ADVERTISEMENT

ಕಾರ್ಯಕ್ರಮಕ್ಕೆ ಆಹ್ವಾನಿಸದ ಅಧಿಕಾರಿಗಳು

ಸಾಮಾನ್ಯ ಸಭೆಯಲ್ಲಿ ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಆರೋಪ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 20:15 IST
Last Updated 5 ಡಿಸೆಂಬರ್ 2019, 20:15 IST
ಮಧುಗಿರಿ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಮಾತನಾಡಿದರು
ಮಧುಗಿರಿ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಮಾತನಾಡಿದರು   

ಮಧುಗಿರಿ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲ ಎಂದು ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಆರೋಪಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ನಾವೂ ಕೂಡ ಚುನಾಯಿತರಾಗಿ ಆಯ್ಕೆಯಾಗಿದ್ದು, ನಮಗೂ ಸಹ ಗೌರವ ಕೊಡುವ ಪರಿಪಾಠವನ್ನು ಅಧಿಕಾರಿಗಳು ರೂಢಿಸಿಕೊಳ್ಳಬೇಕು’ ಎಂದರು.

ADVERTISEMENT

ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗಾಗಿ ₹ 5 ಸಾವಿರದಿಂದ ₹ 10 ಸಾವಿರದವರೆಗೂ ಲಂಚ ಕೇಳುತ್ತಿದ್ದಾರೆ. ಇಂತಹ ವ್ಯವಸ್ಥೆಗಳಿಗೆ ಕಡಿವಾಣ ಹಾಕಬೇಕೆಂದು ಅಧ್ಯಕ್ಷರು ಸೂಚಿಸಿದರು.

ಕುಪ್ಪಾಚಾರಿ ರೊಪ್ಪದಿಂದ ಹಾವೆಕಟ್ಟೆ ರಸ್ತೆ ಅಭಿವೃದ್ಧಿ ಕಾಮಗಾರಿಯು ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು, ತುಂಬಾ ಕಳಪೆಯಿಂದ ಕೂಡಿದೆ. ಯಾವುದೇ ಕಾರಣಕ್ಕೂ ಇದರ ಬಿಲ್ ಮಾಡಬಾರದು ಎಂದು ಸದಸ್ಯ ರಂಗನಾಥ್ ಸಭೆಯ ಗಮನಕ್ಕೆ ತಂದರು.

ಗ್ರಾಮೀಣ ಪ್ರದೇಶದಲ್ಲಿ ನಿರ್ಭಯವಾಗಿ ಅಕ್ರಮ ಮದ್ಯವನ್ನು ಮಾರಾಟ ಮಾಡುತ್ತಿದ್ದರೂ, ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದ ಹಳ್ಳಿಯಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿ ವ್ಯಾಜ್ಯಗಳು ಹೆಚ್ಚಾಗುತ್ತವೆ ಎಂದು ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಿಡಿಗೇಶಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಯಶೋಧಮ್ಮ ಮಾತನಾಡಿ, ‘ಮಿಡಿಗೇಶಿ ಗ್ರಾಮದಲ್ಲಿ ಈಚೆಗೆ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮ ನಡೆದಿದ್ದು, ಅಧಿಕಾರಿಗಳು ನಮ್ಮನ್ನು ಆಹ್ವಾನಿಸಿಲ್ಲ. ನಾನೂ ಸಹ ಶಾಸಕರಂತೆ ಜನರಿಂದ ಮತ ಪಡೆದು ಚುನಾಯಿತನಾದ್ದೇನೆ’ ಎಂದು ಕೆ.ಆರ್.ಐ.ಡಿ.ಎಲ್ ಅಧಿಕಾರಿ ಹನುಂತರಾಯಪ್ಪ ಅವನನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಇಒ ಡಿ.ದೊಡ್ಡಸಿದ್ದಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪಶು ವೈದ್ಯ ಕೇಂದ್ರ ಉನ್ನತೀಕರಣಕ್ಕೆ ಪ್ರಸ್ತಾವ

ಪಶು ವೈದ್ಯ ಇಲಾಖೆಯಿಂದ 40 ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗಿದೆ. ಗೊಂದಿಹಳ್ಳಿ ಮತ್ತು ಸಜ್ಜೆ ಹೊಸಹಳ್ಳಿ ಗ್ರಾಮಗಳಿಗೆ ನೂತನ ಪಶು ವೈದ್ಯ ಕೇಂದ್ರದ ಕಟ್ಟಡ ಮಂಜೂರಾಗಿವೆ. ತೆರೆಯೂರು, ನಿಟ್ರಹಳ್ಳಿ ಕ್ರಾಸ್, ಮರುವೇಕೆರೆ, ಕೊಂಡವಾಡಿ ಮತ್ತು ಕೋಡ್ಲಾಪುರ ಗ್ರಾಮಗಳಿಗೆ ಪಶು ವೈದ್ಯ ಕೇಂದ್ರ ಕಟ್ಟಡದ ಅವಶ್ಯಕತೆ ಇದ್ದು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಗರಣಿ, ತಗ್ಗಿಹಳ್ಳಿ, ಕೊಂಡವಾಡಿ, ಕವಣದಾಲ ಮತ್ತು ರಂಟವಳಲು ಗ್ರಾಮದಲ್ಲಿರುವ ಪ್ರಾಥಮಿಕ ಪಶು ವೈದ್ಯ ಕೇಂದ್ರಗಳನ್ನು ಉನ್ನತೀಕರಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ತಾ.ಪಂ ಸಮಿತಿ ಶಿಫಾರಸು ಮಾಡಬೇಕು ಎಂದುಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕಡಾ.ನಾಗಭೂಷಣ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.