ADVERTISEMENT

ಕುಣಿಗಲ್ | ಅರ್ಚಕ ಅಮಾನತು; ಪ್ರಕರಣ ದಾಖಲು

ವಿಗ್ರಹದ ಅಚ್ಚು ತೆಗೆದ ಪ್ರಕರಣ ಖಂಡಿಸಿ ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 5:15 IST
Last Updated 30 ಡಿಸೆಂಬರ್ 2025, 5:15 IST
ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹಳೇವೂರಮ್ಮ ದೇವಾಲಯದ ಅರ್ಚಕ ಮತ್ತು ಆಡಳಿತಾಧಿಕಾರಿ ವಿರುದ್ಧ  ಕ್ರಮಕ್ಕೆ ಆಗ್ರಹಿಸಿದ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹಳೇವೂರಮ್ಮ ದೇವಾಲಯದ ಅರ್ಚಕ ಮತ್ತು ಆಡಳಿತಾಧಿಕಾರಿ ವಿರುದ್ಧ  ಕ್ರಮಕ್ಕೆ ಆಗ್ರಹಿಸಿದ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗದ ಹಳೇವೂರಮ್ಮ ದೇವಾಲಯದ ವಿಗ್ರಹದ ಅಚ್ಚು ತೆಗೆದ ಪ್ರಕರಣ ಖಂಡಿಸಿದ ಭಕ್ತರು, ಗ್ರಾಮಸ್ಥರು ಸೋಮವಾರ ದೇವಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ಅಚ್ಚು ತೆಗೆದ ಅರ್ಚಕ ಮತ್ತು ಅವರ ಮೇಲೆ ಕ್ರಮ ತೆಗೆದುಕೊಳ್ಳದ ಆಡಳಿತಾಧಿಕಾರಿ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರಶ್ಮೀ ಅವರಿಗೆ ಮನವಿ ಸಲ್ಲಿಸಿದರು.

ಡಿ. 24ರ ರಾತ್ರಿ ಅರ್ಚಕ ಮನು, ಹಳೆವೂರಮ್ಮ ದೇವಿಯ ವಿಗ್ರಹದ ಅಚ್ಚನ್ನು ಮೇಣ ಬಳಸಿ ತೆಗೆಯುತ್ತಿದ್ದನ್ನು ಗಮನಿಸಿದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ಪೊಲೀಸರಿಗೆ ಮತ್ತು ಆಡಳಿತಾಧಿಕಾರಿ ಮಂಜೇಶ್‌ಗೆ ಮಾಹಿತಿ ನೀಡಿದ್ದರು. ಘಟನೆ ನಡೆದು ಹಲವು ದಿನ ಕಳೆದರೂ ಅಧಿಕಾರಿಗಳು ಗಮನಹರಿಸದ ಕಾರಣ ಸೋಮವಾರ ಪ್ರತಿಭಟನೆ ನಡೆಸಿದರು.

ADVERTISEMENT

ಶ್ರೀಕಾಂತ್, ಜಗದೀಶ್, ಕರಿಗೌಡ ಬೀಚನಹಳ್ಳಿ, ಶಿವಲಿಂಗಯ್ಯ ನರಸಿಂಹಮೂರ್ತಿ ಮಾತನಾಡಿ, ಅರ್ಚಕ ದೇವಾಲಯದ ವಿಗ್ರಹದ ಅಚ್ಚನ್ನು, ಇಲಾಖೆ ಅಧಿಕಾರಿಗಳ ಗಮನಕ್ಕೆ ಮತ್ತು ಅನುಮತಿ ಪಡೆಯದೆ ತೆಗೆದು ಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ. ಈ ಬಗ್ಗೆ ಆಡಳಿತಾಧಿಕಾರಿಗೆ ಮಾಹಿತಿ ನೀಡಿದ್ದರೂ ಅರ್ಚಕರ ಮೇಲೆ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿರುವುದರಿಂದ ಅವರ ಮೇಲೂ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದರು.

ತಹಶೀಲ್ದಾರ್ ರಶ್ಮೀ ಮಾತನಾಡಿ, ಆಡಳಿತಾಧಿಕಾರಿ ವರದಿ ಮೇರೆಗೆ ಉಪವಿಭಾಗಾಧಿಕಾರಿ ಅರ್ಚಕ ಸೋಮೇಶ್, ಪುತ್ರ ಮನು ಅವರನ್ನು ಅಮಾನತು ಮಾಡಿದ್ದಾರೆ. ಆಡಳಿತಾಧಿಕಾರಿ ಮೇಲೆ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿ, ಅರ್ಚಕರ ವಿರುದ್ಧ ಪ್ರಕರಣ ದಾಖಲಿಸಲು ಆಡಳಿತಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಸಿಪಿಐ ನವೀನ್ ಗೌಡ, ಪಿಎಸ್ಐ ಪ್ರಶಾಂತ್ ಇದ್ದರು. ಆಡಳಿತಾಧಿಕಾರಿ ಮಂಜೇಶ್ ನೀಡಿದ ದೂರಿನ ಮೇರೆಗೆ ಅರ್ಚಕ ಮತ್ತಿತರರ ಮೇಲೆ ಹುಲಿಯೂರುದುರ್ಗ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.