
ತುಮಕೂರಿನಲ್ಲಿ ಶುಕ್ರವಾರ ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ (ಎಎಂಪಿಕೆ) ಕಾರ್ಯಕ್ರಮದಡಿ ವಿದ್ಯಾರ್ಥಿಗಳ ರಕ್ತ ಪರೀಕ್ಷೆ ಮಾಡಲಾಯಿತು. ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ ಸಿಇಒ ಜಿ.ಪ್ರಭು, ಡಿಎಚ್‌ಒ ಡಾ.ಡಿ.ಎನ್.ಮಂಜುನಾಥ್ ಇದ್ದಾರೆ
ತುಮಕೂರು: ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ (ಎಎಂಪಿಕೆ) ಕಾರ್ಯಕ್ರಮಕ್ಕೆ ನಗರದ ಎಂಪ್ರೆಸ್ ಕಾಲೇಜಿನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ಕಾರ್ಯಕ್ರಮದಡಿ ಪಿಯುಸಿ, ಪದವಿ ಕಾಲೇಜಿನ ಸುಮಾರು 57 ಸಾವಿರ ಮಕ್ಕಳಿಗೆ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ 10ನೇ ತರಗತಿಯ ಒಳಗಿನ ಮಕ್ಕಳ ರಕ್ತ ಪರೀಕ್ಷೆಗೆ ಕ್ರಮಕೈಗೊಳ್ಳಲಾಗುತ್ತದೆ. ರಕ್ತ ಹೀನತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಕಬ್ಬಿಣಾಂಶದ ಮಾತ್ರೆ, ಸಿರಫ್, ಫಾಲಿಕ್ ಆಸಿಡ್ ಮಾತ್ರೆ ವಿತರಿಸಲಾಗುತ್ತದೆ.
ಎಲ್ಲ ಶಾಲಾ–ಕಾಲೇಜುಗಳ ಮಕ್ಕಳಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಪರೀಕ್ಷಿಸಿ ಮಕ್ಕಳಲ್ಲಿ ಸಾಧಾರಣ, ಮಧ್ಯಮ, ತೀವ್ರತರವಾದ ರಕ್ತಹೀನತೆ ಗುರುತಿಸಲಾಗುತ್ತದೆ. ಪೌಷ್ಟಿಕ ಆಹಾರ, ಮಾತ್ರೆಗಳ ಸೇವನೆಯ ಬಗ್ಗೆ ತಿಳಿಸಲಾಗುತ್ತದೆ. ಮೊದಲ ಹಂತದಲ್ಲಿ 50 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಹಿಮೋಗ್ಲೋಬಿನ್ ಪರೀಕ್ಷೆ ಮಾಡಲಾಗುತ್ತಿದೆ.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ವಾರದಲ್ಲಿ 2ರಿಂದ 3 ಬಾರಿ ಸೊಪ್ಪು, ತರಕಾರಿ ಸೇವಿಸುವುದರಿಂದ ರಕ್ತಹೀನತೆ ಉಂಟಾಗುವುದಿಲ್ಲ. ಎಲ್ಲರು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎನ್.ಮಂಜುನಾಥ್, ‘ಪ್ರಸ್ತುತ ಮಕ್ಕಳಲ್ಲಿ ತುಂಬಾ ರಕ್ತಹೀನತೆ ಕಂಡು ಬರುತ್ತಿದೆ. ಮಕ್ಕಳಲ್ಲಿ ಹಿಮೋಗ್ಲೋಬಿನ್ ಎಷ್ಟಿದೆ ಎಂಬುದನ್ನು ಕಂಡು ಹಿಡಿದು, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಆರ್‌ಸಿಎಚ್‌ಒ ಡಾ.ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್.ಶ್ರೀಧರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.