
ಕುಣಿಗಲ್: ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತ ಮತ್ತು ಗ್ರಾಮ ದೇವತಾ ವೃತ್ತದಲ್ಲಿ ಶುಕ್ರವಾರ ಪೊಲೀಸರು ಜಾಗೃತಿ ಮೂಡಿಸಿದರು.
ಸಿಪಿಐ ಮಾದ್ಯಾ ನಾಯಕ್, ಪಿಎಸ್ಐ ಅಮೂಲ್ ಹೇಮಗಿರಿ ನೇತೃತ್ವದಲ್ಲಿ ಸಿಬ್ಬಂದಿಗಳು ಜಾಗೃತಿ ಮೂಡಿಸಿದ್ದು, ಹೆಲ್ಮೆಟ್ ಧರಿಸಿ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ ನೀಡಿ ಧನ್ಯವಾದ ತಿಳಿಸಿದರು. ಹೆಲ್ಮೆಟ್ ಧರಿಸದ ಸವಾರರಿಗೆ ಹೆಲ್ಮೆಟ್ ಧಾರಣೆಯಿಂದಾಗುವ ಪ್ರಯೋಜನಗಳನ್ನು ತಿಳಿಸಿದರು. ಪತ್ನಿ, ಮಕ್ಕಳು, ಕುಟುಂಬದ ಹಿತದೃಷ್ಟಿಯಿಂದ ಮತ್ತು ಕಾನೂನು ಪರಿಪಾಲನೆ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವಂತೆ ಗುಲಾಬಿ ಹೂವು ನೀಡಿ ಮನವಿ ಮಾಡಿದರು.
ಮೊದಲು ಜಾಗೃತಿ ಮೂಡಿಸಲಾಗಿದೆ, ನಂತರ ಎಚ್ಚರಿಕೆ ನೀಡಲಾಗುವುದು. ಆನಂತರ ಹೆಲ್ಮೆಟ್ ಧಾರಣೆ ಕಡ್ಡಾಯಗೊಳಿಸಿ, ಧರಿಸದಿದ್ದರೆ ದಂಡ ವಸೂಲಿ ಮಾಡಲಾಗುವುದು ಎಂದು ಸಿಪಿಐ ಮಾದ್ಯಾ ನಾಯಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.