ADVERTISEMENT

‘ಎಸ್‌.ಸಿ ಪಟ್ಟಿಗೆ ಮಡಿವಾಳರನ್ನು ಸೇರಿಸಿ’

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 3:15 IST
Last Updated 27 ಸೆಪ್ಟೆಂಬರ್ 2021, 3:15 IST
ತುಮಕೂರಿನಲ್ಲಿ ಕೋವಿಡ್‌ನಿಂದ ಮೃತಪಟ್ಟ ಮಡಿವಾಳ ಸಮುದಾಯದವರಿಗೆ ಆರ್ಥಿಕ ನೆರವು ನೀಡಲಾಯಿತು. ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ರಂಗಸ್ವಾಮಯ್ಯ, ಅಧ್ಯಕ್ಷ ಟಿ.ಆರ್.ಪ್ರಕಾಶ್, ಜಿಲ್ಲಾ ಸಂಘದ ಅಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಭವ್ಯ, ಕೆಂಪನರಸಯ್ಯ, ಶಾಂತಕುಮಾರ್, ಪ್ರಭಾಕರ್, ಚಿಕ್ಕಣ್ಣ, ಕಿರಣ್, ರಾಜಣ್ಣ, ಪಾವಗಡ ಶ್ರೀರಾಮಯ್ಯ, ಚಂದ್ರಣ್ಣ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಕೋವಿಡ್‌ನಿಂದ ಮೃತಪಟ್ಟ ಮಡಿವಾಳ ಸಮುದಾಯದವರಿಗೆ ಆರ್ಥಿಕ ನೆರವು ನೀಡಲಾಯಿತು. ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ರಂಗಸ್ವಾಮಯ್ಯ, ಅಧ್ಯಕ್ಷ ಟಿ.ಆರ್.ಪ್ರಕಾಶ್, ಜಿಲ್ಲಾ ಸಂಘದ ಅಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಭವ್ಯ, ಕೆಂಪನರಸಯ್ಯ, ಶಾಂತಕುಮಾರ್, ಪ್ರಭಾಕರ್, ಚಿಕ್ಕಣ್ಣ, ಕಿರಣ್, ರಾಜಣ್ಣ, ಪಾವಗಡ ಶ್ರೀರಾಮಯ್ಯ, ಚಂದ್ರಣ್ಣ ಉಪಸ್ಥಿತರಿದ್ದರು   

ತುಮಕೂರು: ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಹೋರಾಟವನ್ನು ಮತ್ತೆ ಮುಂದುವರೆಸಲಾಗುವುದು ಎಂದು ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಆರ್.ಪ್ರಕಾಶ್ ಹೇಳಿದರು.

ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದಜಿಲ್ಲಾ ಮಡಿವಾಳರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್‌ನಿಂದ ಮೃತಪಟ್ಟ ಸಮುದಾಯದ ಕುಟುಂಬಗಳಿಗೆ ಸಾಂತ್ವನ ಹೇಳುವುದು, ಆರ್ಥಿಕ ಸಹಾಯ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗಿತ್ತು. ಇದರ ಫಲವಾಗಿ ಡಾ.ಅನ್ನಪೂರ್ಣಮ್ಮ ಅವರು ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಕೆಲವರ ಚಿತಾವಣೆಯಿಂದ ಹೋರಾಟ ನಿರೀಕ್ಷಿತ ಫಲ ನೀಡಿಲ್ಲ. ಈ ಹೋರಾಟವನ್ನು ಮುಂದುವರೆಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಾಗಿದೆ ಎಂದರು.

ADVERTISEMENT

ಸಂಘದ ಕಾರ್ಯಾಧ್ಯಕ್ಷ ರಂಗಸ್ವಾಮಯ್ಯ, ‘ಕುಲಕಸುಬನ್ನೇ ನಂಬಿ ಮಡಿವಾಳರು ಬದುಕುತ್ತಿದ್ದು, ಕೋವಿಡ್‍ನಿಂದ ಸಂಕಷ್ಟಕ್ಕೆ ದೂಡಲ್ಪಟ್ಟ ಕುಟುಂಬಗಳನ್ನು ಗುರುತಿಸಿ, ಸ್ವಂತ ಹಣದಿಂದ ಕೈಲಾದ ಧನಸಹಾಯ ಮಾಡಲಾಗುತ್ತಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷ್ಮಣ್, ‘ಕೋವಿಡ್‌ ಸಂಕಷ್ಟದ ಸಮಯದಲ್ಲಿ ಜನತೆ ಜೀವನ ನಡೆಸುವುದು ಕಷ್ಟಕರವಾಗಿದೆ. ಇಂತಹ ಸಮಯದಲ್ಲಿ ಮಾಚಿದೇವ ಅಭಿವೃದ್ಧಿ ಮಂಡಳಿಯಿಂದ ಸಾಲ ವಸೂಲಿ ಮಾಡಲಾಗುತ್ತಿದೆ. ಒಂದು ವೇಳೆ ಅಧಿಕಾರಿಗಳು ಸಾಲ ವಸೂಲಿಗೆ ಬಂದರೆ ಈಗ ಕಟ್ಟಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿ, ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಧೈರ್ಯ ತುಂಬಿದರು.

ಮುಖಂಡರಾದ ಭವ್ಯ, ‘ಸಂಘದ ವತಿಯಿಂದ ಜಾತಿ ಜನಗಣತಿ ನಡೆಯುತ್ತಿದ್ದು, ಹಿಂಜರಿಕೆ ಬಿಟ್ಟು ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ನಮ್ಮ ಧ್ವನಿ ಗಟ್ಟಿಗೊಳಿಸಬೇಕು’ ಎಂದರು.

ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್, ಮುಖಂಡರಾದ ಚಂದ್ರ
ಶೇಖರಗೌಡ, ಕೆಂಪರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಕೆಂಪನರಸಯ್ಯ, ಕುಲಕಸುಬುದಾರರ ಸಂಘದ ಅಧ್ಯಕ್ಷ ಶಾಂತಕುಮಾರ್, ಪ್ರಮುಖರಾದ ಪ್ರಭಾಕರ್, ಚಿಕ್ಕಣ್ಣ, ಕಿರಣ್, ರಾಜಣ್ಣ, ಪಾವಗಡ ಶ್ರೀರಾಮಯ್ಯ, ಚಂದ್ರಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.