ತಿಪಟೂರು: ಗಾಂಧೀಜಿ ಅವರ ಸತ್ಯ, ಅಹಿಂಸೆ, ಶಾಂತಿ ಮತ್ತು ಸ್ವಚ್ಛತೆ ಮೌಲ್ಯಗಳನ್ನು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ ಮತ್ತು ಶಿಸ್ತನ್ನು ಅನುಸರಿಸಬೇಕು ಎಂದು ಶಾಸಕ ಕೆ.ಷಡಕ್ಷರಿ ಸಲಹೆ ನೀಡಿದರು.
ನಗರಸಭೆ ಕಾರ್ಯಾಲಯದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯಂದು ನಡೆದ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಗಾಂಧೀಜಿ ಮಾರ್ಗದರ್ಶನದಿಂದಲೇ ಭಾರತ ಸ್ವಾತಂತ್ರ್ಯ ಪಡೆದುಕೊಂಡಿದೆ ಎಂದು ಸ್ಮರಿಸಿದರು.
ಗಾಂಧೀಜಿಯ ಸ್ವಚ್ಛತಾ ಸಂದೇಶ ಮತ್ತು ಅಹಿಂಸಾ ಸಿದ್ಧಾಂತವು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆ, ಶಿಸ್ತು ಮತ್ತು ತ್ಯಾಗದ ಪ್ರತೀಕ ಎಂದು ತಿಳಿಸಿದ ಶಾಸಕರು, ಅವರ 'ಜೈ ಜವಾನ್ - ಜೈ ಕಿಸಾನ್' ಘೋಷಣೆ ರಾಷ್ಟ್ರದಲ್ಲಿ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಇಬ್ಬರ ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಅನುಸರಿಸಿದಾಗಲೇ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ‘ನಮಸ್ತೆ’ ಯೋಜನೆಯಡಿಯಲ್ಲಿ ಸುರಕ್ಷತಾ ಸಲಕರಣೆಗಳನ್ನು ವಿತರಿಸಲಾಯಿತು.
ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್, ಸದಸ್ಯ ಮೆಡಿಕಲ್ ಶ್ರೀನಿವಾಸ್, ಆಯುಕ್ತ ವಿಶ್ವೇಶ್ವರ ಬದರಗಡೆ, ಆರೋಗ್ಯಾಧಿಕಾರಿ ಶ್ರೀನಿವಾಸ್ ಹಾಗೂ ಪೌರ ಕಾರ್ಮಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.