಗದಲ್ಲಿರುವ ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಮಾತನಾಡಿ, ತಾಲ್ಲೂಕಿನ ಕಾಚಿಹಳ್ಳಿ, ಎಲೆಕಡಕಲು, ಬ್ಯಾಡರಹಳ್ಳಿ, ಕಾಡಬೋರನಹಳ್ಳಿ, ಹಿತ್ತಲಪುರ, ಉಜ್ಜನಿ ವ್ಯಾಪ್ತಿಯಲ್ಲಿ 50-60 ವರ್ಷಗಳಿದ ಉಳುಮೆ ಮಾಡಿಕೊಂಡು ಬರುತ್ತಿದ್ದು, ಸರ್ಕಾರ ಬಗರ್ ಹುಕುಂ ಸಾಗುವಳಿ ಚೀಟಿ ಸಹ ನೀಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಬದ್ದವಾಗಿ ಪೋಡಿ ಮತ್ತು ದುರಸ್ತಿ ಮಾಡಲು ಅವಕಾಶ ನೀಡದೆ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಜಮೀನು ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎನ್.ನಟರಾಜು ಮಾತನಾಡಿ, ಸರ್ಕಾರ ಬಲಾಢ್ಯರ ಜಮೀನುಗಳ ತಂಟೆಗೆ ಹೋಗುತ್ತಿಲ್ಲ. ಪ್ರಭಾವಿ ರಾಜಕಾರಣಿಗಳ ರೆಸಾರ್ಟ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಜಮೀನು ನೀಡುತ್ತಿದೆ. ಬಡವನಿಗೆ ಸರ್ಕಾರವೇ ಮಂಜೂರು ಮಾಡಿರುವ ಜಮೀನುಗಳಿಗೆ ಸಕಾಲದಲ್ಲಿ ದಾಖಲೆಗಳನ್ನು ನೀಡದೆ ಈಗ ಒಕ್ಕಲೆಬ್ಬಿಸುವುದಕ್ಕೆ ಹೊರಟಿರುವುದು ಖಂಡನೀಯ ಎಂದು ಹೇಳಿದರು.
ಅಮ್ ಆದ್ಮಿ ಪಕ್ಷದ ಜಯರಾಮಯ್ಯ ಮಾತನಾಡಿ, ಕಂದಾಯ ಮತ್ತು ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನ ನೂರೂರು ರೈತರು ತಾವು ಉಳುಮೆ ಮಾಡುತ್ತಿರುವ ಭೂಮಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಕೆ.ಆರ್.ಎಸ್ ಪಕ್ಷದ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಮಾತನಾಡಿ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಶಾಸಕರೇ ಆಗಿದ್ದು, ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ. ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಡು ಬರುತ್ತಿರುವ ರೈತರಿಗೆ ಭೂಮಿ ಮಂಜೂರು ಮಾಡಲು ತಕರಾರು ಸೃಷ್ಟಿಸಬಾರದು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರ, ವಲಯ ಅರಣ್ಯಾಧಿಕಾರಿ ಜಗದೀಶ್ ಹಾಗೂ ರಾಜು ವೆಂಕಟಪ್ಪ, ಚನ್ನಯ್ಯ, ಮಾಹದೇವಯ್ಯ, ಸಿಂಗ್ರಿಗೌಡ, ಶಿವಲಿಂಗಯ್ಯ ಕೆಂಪನಹಳ್ಳಿ ಕುಮಾರ್, ಪುಟ್ಟಸ್ವಾಮಣ್ಣ, ಬನ್ನೂರು ನಾರಾಯಣ್, ಮದ್ದೂರು ಶೋಶಿ ಪ್ರಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.