ADVERTISEMENT

ಪದೇ ಪದೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ನರಭಕ್ಷಕ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 11:50 IST
Last Updated 18 ಮಾರ್ಚ್ 2020, 11:50 IST
ಸೆರೆಸಿಕ್ಕ ನರಭಕ್ಷಕ ಚಿರತೆ
ಸೆರೆಸಿಕ್ಕ ನರಭಕ್ಷಕ ಚಿರತೆ   

ತುಮಕೂರು: ಜನ, ಜಾನುವಾರಗಳ ಮೇಲೆ ಪದೇ ಪದೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಚಿರತೆಗಳ ಪೈಕಿ ಒಂದು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ತುಮಕೂರು ಗ್ರಾಮಾಂತರ ಹೆಬ್ಬೂರು ಹೋಬಳಿ ಹಾಲನೂರು ಸಮೀಪ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಸೋಮವಾರ ಬೆಳಿಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಸ್ಥಳೀಯರು ಮಾಹಿತಿ ನೀಡಿದ್ದ ಸ್ಥಳದ ಸಮೀಪ ಕಾಲುವೆಯೊಂದರಲ್ಲಿ ಚಿರತೆ ಅಡಗಿಕೊಂಡಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ.

ನಂತರ ಚಿರತೆ ತಪ್ಪಿಸಿಕೊಳ್ಳದಂತೆ ಕಾಲುವೆಯ 2 ಬದಿಯಲ್ಲಿ ಬಲೆ ಹಿಡಿದು ಚಿರತೆಗೆ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ. ಕಾರ್ಯಾಚರಣೆ ತಂಡದಲ್ಲಿ 2 ದಿನಗಳ ಹಿಂದೆಯಷ್ಟೇ ಡೆಹರಾಡೂನ್‌ನಿಂದ ಕರೆಸಿಕೊಂಡಿದ್ದ ವೈದ್ಯ ಸನತ್‌, ತುಮಕೂರು, ಗುಬ್ಬಿ, ಕುಣಿಗಲ್‌ನ ಆರ್‌ಎಫ್‌ಒ ಸೇರಿದಂತೆ 25 ಜನರಿದ್ದರು.

ADVERTISEMENT

ನರಭಕ್ಷಕ ಚಿರತೆ ಸಾಧ್ಯತೆ

ಇದೀಗ ಸೆರೆಯಾಗಿರುವ ಚಿರತೆ ಜನರ ಮೇಲೆ ದಾಳಿ ಮಾಡಿದ ನರಭಕ್ಷಕ ಚಿರತೆ ಹೌದೋ, ಅಲ್ಲವೋ ಎನ್ನುವ ಚರ್ಚೆ ಆರಂಭವಾಗಿದೆ. ಆದರೆ, ಇತ್ತೀಚೆಗೆ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಬೈಚೇನಹಳ್ಳಿಯಲ್ಲಿ ಮಗುವನ್ನು ಕೊಂದ ಸ್ಥಳದಿಂದ ಕೇವಲ 10 ಕಿ.ಮೀ ವ್ಯಾಪ್ತಿಯಲ್ಲಿ ಈ ಚಿರತೆ ಸೆರೆ ಸಿಕ್ಕಿದೆ. ಅಲ್ಲದೆ, ಇದು ಹೆಣ್ಣು ಚಿರತೆ ಆಗಿರುವುದರಿಂದ ನರಭಕ್ಷಕ ಚಿರತೆಯೇ ಆಗಿರುವ ಸಾಧ್ಯತೆ ಇದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ‘ಪ್ರಜಾವಾಣಿ’ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.