ADVERTISEMENT

ಸೋಂಕಿತರಿಗೆ ಜಿಲ್ಲಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ

ಅಧಿಕಾರಿಗಳ ಸಭೆ ನಡೆಸಿದ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 11:44 IST
Last Updated 4 ಏಪ್ರಿಲ್ 2020, 11:44 IST
ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಜೆ.ಸಿ.ಮಾಧುಸ್ವಾಮಿ
ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಜೆ.ಸಿ.ಮಾಧುಸ್ವಾಮಿ   

ತುಮಕೂರು: ಕೊರೊನಾ ಸೋಂಕು ಹರಡದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಂದ ಶನಿವಾರ ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೋಂಕಿತರ ಸಂಪರ್ಕದಲ್ಲಿ ಇದ್ದವರನ್ನು ಪತ್ತೆಹಚ್ಚಿ ಅವರನ್ನು ಮನೆಯಲ್ಲಿ ಇಲ್ಲವೆ ಜಿಲ್ಲಾ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಬೇಕು ಎಂದು ಸೂಚಿಸಿದರು.

ಸೋಂಕು ತಗುಲಿದವರನ್ನು ತಾಲ್ಲೂಕು ಆಸ್ಪತ್ರೆ ಅಥವಾ ತಾಲ್ಲೂಕು ಕೇಂದ್ರಗಳಲ್ಲಿ ಇಟ್ಟು ನಿಗಾವಹಿಸುವ ಬದಲು ಜಿಲ್ಲಾ ಆಸ್ಪತ್ರೆಗೆ ದಾಖಲಿಸಬೇಕು. ಇಲ್ಲಿ ಚಿಕಿತ್ಸೆಯ ಬಗ್ಗೆ ನಿಗಾವಹಿಸಲು ಸುಲಭ ಆಗುತ್ತದೆ. ಆರೋಗ್ಯ ಇಲಾಖೆ ಸಿಬ್ಬಂದಿಗೆ ಹಾಗೂ ನಿರ್ವಹಣೆಗೆ ಅನುಕೂಲವಾಗಲಿದೆ ಎಂದರು.

ADVERTISEMENT

ಶಂಕಿತರಿಗೆ ನೆಗೆಟಿವ್ ವರದಿ ಬಂದಿದ್ದರೂ ಕಡ್ಡಾಯವಾಗಿ ಅವರನ್ನೂ 28 ದಿನ ನಿಗಾದಲ್ಲಿ ಇಡಬೇಕು. ಕೊರೊನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದರು.

ಕೊಳೆಗೇರಿ ನಿವಾಸಿಗಳು ಸೇರಿದಂತೆ ಬಡವರಿಗೆ ಅರ್ಧ ಲೀಟರ್ ಹಾಲು ವಿತರಿಸಲಾಗುತ್ತಿದೆ. ಅಲ್ಲದೆ ಅಗತ್ಯವಿದ್ದರೆ 200 ಎಂ.ಎಲ್. ಹಾಲಿನ ಪ್ಯಾಕೇಟ್‌ಗಳನ್ನು ತಯಾರಿಸಿ ವಿತರಣೆಗೆ ಕ್ರಮವಹಿಸಿ ಎಂದು ತುಮಕೂರು ಹಾಲು ಒಕ್ಕೂಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಬೆಳೆಯುವ ತರಕಾರಿ, ಹಣ್ಣುಗಳನ್ನು ರೈತರಿಂದ ಖರೀದಿಸಿ, ತುಮಕೂರು ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಸ್ವಯಂ ಸೇವಕರನ್ನು ಬಳಸಿಕೊಂಡು ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು. ರೈತರ ಕೊಳವೆಬಾವಿಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದರು.

ಅಗತ್ಯ ಔಷಧಿ ದಾಸ್ತಾನು, ಸೋಂಕು ನಿಯಂತ್ರಣದ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾ ಅವರಿಂದ ಮಾಹಿತಿ ಪಡೆದರು.

ಶಾಸಕ ಬಿ.ಜಿ.ಜ್ಯೋತಿಗಣೇಶ್, ಜಿಲ್ಲಾ ಪಂಚಾಯಿತಿ ಸಿಇಒ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಸಭೆಯಲ್ಲಿ ಇದ್ದರು.

***

ಅಕ್ಕಿಗಿರಣಿ ಕಾರ್ಮಿಕರ ಓಡಾಟಕ್ಕೆ ತೊಂದರೆ ಇಲ್ಲ

ಜಿಲ್ಲೆಯಲ್ಲಿ ಅಕ್ಕಿ ಗಿರಣಿಗಳ ಚಟುವಟಿಕೆ ಆರಂಭಕ್ಕೆ ಅವಕಾಶ ನೀಡಲಾಗಿದೆ. ಅಗತ್ಯವಿರುವ ಕಚ್ಚಾವಸ್ತು ಪೂರೈಸಲು, ಕಾರ್ಮಿಕರ ಓಡಾಟಕ್ಕೆ ತೊಂದರೆ ಆಗದಂತೆ ಕ್ರಮವಹಿಸಬೇಕು ಎಂದು ಮಾಧುಸ್ವಾಮಿ ಸೂಚಿಸಿದರು.

ಮಾಂಸ ಮಾರಾಟಕ್ಕೆ ಅನುಕೂಲ ಕಲ್ಪಿಸಬೇಕು. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.