ಮಧುಗಿರಿ: ತಾಲ್ಲೂಕು ಹಾಗೂ ಪಟ್ಟಣ ಅಭಿವೃದ್ಧಿಗೊಳ್ಳುತ್ತಿದೆ. ಇದರಿಂದ ಭೂಮಿ ಬೆಲೆ ಗಗನಕ್ಕೆ ಹೇರಿದೆ. ಉಳ್ಳವರು ಜಮೀನು ಹಾಗೂ ನಿವೇಶನ ಖರೀದಿ ಮಾಡುತ್ತಿದ್ದಾರೆ. ಆದರೆ, ಬಡವರು ಮಾತ್ರ ಒಂದೇ ಒಂದು ನಿವೇಶನ ಖರೀದಿ ಮಾಡಲು ಹರ ಸಾಹಸಪಡುವಂತಾಗಿದೆ.
ಮರಸಭೆ ವ್ಯಾಪ್ತಿಯಲ್ಲಿ ಬಡವರಿಗಾಗಿ ನಿವೇಶನ ಹಂಚಿಕೆ ಮಾಡಿ 25 ವರ್ಷ ಕಳೆದಿದೆ. ನಿವೇಶನಕ್ಕಾಗಿ ಪುರಸಭೆಗೆ ಅರ್ಜಿ ನೀಡುತ್ತಿದ್ದಾರೆಯೇ ಹೊರತು; ನಿವೇಶನ ಮಾತ್ರ ಇದುವರೆಗೂ ಸಿಕ್ಕಿಲ್ಲ.
ಪಟ್ಟಣದ ವ್ಯಾಪ್ತಿಯಲ್ಲಿ ಉಚಿತ ನಿವೇಶನ ಹಂಚಿಕೆ ಮಾಡಲು ಪುರಸಭೆ ಸದಸ್ಯರೆಲ್ಲರೂ ಸೇರಿ ತೀರ್ಮಾನ ಮಾಡಬೇಕಿತ್ತು. ಆದರೆ, ಕೆಲ ಸದಸ್ಯರು ಭೂಮಿ ಖರೀದಿ ಮಾಡಿ ಬಡವಾಣೆಗಳನ್ನು ನಿರ್ಮಿಸಿಕೊಂಡು ಸ್ವಂತ ಲಾಭದ ಕಡೆ ಮುಖ ಮಾಡಿದ್ದಾರೆ. ಇದರಿಂದ ಬಡವರಿಗೆ ಉಚಿತ ನಿವೇಶನದ ಕನಸು ನನಸಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಚಿಕ್ಕ ಮನೆಯಲ್ಲಿಯೇ 8 ರಿಂದ 10 ಮಂದಿ ವಾಸ ಮಾಡುವ ಸ್ಥಿತಿ ಇದೆ. ಈ ಸಮಸ್ಯೆಯಿಂದ ಬಡವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬೇಸಿಗೆ ಸಮಯದಲ್ಲಿ ಮನೆ ಮುಂಭಾಗ ಹಾಗೂ ಮಹಡಿ ಮೇಲೆ ಮಲಗಬೇಕು. ಆದರೆ, ಮಳೆಗಾಲದಲ್ಲಿ ಬಡವರ ಸ್ಥಿತಿ ಶೋಚನೀಯವಾಗಿದೆ ಎಂದು ಸ್ಥಳೀಯ ಲಕ್ಷ್ಮಣಪ್ಪ ದೂರಿದ್ದಾರೆ.
ಬಡವರಿಗೆ ಉಚಿತ ನಿವೇಶನ ಹಂಚಿಕೆ ಮಾಡಿ ಹಲವು ವರ್ಷಗಳೇ ಕಳೆದಿವೆ. ಮನೆ ಹಾಗೂ ನಿವೇಶನ ಇಲ್ಲದೆ ಬಡವರು ಬಾಡಿಗೆ ಮನೆಗಳಿಗೆ ಮೊರೆ ಹೋಗುತ್ತಿದ್ದಾರೆ. ಮನೆ ಮಾಲೀಕ ಹೇಳಿದಷ್ಟು ಬಾಡಿಗೆ ನೀಡಿ ವಾಸಿಸುವ ಸ್ಥಿತಿ ಇದೆ ಎಂದು ದೇವರಾಜ್ ಅಳಲು ತೋಡಿಕೊಂಡರು.
ಕ್ಷೇತ್ರಕ್ಕೆ 4893 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಪಟ್ಟಣದ ಕರಡಿಪುರದಲ್ಲಿ ಬಡವರಿಗಾಗಿ 250ಕ್ಕೂ ಹೆಚ್ಚು ನಿವೇಶನದ ಸ್ಥಳವನ್ನು ಗುರುತು ಮಾಡಲಾಗಿದೆಕೆ.ಎನ್.ರಾಜಣ್ಣ ಶಾಸಕ
500 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಜಿ.ಪ್ಲಸ್ ಮನೆಗಳನ್ನು ನಿರ್ಮಾಣ ಮಾಡಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಲಾಲಾಪೇಟೆ ಮಂಜುನಾಥ್ ಪುರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.