ADVERTISEMENT

24 ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

ಶಿರಾ ಕೋಟೆ ಏರಿದ ಕೇಸರಿ ಧ್ವಜ l ನೆಲ ಕಚ್ಚಿದ ಜೆಡಿಎಸ್ l ಕಾಂಗ್ರೆಸ್‌ಗೂ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 5:54 IST
Last Updated 11 ನವೆಂಬರ್ 2020, 5:54 IST

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ 24 ಸುತ್ತುಗಳಲ್ಲಿಯೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತು. ಮೊದಲ ಸುತ್ತಿನಲ್ಲಿಯೇ 700 ಮತಗಳ ಮುನ್ನಡೆ ಮೂಲಕ ಖಾತೆ ಆರಂಭಿಸಿದ ಬಿಜೆಪಿ ಹಂತ ಹಂತವಾಗಿ ಬಲವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿತು.

ಪ್ರತಿ ಹಂತದಲ್ಲಿಯೂ ಮುನ್ನಡೆ ಸಾಧಿಸುತ್ತಲೇ ಹೋಯಿತು. 13ನೇ ಸುತ್ತಿನ ವೇಳೆಗೆ ‌‌‌‌ಒಟ್ಟು 7,700 ಮತಗಳ ಮುನ್ನಡೆ ಪಡೆಯಿತು. ಆದರೆ 14 ಮತ್ತು 15ನೇ ಸುತ್ತಿನಲ್ಲಿ ರೋಚಕ ಎನ್ನುವ ರೀತಿಯಲ್ಲಿ ಮುನ್ನಡೆ ಕಡಿಮೆ ಆಯಿತು. 1,300ಕ್ಕೆ ಮುನ್ನಡೆ ಕುಸಿಯಿತು. ಆದರೆ ನಂತರ ಕೊನೆಯ ಸುತ್ತಿನವರೆಗೂ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಿಂತ ಹೆಚ್ಚು ಮತಗಳನ್ನು ಪಡೆಯುತ್ತಲೇ ಮುನ್ನುಗ್ಗಿತು.

ಐದು ಸುತ್ತುಗಳ ಎಣಿಕೆ ಪೂರ್ಣವಾದಾಗ ಬಿಜೆಪಿ ಕಾರ್ಯಕರ್ತರಲ್ಲಿ ಗೆಲುವಿನ ವಿಶ್ವಾಸ ಗರಿಗೆದರಿತು. ಮತ ಎಣಿಕೆ ನಡೆಯುತ್ತಿದ್ದ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದ ಬಿ.ಎಚ್‌.ರಸ್ತೆಯ ಎರಡೂ ಬದಿಗಳಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ಗೌಡ ಸಹ ಹಾಜರಾದರು. ಪಕ್ಷದ ಪರ ಜಯಘೋಷಗಳನ್ನು ಮೊಳಗಿಸಿದರು. ವಿಜಯದ ಸಂಕೇತವನ್ನು ಬೀರಿದರು.

ADVERTISEMENT

ಅಂತರ 10 ಸಾವಿರ ದಾಟುತ್ತಿದ್ದಂತೆ ಕಾರ್ಯಕರ್ತರ ವಿಜಯೋತ್ಸವ ಮತ್ತಷ್ಟು ಹೆಚ್ಚಿತ್ತು. ಅಷ್ಟರಲ್ಲಾಗಲೇ ಬಿಜೆಪಿ ಅಭ್ಯರ್ಥಿಯಾಗಿದ್ದ ರಾಜೇಶ್‌ಗೌಡ, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಥಳಕ್ಕೆ ಬಂದರು. ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿ ಜಯದ ಘೋಷಣೆಗಳನ್ನು ಮೊಳಗಿಸಿದರು.

ಬಿಜೆಪಿ ವಿಜಯದತ್ತ ಮುನ್ನುಗ್ಗುತ್ತಿದೆ ಎನ್ನುವುದು ಅರಿವಾದ ತಕ್ಷಣವೇ ಬಿ.ಎಚ್‌.ರಸ್ತೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಂದ ತೆರಳಿದರು. ಮತ ಎಣಿಕೆ ಕೇಂದ್ರದ ಬಳಿ ಜೆಡಿಎಸ್‌ನ ಯಾವುದೇ ಕಾರ್ಯಕರ್ತರೂ ಹಾಜರಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.