ADVERTISEMENT

ತುಮಕೂರು: ದೂಳು ಹಿಡಿದ ಕ್ರೀಡಾಂಗಣದ ಜಿಮ್‌

ಗಾಢ ನಿದ್ರೆಗೆ ಜಾರಿದ ಅಧಿಕಾರಿಗಳು, ಅಗತ್ಯ ಸೌಲಭ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 4:40 IST
Last Updated 29 ಏಪ್ರಿಲ್ 2024, 4:40 IST
ತುಮಕೂರಿನ ಜಿಲ್ಲಾ ಕ್ರೀಡಾಂಗಣದಲ್ಲಿರುವ ವ್ಯಾಯಾಮ ಶಾಲೆಯ ಶೌಚಾಲಯ
ತುಮಕೂರಿನ ಜಿಲ್ಲಾ ಕ್ರೀಡಾಂಗಣದಲ್ಲಿರುವ ವ್ಯಾಯಾಮ ಶಾಲೆಯ ಶೌಚಾಲಯ   

ತುಮಕೂರು: ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ವಿವಿಧೋದ್ದೇಶ ವ್ಯಾಯಾಮ ಶಾಲೆ ಸೂಕ್ತ ನಿರ್ವಹಣೆ, ಅಗತ್ಯ ಸೌಲಭ್ಯಗಳಿಲ್ಲದೆ ಮಂಕಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪಕ್ಕದಲ್ಲಿಯೇ ಇರುವ ವ್ಯಾಯಾಮ ಶಾಲೆಯತ್ತ ಅಧಿಕಾರಿಗಳು ಕಣ್ಣೆತ್ತಿಯೂ ನೋಡಿಲ್ಲ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಿಲ್ಲ. ಇರುವ ಶೌಚಾಲಯ ಹಾಳಾಗಿದ್ದು, ಅದನ್ನು ಸರಿ ಪಡಿಸಿಲ್ಲ. ಪ್ರತಿ ನಿತ್ಯ ಹತ್ತಾರು ಜನ ಕ್ರೀಡಾಪಟುಗಳು, ಸಾರ್ವಜನಿಕರು ದೈಹಿಕ ಕಸರತ್ತು ನಡೆಸಲು ಇಲ್ಲಿಗೆ ಬರುತ್ತಾರೆ. ಅಭ್ಯಾಸಕ್ಕೆ ಬೇಕಾದ ಅಗತ್ಯ ಉಪಕರಣಗಳನ್ನು ಒದಗಿಸಿಲ್ಲ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ವ್ಯಾಯಾಮ ಶಾಲೆಯ ಕುರಿತು ಯಾರೂ ಗಮನ ಹರಿಸಿಲ್ಲ. ಹಳೆಯ ಉಪಕರಣ ಕೆಟ್ಟಿದ್ದು, ಅವು ಮೂಲೆಗೆ ಸೇರಿ ತುಕ್ಕು ಹಿಡಿದಿವೆ. ಅವುಗಳನ್ನು ತೆರವುಗೊಳಿಸಿ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ಆರೋಗ್ಯ ಕಾಪಾಡಲು ಜಿಮ್‌ಗೆ ಹೋದರೆ, ಇರುವ ಆರೋಗ್ಯ ಕೆಡುವುದು ಖಚಿತ.

ADVERTISEMENT

ತಿಂಗಳಿಗೆ ಸಾವಿರಾರು ರೂಪಾಯಿ ಕೊಟ್ಟು ಖಾಸಗಿ ಜಿಮ್‌ಗಳಿಗೆ ಹೋಗಲು ಶಕ್ತಿ ಇಲ್ಲದವರು ಸರ್ಕಾರಿ ಜಿಮ್‌ಗೆ ಹೋಗುತ್ತಾರೆ. ಅವರ ಅಭ್ಯಾಸಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಆಗಿಲ್ಲ. ಕನಿಷ್ಠ ಶುದ್ಧ ಕುಡಿಯುವ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದರು.

‘ಕ್ರೀಡಾ ಇಲಾಖೆಯ ಅಧಿಕಾರಿಗಳು ತಮ್ಮ ಕೂಗಳತೆಯ ದೂರದಲ್ಲಿರುವ ಜಿಮ್‌ ಬಗ್ಗೆ ಇಷ್ಟು ನಿರ್ಲಕ್ಷ್ಯ ವಹಿಸಿದರೆ, ಜಿಲ್ಲೆಯ ವಿವಿಧ ಕಡೆಗಳಲ್ಲಿ ಇರುವ ಸರ್ಕಾರಿ ಜಿಮ್‌, ಆಟದ ಮೈದಾನಗಳ ಸ್ಥಿತಿಯ ಬಗ್ಗೆ ಯಾರು ಕೇಳಬೇಕು. ಜಿಮ್‌ಗೆ ಬೇಕಾದ ಪರಿಕರಗಳು ಸರ್ಕಾರದಿಂದ ಸರಬರಾಜು ಆದರೂ ಅವುಗಳನ್ನು ಸಾರ್ವಜನಿಕರ ಬಳಕೆಗೆ ನೀಡುತ್ತಿಲ್ಲ. ಅವು ಕಚೇರಿಯಲ್ಲಿಯೇ ಕೊಳೆಯುತ್ತಿವೆ’ ಎಂದು ವ್ಯಾಯಾಮ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಯುವಕರು ಆರೋಪಿಸಿದರು.

‘ವ್ಯಾಯಾಮ ಶಾಲೆಯಲ್ಲಿ ಮೇಲ್ವಿಚಾರಣೆಗೆ ಯಾರೊಬ್ಬರನ್ನೂ ನೇಮಿಸಿಲ್ಲ. ಪ್ರವೇಶಕ್ಕೆ ಯಾವುದೇ ನಿರ್ಬಂಧವೂ ವಿಧಿಸಿಲ್ಲ. ಇದರಿಂದ ಯಾರು ಬೇಕಾದರೂ ಪ್ರವೇಶ ಪಡೆಯಬಹುದು. ಇದುವರೆಗೆ ಜಿಮ್‌ನಲ್ಲಿದ್ದ ಅನೇಕ ಪರಿಕರಗಳು ಕಾಣೆಯಾಗಿವೆ. ಆಗೊಮ್ಮೆ, ಹೀಗೊಮ್ಮೆ ಇಲ್ಲಿಗೆ ಬರುವವರು ಯಾರಿಗೂ ಗೊತ್ತಾಗದಂತೆ ಪರಿಕರಗಳನ್ನು ಕದಿಯುತ್ತಿದ್ದಾರೆ. ರಕ್ಷಣೆ ನೀಡಬೇಕಿದ್ದ ಅಧಿಕಾರಿಗಳು ಮಾತ್ರ ಗಾಢ ನಿದ್ರೆಗೆ ಜಾರಿದ್ದಾರೆ’ ಎಂಬುವುದು ಕ್ರೀಡಾಪಟುಗಳ ಆರೋಪ.

ಜಿಮ್‌ನಲ್ಲಿ ಮೂಲೆ ಸೇರಿದ ಉಪಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.