ಪಾವಗಡ: ಸರ್ಕಾರಿ ಕಚೇರಿಗಳಲ್ಲಿ ಅನಗತ್ಯವಾಗಿ ಕಿರಿಕಿರಿ ನೀಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾದಿಕಾರಿಗಳು ಶುಕ್ರವಾರ ತಹಶೀಲ್ದಾರ್ ವರದರಾಜು ಅವರಿಗೆ ಮನವಿ ಸಲ್ಲಿಸಿದರು.
ಆರ್.ಟಿ.ಐ, ಭ್ರಷ್ಟಚಾರ ನಿಗ್ರಹ, ಇತ್ಯಾದಿ ಹೆಸರುಗಳಲ್ಲಿ ಕಚೇರಿಗೆ ಬರುವ ಕೆಲ ನೌಕರರು ಕೆಲಸ ಮಾಡುವುದಕ್ಕೂ ಬಿಡದೆ ‘ಲೈವ್ ವಿಡಿಯೊ’ ಮಾಡಿ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಸರ್ಕಾರಿ ನೌಕರರಿಗೆ ಕಿರಿಕಿರಿಯಾಗುತ್ತಿದೆ. ಪ್ರಾಮಾಣಿಕ, ಪಾರದರ್ಶಕವಾಗಿ ಕೆಲಸ ಮಾಡಲೂ ಸಾಧ್ಯವಾಗದ ಸ್ಥಿತಿ ಇದೆ ಎಂದು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಆರೋಪಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಸರ್ಕಾರಿ ಕಚೇರಿಗಳಿಗೆ ಬರುವ ಕೆಲವರು ಆರ್‌ಟಿಐ, ಭ್ರಷ್ಟಾಚಾರ ನಿಗ್ರಹ ಇತ್ಯಾದಿ ಹೆಸರು ಹೇಳಿಕೊಂಡು ಸರ್ಕಾರಿ ನೌಕಕರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಮಹಿಳಾ ನೌಕರರು ಸೇರಿದಂತೆ ನೌಕರರ ವಿಡಿಯೊ ಮಾಡಿ ಹರಿಬಿಟ್ಟು, ಕಚೇರಿಗಳ ವಾತಾವರಣ ಹದಗೆಡಿಸುತ್ತಿದ್ದಾರೆ. ನೌಕರರು ಕೆಲಸ ಮಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.
ನೌಕರರನ್ನು ಬೆದರಿಸುವುದು, ಹಣಕ್ಕೆ ಬೇಡಿಕೆ ಇಡುವುದು, ಅವರಿಗೆ ಬೇಕಾದ ರೀತಿ ಕಡತಗಳನ್ನು ಸಿದ್ಧಡಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ನೌಕರರಿಗೆ ಮಾನಸಿಕವಾಗಿ ಹಿಂಸೆ ಆಗುತ್ತಿದ್ದು, ಕಚೇರಿಗಳಲ್ಲಿ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ದೂರಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ವರದರಾಜು, ಸರ್ಕಾರಿ ನೌಕರರ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಂ.ಎಲ್. ಮಾರುತೇಶ್, ಖಜಾಂಚಿ ಶೇಖರಬಾಬು, ರಾಜ್ಯ ಪರಿಷತ್ ಸದಸ್ಯ ಗಂಗಾಧರ, ಉಪಾಧ್ಯಕ್ಷ ಗಂಗಾಧರ, ಕೆ.ರಾಮಾಂಜನೇಯ, ನಿರ್ದೇಶಕ ರವಿಪ್ರಕಾಶ್, ಮುಕ್ತಿಯಾರ್, ಕಂದಾಯ ಇಲಾಖೆ ರಾಜೇಶ್, ಪದ್ಮ, ರಾಜಗೋಪಾಲ್, ಷಣ್ಮುಕಾರಾದ್ಯ, ಆಸಿಫ್, ತಿಮ್ಮಾರೆಡ್ಡಿ, ರಾಮಲಿಂಗ, ರವಿಕುಮಾರ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.