ADVERTISEMENT

ತುಮಕೂರು: ಎಲ್ಲೆಡೆ ಸುಗ್ಗಿ ಹಬ್ಬದ ಸಂಭ್ರಮ

ಅದ್ದೂರಿಯಾಗಿ ಸಂಕ್ರಾಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 14:35 IST
Last Updated 15 ಜನವರಿ 2024, 14:35 IST
ತುಮಕೂರಿನ ಭಾಗ್ಯನಗರದಲ್ಲಿ ಸೋಮವಾರ ಮಕರ ಸಂಕ್ರಾಂತಿ ಪ್ರಯುಕ್ತ ಹಸು ಮತ್ತು ಜೋಡೆತ್ತಿನ ಮೆರವಣಿಗೆ ನಡೆಯಿತು
ತುಮಕೂರಿನ ಭಾಗ್ಯನಗರದಲ್ಲಿ ಸೋಮವಾರ ಮಕರ ಸಂಕ್ರಾಂತಿ ಪ್ರಯುಕ್ತ ಹಸು ಮತ್ತು ಜೋಡೆತ್ತಿನ ಮೆರವಣಿಗೆ ನಡೆಯಿತು   

ತುಮಕೂರು: ನಗರ ಒಳಗೊಂಡಂತೆ ಜಿಲ್ಲೆಯಾದ್ಯಂತ ಸೋಮವಾರ ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮ ಜೋರಾಗಿತ್ತು. ಸಾರ್ವಜನಿಕರು ಪರಸ್ಪರ ಎಳ್ಳು–ಬೆಲ್ಲ ಹಂಚಿ ಸಂಭ್ರಮಿಸಿದರು. ಹಳೆಯ ಕಹಿ ಘಟನೆ ಮರೆತು ಹೊಸ ಬದುಕು ಕಟ್ಟಿಕೊಳ್ಳೋಣ ಎಂದು ಶುಭ ಹಾರೈಸಿದರು.

ಹಬ್ಬದ ಪ್ರಯುಕ್ತ ಮನೆಯಲ್ಲಿ ಪೊಂಗಲ್, ಇತರೆ ಸಿಹಿ ತಿನಿಸುಗಳನ್ನು ತಯಾರು ಮಾಡಿದ್ದರು. ಒಬ್ಬರಿಗೊಬ್ಬರು ಎಳ್ಳು–ಬೆಲ್ಲ, ಕಬ್ಬು, ಕಡಲೇಕಾಯಿ ಹಂಚಿ ಶುಭ ಕೋರಿದರು. ಕಳೆದೆರಡು ದಿನಗಳಿಂದ ನಗರದ ಎಂ.ಜಿ.ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಹಬ್ಬಕ್ಕೆ ಅಗತ್ಯ ಸಾಮಗ್ರಿ ಖರೀದಿ ಜೋರಾಗಿಯೇ ನಡೆದಿತ್ತು.

ದೇವಸ್ಥಾನಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧ ಬಗೆಯ ಹೂವು, ಬಾಳೆದಿಂಡುಗಳಿಂದ ದೇಗುಲ ಸಿಂಗರಿಸಲಾಗಿತ್ತು. ವಿಶೇಷ ಪೂಜೆ, ಭಜನೆ, ಮಹಾಭಿಷೇಕ ಮತ್ತು ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಜನರು ಸೋಮವಾರ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ADVERTISEMENT

ಶನಿವಾರ, ಭಾನುವಾರ ಮತ್ತು ಸೋಮವಾರ ಮೂರು ದಿನ ರಜೆ ಇದ್ದಿದ್ದರಿಂದ ಸರ್ಕಾರಿ ಕಚೇರಿ, ಕೈಗಾರಿಕೆಗಳಲ್ಲಿ ಕಳೆದ ಶುಕ್ರವಾರವೇ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಸಾಲು ಸಾಲು ರಜೆಗಳಿಂದಾಗಿ ನಗರದಲ್ಲಿ ವಾಹನ ಸಂಚಾರ, ಜನರ ಓಡಾಟವೂ ವಿರಳವಾಗಿತ್ತು.

ನಗರದ ಟಿಜಿಎಂಸಿ ಬ್ಯಾಂಕ್‌ ಬಳಿಯ ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ಸಂಕ್ರಾಂತಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಗಿ ರಾಶಿ ಮಾಡಿ ಪೂಜೆ ಸಲ್ಲಿಸಲಾಯಿತು. ಹಳ್ಳಿಯ ಚಿತ್ರಣ ಕಟ್ಟಿ ಕೊಡಲಾಯಿತು. ತೆಂಗಿನ ಗರಿಗಳಿಂದ ನಿರ್ಮಿಸಿದ್ದ ಗುಡಿಸಲು ಗಮನ ಸೆಳೆಯಿತು. ವಿವಿಧ ಕಲಾಕೃತಿಗಳು ನೋಡುಗರನ್ನು ಆಕರ್ಷಿಸಿದವು.

ತುಮಕೂರಿನಲ್ಲಿ ಸೋಮವಾರ ಸಂಕ್ರಾಂತಿ ಅಂಗವಾಗಿ ಮಕ್ಕಳು ಪರಸ್ಪರ ಎಳ್ಳು–ಬೆಲ್ಲ ಕಡಲೇಕಾಯಿ ಹಂಚಿದರು

ಆರ್.ಟಿ.ನಗರದ ಸಿದ್ಧಿ ಗಣಪತಿ ದೇವಸ್ಥಾನದಲ್ಲಿ ಗಣಪತಿಗೆ ಅವರೆಕಾಯಿ, ಗೆಣಸು, ಕಬ್ಬು, ಕಡಲೇಕಾಯಿ ಅಲಂಕಾರ ಮಾಡಲಾಗಿತ್ತು. ಭಕ್ತರು ವಿಶೇಷ ಅಭಿಷೇಕ, ಪೂಜೆ ನೆರವೇರಿಸಿದರು.

ತುಮಕೂರಿನ ಆರ್.ಟಿ.ನಗರದ ಸಿದ್ಧಿ ಗಣಪತಿ ದೇವಸ್ಥಾನದಲ್ಲಿ ಸೋಮವಾರ ಗಣಪತಿಗೆ ಅವರೆಕಾಯಿ ಗೆಣಸು ಕಬ್ಬು ಕಡಲೇಕಾಯಿ ಅಲಂಕಾರ ಮಾಡಲಾಗಿತ್ತು
ತುಮಕೂರಿನ ಟಿಜಿಎಂಸಿ ಬ್ಯಾಂಕ್‌ ಬಳಿಯ ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ಸಂಕ್ರಾಂತಿ ಅಂಗವಾಗಿ ವಿವಿಧ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು

ಗಮನ ಸೆಳೆದ ಮೆರವಣಿಗೆ

ನಗರದ ಭಾಗ್ಯ ನಗರದ ಬಳಿ ಮಕರ ಸಂಕ್ರಾಂತಿಯ ಪ್ರಯುಕ್ತ ಸೋಮವಾರ ಸಂಜೆ ಶ್ರೀರಾಮ ಬಾಲ ಭಜನಾ ಮಂದಿರದಿಂದ ಆಯೋಜಿಸಿದ್ದ ಹಸು ಮತ್ತು ಜೋಡೆತ್ತುಗಳ ಮೆರವಣಿಗೆ ಗಮನ ಸೆಳೆಯಿತು. ರೈತರು ತಮ್ಮ ಜಾನುವಾರುಗಳಿಗೆ ವಿಶೇಷ ಅಲಂಕಾರ ಮಾಡಿ ಮೆರವಣಿಗೆಗೆ ಸಜ್ಜುಗೊಳಿಸಿದ್ದರು. ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹಸು ಮತ್ತು ಎತ್ತುಗಳನ್ನು ರೈತರು ಮೆರವಣಿಗೆಗೆ ಕರೆತಂದಿದ್ದರು. ಉತ್ತಮ ಜೋಡೆತ್ತುಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.