ADVERTISEMENT

ಗುಬ್ಬಿ | ಸಾಹಿತ್ಯದಲ್ಲಷ್ಟೇ ಎಲ್ಲರನ್ನೂ ಒಳಗೊಳ್ಳಲು ಸಾಧ್ಯ: ಮುಕುಂದರಾಜ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 7:07 IST
Last Updated 6 ಡಿಸೆಂಬರ್ 2025, 7:07 IST
ಗುಬ್ಬಿಯಲ್ಲಿ ಶುಕ್ರವಾರ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಜನ
ಗುಬ್ಬಿಯಲ್ಲಿ ಶುಕ್ರವಾರ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಜನ   

ಗುಬ್ಬಿ: ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವೇ ಎಲ್ಲರನ್ನೂ ಒಳಗೊಳ್ಳಲು ಸಾಧ್ಯವಾಗಲಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌ ಹೇಳಿದರು.

ಪಟ್ಟಣದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಆಯೋಜಿಸಿದ್ದ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಇದೇ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿ ವಿತರಿಸುವ ಮೂಲಕ ಅಕಾಡೆಮಿ ದಾಖಲೆ ಮಾಡಿದೆ. ಗುಬ್ಬಿ ತಾಲ್ಲೂಕು ಕವಿ ಸ್ಥಾನ, ಗುಬ್ಬಿ ವೀರಣ್ಣ ಅವರ ಕಾರ್ಯ ಸ್ಥಳ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಮನ ಸೆಳೆದಿದೆ. ಹೀಗಾಗಿ ಇಂತಹ ಮಹತ್ವದ ಸ್ಥಳ ಆಯ್ಕೆ ಮಾಡಿಕೊಂಡು ಪ್ರಶಸ್ತಿ ನೀಡಲಾಗಿದೆ ಎಂದರು.

ADVERTISEMENT

ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್‌.ಆರ್‌.ಶ್ರೀನಿವಾಸ್‌, ‘ಸಾಹಿತಿಗಳು ಸಮಾಜವನ್ನು ಪರಿವರ್ತನೆ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಾರೆ. ಅಭಿರುಚಿ, ಶ್ರಮ, ಆಸಕ್ತಿಯಿಂದ ಸಕ್ರಿಯವಾಗಿ ತೊಡಗಿಸಿಕೊಂಡರೆ ಉತ್ತಮ ಸಾಹಿತ್ಯ ಮೂಡಿಬರಲಿದೆ. ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

1977ರಲ್ಲಿ ನನಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು, ಈಗ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಘಟನೆಯನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಈ ಎರಡೂ ಅವಿಸ್ಮರಣೀಯ ಕ್ಷಣಗಳು ಎಂದು ಬಣ್ಣಿಸಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಸಾಹಿತಿ ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ‘ಅಕಾಡೆಮಿ ವಾಕ್‌ ಸ್ವಾತಂತ್ರ್ಯ, ಮಾನವೀಯ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ವಿಶ್ವಾಸಾರ್ಹತೆ, ಪಾರದರ್ಶಕತೆ ಕಾಯ್ದುಕೊಂಡಿದೆ. ತಳ ಸಮುದಾಯ ಸೇರಿದಂತೆ ಎಲ್ಲ ವರ್ಗದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದು ಹೆಮ್ಮೆಯ ವಿಚಾರ’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ, ‘ಸಾಹಿತ್ಯ ಕಾರ್ಯಕ್ರಮ ಬೆಂಗಳೂರು ಕೇಂದ್ರಿತವಾಗಬಾರದು ಎಂಬ ಉದ್ದೇಶದಿಂದ ಅಕಾಡೆಮಿ ಅಧ್ಯಕ್ಷರು ಗ್ರಾಮೀಣ ಭಾಗಕ್ಕೆ ವಿಸ್ತರಿಸಿದ್ದಾರೆ. ಉಳಿದ ಅಕಾಡೆಮಿಗಳು ಹೆಚ್ಚು ಅನುದಾನ ಕೇಳುತ್ತಿವೆ. ಸಾಧ್ಯವಾದಷ್ಟು ನೆರವು ನೀಡಲಾಗುತ್ತಿದೆ’ ಎಂದು ಹೇಳಿದರು.

ಸಾಹಿತಿ ಚಂದ್ರಶೇಖರ ಕಂಬಾರ ಪ್ರಶಸ್ತಿ ಪ್ರದಾನ ಮಾಡಿದರು. ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಆರ್‌.ವೆಂಕಟೇಶ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್‌.ಸಿದ್ಧಲಿಂಗಪ್ಪ, ಸಾಹಿತ್ಯ ಅಕಾಡೆಮಿ ಸದಸ್ಯರಾದ ಸುಮಾ ಸತೀಶ್‌, ಅಕ್ಕೈ ಪದ್ಮಶಾಲಿ, ರಿಜಿಸ್ಟ್ರಾರ್‌ ಎನ್‌.ಕರಿಯಪ್ಪ ಇತರರು ಪಾಲ್ಗೊಂಡಿದ್ದರು.

ಹರಿಕಥಾ ವಿದ್ವಾನ್‌ ಲಕ್ಷ್ಮಣದಾಸ್‌ ಕಾರ್ಯಕ್ರಮ ನಡೆಸಿಕೊಟ್ಟರು
ರಂಗ ಮಂದಿರ ಮಹಾಮನೆಯಾಗಿದ್ದು ಮಂದಿರ ಕಟ್ಟಿಸಿದ್ದಕ್ಕೂ ಸಾರ್ಥಕವಾಯಿತು. ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿರುವುದು ಪುಣ್ಯದ ಕೆಲಸ. ಗುಬ್ಬಿ ಒಂದು ರೀತಿಯಲ್ಲಿ ಪಾವನವಾಯಿತು
ಬಿ.ಜಯಶ್ರೀ ಹಿರಿಯ ನಟಿ
ಬೀದಿಯಲ್ಲಿ ಮಾತನಾಡಬಾರದು
ಅಕಾಡೆಮಿ ಏನು ಕೆಲಸ ಮಾಡುತ್ತಿದೆ ಎಂದು ಬೀದಿಯಲ್ಲಿ ನಿಂತು ಮಾತನಾಡುವುದು ಸುಲಭ. ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಕಷ್ಟ. ಸಾಹಿತ್ಯ ಅಕಾಡೆಮಿ ಅಂತಹ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ. ಸಾಧಕರನ್ನು ಹುಡುಕಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರತಿಭಾ ನಂದಕುಮಾರ್‌ ಲೇಖಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.