
ತುಮಕೂರು: ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ.
ಮಾಧುಸ್ವಾಮಿ ಅವರಿಗೆ ಗುರುವಾರ ಕರೆ ಮಾಡಿ ಮಾತನಾಡಿದೆ. ಅವರು ಬೇಜಾರಿನಲ್ಲಿ ಮಾತನಾಡಿದರು. ‘ಮನೆಗೆ ಬರಬೇಡ’ ಎಂದರು. ‘ನಾಲ್ಕು ದಿನಗಳ ಕಳೆದ ನಂತರ, ನಿನ್ನಲ್ಲಿನ ದುಗುಡ ಕಡಿಮೆ ಆದ ಮೇಲೆ ಬರುತ್ತೇನೆ’ ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ಅವರ ಮನೆಗೆ ಭೇಟಿ ನೀಡಿ, ಚರ್ಚಿಸಲಾಗುವುದು ಎಂದು ವಿ.ಸೋಮಣ್ಣ ಪ್ರತಿಕ್ರಿಯಿಸಿದರು.
ನಗರದ ಸಿದ್ಧಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
‘ಹೈಕಮಾಂಡ್ ನಾಯಕರು ಜಿಲ್ಲೆಯ ಮುಖಂಡರ ಅಸಮಾಧಾನ ಶಮನಗೊಳಿಸುವ ಕೆಲಸ ಮಾಡುತ್ತಾರೆ. ಮಾಧುಸ್ವಾಮಿಗೆ ಟಿಕೆಟ್ ನೀಡಿದ್ದರೂ ಎಲ್ಲರು ಒಟ್ಟಾಗಿ ಕೆಲಸ ಮಾಡುತ್ತಿದ್ದೆವು’ ಎಂದರು.
ಮಾಧುಸ್ವಾಮಿ ಬಿಜೆಪಿ ಟಿಕೆಟ್ ಪಡೆಯಲು ಪ್ರಯತ್ನಿಸಿದ್ದರು. ‘ಹೊರಗಿನವರಿಗೆ ಟಿಕೆಟ್ ನೀಡಬಾರದು’ ಎಂದು ಹೇಳುವ ಮೂಲಕ ಸೋಮಣ್ಣ ಸ್ಪರ್ಧೆಗೆ ಪ್ರಾರಂಭದಿಂದಲೇ ವಿರೋಧ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.