ADVERTISEMENT

ಮಾದರಿ‌ ವಿಧಾನಸಭಾ ಅಧಿವೇಶನ ಸ್ಪರ್ಧೆ: ಕಾನೂನು ವಿದ್ಯಾರ್ಥಿಗೆ ‘ಅಧಿವೇಶನದ ಪಾಠ‌’

ಮಾದರಿ‌ ವಿಧಾನಸಭಾ ಅಧಿವೇಶನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 5:38 IST
Last Updated 11 ನವೆಂಬರ್ 2025, 5:38 IST
<div class="paragraphs"><p>ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಸುಫಿಯ ಕಾನೂನು ಮಹಾವಿದ್ಯಾಲಯದಿಂದ ಆಯೋಜಿಸಿದ್ದ ‘ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ’ಯಲ್ಲಿ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಪ್ರೊ.ಸಿ.ಎಸ್‌.ಪಾಟೀಲ್‌ ಮಾತನಾಡಿದರು.&nbsp;&nbsp;</p></div>

ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಸುಫಿಯ ಕಾನೂನು ಮಹಾವಿದ್ಯಾಲಯದಿಂದ ಆಯೋಜಿಸಿದ್ದ ‘ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ’ಯಲ್ಲಿ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಪ್ರೊ.ಸಿ.ಎಸ್‌.ಪಾಟೀಲ್‌ ಮಾತನಾಡಿದರು.  

   

ತುಮಕೂರು: ಹೆಚ್ಚಿದ ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ, ಸರ್ಕಾರದಲ್ಲಿ ಸೊರಗಿದ ಕನ್ನಡ ಪ್ರೇಮ ವಿಚಾರಗಳು ‘ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ’ಯಲ್ಲೂ ಪ್ರತಿಧ್ವನಿಸಿದವು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಸುಫಿಯ ಕಾನೂನು ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಕಾನೂನು ವಿದ್ಯಾರ್ಥಿಗಳ ವಲಯ ಮಟ್ಟದ ‘ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ’ ಕಲಾಪದ ಬಗ್ಗೆ ಪರಿಚಯಿಸಿತು. ತೀರ್ಪುಗಾರರು ಸ್ಪರ್ಧಾರ್ಥಿಗಳಿಗೆ ಮಾದರಿ ‘ನಡೆ–ನುಡಿ’ ಕುರಿತು ತಿಳಿಸಿಕೊಟ್ಟರು.

ADVERTISEMENT

ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ಉಡುಪಿ ಜಿಲ್ಲೆಗಳ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿರೋಧ ಪಕ್ಷ, ಆಡಳಿತ ಪಕ್ಷ ಎಂದು ವಿಂಗಡಿಸಿ ಸ್ಪರ್ಧೆಗೆ ಅಣಿಗೊಳಿಸಲಾಯಿತು. ವಿಧಾನಸಭಾ ಸಭಾಪತಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರಾಗಿಯೂ ಕೆಲವರು ಗಮನ ಸೆಳೆದರು.

‘ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. 100 ಜನ ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆಯಾದರೆ ಕನಿಷ್ಠ ಒಬ್ಬರಿಗೂ ಕೂಡ ಶಿಕ್ಷೆಯಾಗುತ್ತಿಲ್ಲ’ ಎಂದು ಪ್ರಶ್ನೋತ್ತರ ಅವಧಿಯಲ್ಲಿ ವಿರೋಧ ಪಕ್ಷದ ಶಾಸಕರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದರು.

‘ಪೋಕ್ಸೊ ನಿಯಂತ್ರಣಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಜಾಗೃತಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಡಿಜಿಟಲ್ ಮೂಲಕವೂ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ’ ಎಂದು ಗೃಹ ಮಂತ್ರಿ ಸ್ಪಷ್ಟನೆ ನೀಡಿದರು.

ವಿಧಾನಸಭೆ ಅಧಿವೇಶನದಂತೆ ಇಲ್ಲಿಯೂ ವಿಪಕ್ಷ ಶಾಸಕರು ಮತ್ತು ಸಚಿವರ ಮಧ್ಯೆ ವಾಗ್ವಾದ ನಡೆಯಿತು. ತೀರ್ಪುಗಾರರು ಮಧ್ಯೆ‌ಪ್ರವೇಶಿಸಿ, ಅನಾವಶ್ಯಕವಾಗಿ ಗೊಂದಲ‌ ಉಂಟು ಮಾಡಿದರೆ ಅಂಕ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

ಗ್ರಂಥಾಲಯದಲ್ಲಿ ಪುಸ್ತಕ ಕೊರತೆ, ಮುಚ್ಚುವ ಹಂತ ತಲುಪಿದ ಸರ್ಕಾರಿ ಶಾಲೆ, ಗುಣಮಟ್ಟದ ಶಿಕ್ಷಣದ ಕೊರತೆ ಸೇರಿ ಹಲವು ವಿಚಾರಗಳು ಕುರಿತು ಚರ್ಚೆ ನಡೆಸಿದರು. ತೀರ್ಪುಗಾರರು ಎಲ್ಲರ ನಡೆ-ನುಡಿ ಗಮನಿಸಿ ಅಂಕ ನೀಡಿದರು.

‘ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ’ಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ಸರ್ವಾಧಿಕಾರದಿಂದ ರಾಜ್ಯ ನಾಶ

‘ಪ್ರಜಾಪ್ರಭುತ್ವ ಉಳಿಸಿಕೊಳ್ಳದಿದ್ದರೆ ಸರ್ವಾಧಿಕಾರ ಅಸ್ತಿತ್ವಕ್ಕೆ ಬರುತ್ತದೆ. ಸರ್ವಾಧಿಕಾರ ತುಂಬಾ ದಿನ ಉಳಿಯುವುದಿಲ್ಲ. ಆದರೆ ಅದು ರಾಜ್ಯವನ್ನು ಹಾಳು ಮಾಡುತ್ತದೆ. ಪ್ರಜಾಪ್ರಭುತ್ವದ ಬೇರುಗಳು ಸಮಾಜದಲ್ಲಿ ಆಳವಾಗಿ ಬೇರೂರಬೇಕು’ ಎಂದು ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಪ್ರೊ.ಸಿ.ಎಸ್‌.ಪಾಟೀಲ್‌ ಅಭಿಪ್ರಾಯಪಟ್ಟರು. ‘ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ’ ಉದ್ಘಾಟಿಸಿ ಮಾತನಾಡಿದರು. ಸಂಸದೀಯ ವ್ಯವಹಾರಗಳಲ್ಲಿ ಎಲ್ಲರು ಸಮಾನರು. ವಕೀಲರ ಮೇಲೆ ತುಂಬಾ ಜವಾಬ್ದಾರಿ ಇದೆ. ಕಾನೂನು ವಿದ್ಯಾರ್ಥಿಗಳು‌ ಸತ್ವ ಮೈಗೂಡಿಸಿಕೊಂಡು ಜ್ಞಾನ ಸಂಪಾದಿಸಿ ಹೊರಗಡೆ ಹೋದರೆ ಹೆಚ್ಚಿನ ಗೌರವ ಸಿಗುತ್ತದೆ ಎಂದರು. ಶಾಸಕ‌ ಜಿ.ಬಿ.ಜ್ಯೋತಿಗಣೇಶ್ ಮಾಜಿ‌ ಶಾಸಕ ರಫೀಕ್‌ ಅಹ್ಮದ್ ಜಿ.ಪಂ ಸಿಇಒ ಜಿ.ಪ್ರಭು ಕಾನೂನು ಮತ್ತು ಸಂಸದೀಯ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ರೇವಯ್ಯ ಒಡೆಯರ್ ಸುಫಿಯ ಕಾನೂನು ಕಾಲೇಜು ಸಿಇಒ ಮಹ್ಮದ ಜೈದ್ ಪ್ರಾಂಶುಪಾಲ ಎಸ್.ರಮೇಶ್ ತೀರ್ಪುಗಾರ ಪ್ರೊ.ಪ್ರಸನ್ನಕುಮಾರ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.