ADVERTISEMENT

World Environment Day: ಈ ಮೌನಿ... ಪರಿಸರ ಪ್ರೇಮಿ...

ಸಾವಿರಾರು ಸಸಿಗಳ ಪೋಷಣೆ: ಹತ್ತಾರು ಮರಗಳ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 6:59 IST
Last Updated 5 ಜೂನ್ 2025, 6:59 IST
ಕುಣಿಗಲ್ ಬಾಳೇಗೌಡ ಉದ್ಯಾನದಲ್ಲಿ ಬೆಳಸಿದ ನೂರಾರು ಗಿಡಗಳ ನಡುವೆ ವೇಣು
ಕುಣಿಗಲ್ ಬಾಳೇಗೌಡ ಉದ್ಯಾನದಲ್ಲಿ ಬೆಳಸಿದ ನೂರಾರು ಗಿಡಗಳ ನಡುವೆ ವೇಣು   

ಕುಣಿಗಲ್: ಪಟ್ಟಣದ ಪತಂಜಲಿ ನಗರದ ವೇಣು (38) ಕೆಮಿಕಲ್ ಎಂಜನಿಯರಿಂಗ್ ಪದವೀಧರ, ಖಾಸಗಿ ಕಂಪನಿ ಉದ್ಯೋಗಿ. ಮಾತಿಗಿಂತ ಕೃತಿ ಲೇಸು ಎಂದು ನಂಬಿರುವ ಇವರು ಮೌನಿಯಾಗಿದ್ದುಕೊಂಡು ಸಾವಿರಾರು ಸಸಿಗಳನ್ನು ಬೆಳಸಿದ್ದಾರೆ, ದಾನವಾಗಿ ನೀಡಿದ್ದಾರೆ ಅಲ್ಲದೆ ಹತ್ತಾರು ಮರಗಳನ್ನು ಸ್ಥಳಾಂತರಿಸಿ ಮರು ಜೀವ ನೀಡಿ ಗಮನ ಸೆಳೆದಿದ್ದಾರೆ.

ಯಾರಿಂದಲೂ ಎನನ್ನೂ ನಿರೀಕ್ಷೆ ಮಾಡದೆ ತನ್ನ ದುಡಿಮೆಯ ಉಳಿತಾಯದಿಂದ ಗಿಡ ಮರಗಳ ಪೋಷಣೆ ಮತ್ತು ಸಂರಕ್ಷಣೆಗೆ ಗಮನ ಹರಿಸಿದ್ದಾರೆ. ಗಿಡ ಮರಗಳಿಗೆ ಕೊಡಲಿ ಪೆಟ್ಟು ಬೀಳುವ ಮುನ್ನವೇ ಸ್ಥಳಕ್ಕೆ ತೆರಳಿ ಬುಡದ ಸಮೇತ ಮರಗಳನ್ನು ಕ್ರೇನ್ ಸಹಾಯದ ಮೂಲಕ ತೆಗೆದು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನೆಟ್ಟು ಮರುಜೀವ ನೀಡಿದ್ದಾರೆ.

ಬೇಗೂರು ರಸ್ತೆಯಲ್ಲಿದ್ದ 200 ವರ್ಷಕ್ಕೂ ಹಳೆಯ ಅರಳಿ ಮರವನ್ನು ತೆಗೆದು ರಂಗಸ್ವಾಮಿ ಗುಡ್ಡದ ಪ್ರದೇಶದಲ್ಲಿ ನೆಟ್ಟು ಪೋಷಿಸಿದ ಫಲವಾಗಿ ಮರ ಮತ್ತೆ ಚಿಗುರಿ ನೆರಳು ನೀಡುತ್ತಿದೆ. ಸ್ಟೆಲ್ಲಾ ಮೇರಿಸ್ ಶಾಲೆ ಬಳಿ ಮನೆಗಳ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಅರಳಿ ಮರ ಸ್ಥಳಾಂತರಿಸಿದ್ದಾರೆ. ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿಗಳ ಮನವಿ ಮೇರೆಗೆ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಮರವನ್ನು ದುರ್ಗ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ..

ADVERTISEMENT

ಪಟ್ಟಣದ ತುಮಕೂರು ರಸ್ತೆಯ ಬಾಳೆಗೌಡ ಉದ್ಯಾನದ ಮರಗಿಡಗಳ ನಿರ್ವಹಣೆ ಮತ್ತು ಬೆಳಸುವ ಜವಾಬ್ದಾರಿ ತೆಗೆದುಕೊಂಡ ವೇಣು, ನಿರೀಕ್ಷೆಗೂ ಮೀರಿ ಶ್ರಮಿಸಿ ಹಸಿರು ಉದ್ಯಾನವಾಗಿ ಪರಿವರ್ತಿಸಿದ್ದಾರೆ. ಉದ್ಯಾನದಲ್ಲಿ 100 ಜಾತಿಯ ( ತಲಾ ನಾಲ್ಕು) ವಿಶೇಷ ಜಾತಿಯ, ಅಪರೂಪದ ಸಸಿಗಳನ್ನು ತಂದು ನೀರಿನ ಸೌಕರ್ಯ ಕಲ್ಪಿಸಿ ಬೆಳಸುತ್ತಿದ್ದಾರೆ. ಹನುಮ ಫಲ, ಲಕ್ಷ್ಮಣ ಫಲ, ಗೋಣಿ, ಜಾಯಿಕಾಯಿ, ಬಟರ್ ಪ್ರೂಟ್, ಬಿಲ್ವಪತ್ರೆ, ಸೇರಿದಂತೆ ಹೂವಿನ ಗಿಡಗಳನ್ನು ಬೆಳಸಿ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಕಾಮಗಾರಿ ನೆಪದಲ್ಲಿ ಗಿಡಗಳನ್ನು ನಾಶ ಪಡಿಸಲು ಒಪ್ಪದೆ ಗಿಡ ಮತ್ತು ಬುಡಗಳನ್ನು ನಮ್ಮ ಸ್ವತ್ತು ಹಾನಿ ಮಾಡದಿರಲು ಮನವಿ ಮಾಡಿದ್ದಾರೆ.

ಬಾಳೆಗೌಡ ಉದ್ಯಾನವಲ್ಲದೆ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ಬಹುಪಯೋಗಿ ತಟ್ಟಳೆ ಮರಗಳನ್ನು ಬೆಳಸಿ ಟ್ರೀ ಗಾರ್ಡ್ ಮೂಲಕ ಸಂರಕ್ಷಣೆ ಮಾಡಿದ್ದಾರೆ. ಪರಿಸರ ದಿನಾಚರಣೆ ಪ್ರಯುಕ್ತ ಪುರಸಭೆಯವರೊಂದಿಗೆ ಸೇರಿ ರಸ್ತೆ ವಿಭಜಕಗಳಲ್ಲಿ 1,700 ಗಿಡಗಳನ್ನು ನೆಡಲು ಸಿದ್ಧತೆ ನಡೆಸಿದ್ದಾರೆ

ಮರಗಿಡಗಳ ವಿಷಯ ಬಂದಾಗ ಮಾತ್ರವೇ ಮಾತನಾಡುವ ವೇಣು ಉಳಿದಂತೆ ಮೌನದಿಂದಲೇ ಕಾರ್ಯನಿರ್ವಹಿಸುತ್ತಾರೆ. ಸಸ್ಯ ಸಂರಕ್ಷಣೆಗೆ ಯುವಜನರ ಆಸಕ್ತಿ ತೋರಬೇಕಿದೆ. ಪೋಷಕರು, ಶಿಕ್ಷಕರು ಸಹ ಮಕ್ಕಳಿಗೆ ಪರಿಸರ ಸಂರಕ್ಷಣೆಗೆ ಗಮನ ಹರಿಸಬೇಕಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದರ ಜತೆಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೂ ಗಮನ ಹರಿಸಬೇಕಿದೆ ಎನ್ನುವುದು ವೇಣು ಅವರ ಅಂಬೋಣ.

ತಮಕೂರು ರಸ್ತೆ ಬಾಳೆಗೌಡ ಉದ್ಯಾನದಲ್ಲಿ ನೂರು ಜಾತಿಯ ಸಸಿಗಳನ್ನು ನೆಡಲಾಗಿದೆ. ಮುಂಭಾಗದಲ್ಲಿ ಹೆಸರಿನ ಫಲಕ ಅಳವಡಿಸಲಾಗಿದೆ. ಫಲಕ ನೋಡದೆ ನೂರು ಸಸಿಗಳ ಹೆಸರು ಹೇಳಿದವರಿಗೆ ₹1000 ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅಪರೂಪದ ಜಾತಿಯ ಸಸಿಗಳ ಹೆಸರು ಮತ್ತು ಗಿಡಗಳ ಅರಿವು ಮೂಡಿಸುವ ಪಣ ತೊಟ್ಟಿದ್ದಾರೆ.

ಕುಣಿಗಲ್ ಉದ್ಯಾನದಲ್ಲಿ ಬೆಳಸಿದ ನೂರು ಗಿಡಗಳ ಮಾಹಿತಿ ಫಲಕದೊಂದಿಗೆ ವೇಣು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.