
ತುಮಕೂರು: ಈ ಬಾರಿ ಮಾವಿನ ಮರದಲ್ಲಿ ಬಿಟ್ಟಿರುವ ಹೂವು ಆಕರ್ಷಿಸುತ್ತಿದೆ. ಮರದತ್ತ ಮುಖ ಮಾಡಿದವರ ಮೊಗದಲ್ಲಿ ನಗು ಕಾಣುತ್ತಿದೆ. ಬಂಪರ್ ಬೆಳೆಯ ಆಲೋಚನೆ ಮನದಲ್ಲಿ ಮೂಡುತ್ತಿದೆ.
ಹೌದು, ಈ ಬಾರಿ ‘ಹಣ್ಣಿನ ರಾಜ’ ಮಾವಿನ ಇಳುವರಿಯ ಮುನ್ಸೂಚನೆ ಸಿಕ್ಕಿದೆ. ಮಾವಿನ ಮರದಲ್ಲಿರುವ ಹೂವು ನೋಡಿದವರಿಗೆ ಉತ್ತಮ ಫಸಲು ಕೈ ಸೇರುವ ಆಶಾ ಭಾವನೆ ಚಿಗುರೊಡೆದಿದೆ. ಮರದ ತಂಬಾ ಹೂವುಗಳೇ ಕಾಣಿಸುತ್ತಿರುವುದು ಉತ್ತಮ ಫಸಲಿನ ನಿರೀಕ್ಷೆ ಹುಟ್ಟು ಹಾಕಿದೆ.
ಸತತವಾಗಿ ಕಳೆದ ಎರಡು ವರ್ಷಗಳಿಂದ ಇಳುವರಿ ಕುಸಿತದಿಂದ ಕಂಗೆಟ್ಟಿದ್ದ ಮಾವು ಬೆಳೆಗಾರರು ಮರದಲ್ಲಿ ಹೂವು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ಬಿಟ್ಟಿರುವ ಹೂವೆಲ್ಲ ಕಾಯಿ ಕಟ್ಟಿದರೆ ಬಂಪರ್ ಬೆಳೆ ಬರಲಿದೆ ಎಂಬ ಕನಸು ಕಂಡಿದ್ದಾರೆ. ಕಳೆದ ವರ್ಷ ಇದೇ ಹೊತ್ತಿಗೆ ಮರದಲ್ಲಿ ಹೂವಿಗಿಂತ ಚಿಗುರು ಹೆಚ್ಚಾಗಿತ್ತು. ಇಳುವರಿ ತೀವ್ರವಾಗಿ ಕುಸಿದಿತ್ತು. ಅದರ ಹಿಂದಿನ ವರ್ಷವೂ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಕೈಕೊಟ್ಟಿತ್ತು.
ಕಳೆದ ಬಾರಿ ಮುಂಗಾರು ಗಾಳಿ, ಮಳೆಗೆ ಸಿಲುಕಿ ಸಾಕಷ್ಟು ಬೆಳೆ ಹಾಳಾಗಿತ್ತು. ಆರಂಭದಲ್ಲಿ ಉತ್ತಮ ಬೆಲೆ ಸಿಕ್ಕರೂ ಕೊನೆಗೆ ಬೆಲೆ ತೀವ್ರವಾಗಿ ಕುಸಿದಿತ್ತು. ಮಾವಿನ ಋತು ಮುಗಿಯುವ ಹೊತ್ತಿಗೆ ಮತ್ತೆ ಧಾರಣೆ ಏರಿಕೆಯಾಗಿತ್ತು. ಬೆಲೆ ಏರಿಳಿತದ ಬಿಸಿ ರೈತರನ್ನು ತಟ್ಟಿತ್ತು. ಈ ಸಲ ಏನಾಗುವುದೋ ಎಂಬ ಚಿಂತೆ ಈಗಾಗಲೇ ಮನೆ ಮಾಡಿದೆ.
ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿಲ್ಲ. ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಮಳೆ ಸ್ಥಗಿತಗೊಂಡಿದೆ. ಈಗಾಗಲೇ ಮಳೆ ಇಲ್ಲದೆ ಮೂರು ತಿಂಗಳು ಕಳೆದಿದೆ. ಫೆಬ್ರುವರಿಯಲ್ಲೇ ತಾಪಮಾನ ಏರಿಕೆಯತ್ತ ಮುಖ ಮಾಡಿದೆ. ಮಾರ್ಚ್ ಹೊತ್ತಿಗೆ ಮತ್ತಷ್ಟು ಬಿಸಿಯಾಗಲಿದೆ. ಬಿಸಿಲಿನ ತಾಪ ಹೆಚ್ಚಿದರೆ ಮರದಲ್ಲಿ ಬಿಟ್ಟಿರುವ ಹೂವು ಕಾಯಿ ಕಟ್ಟುವುದೇ? ಪೀಚು ಬಲಿತು ಕಾಯಿ ರೂಪ ತಾಳುವುದೇ? ಉಷ್ಣಾಂಶ ಅತಿಯಾದರೆ ಪೀಚು ನಿಲ್ಲುವುದೆ? ಎಂಬ ಹತ್ತಾರು ಪ್ರಶ್ನೆಗಳು ಮೂಡಿವೆ.
ಈ ಸಲ ಹಿಂಗಾರು ಮಳೆ ಕೈಕೊಟ್ಟಿದ್ದು, ಮುಂಗಾರು ಬೇಗನೇ ಆರಂಭವಾಗಿ ಗಾಳಿ ಜೋರಾಗಿ ಬೀಸಿದರೆ ಮರದಲ್ಲಿ ಫಸಲು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಜಿಲ್ಲೆಯಷ್ಟೇ ಅಲ್ಲ ಎಲ್ಲೆಡೆ ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿದೆ. ಇಳುವರಿ ಹೆಚ್ಚಾದರೆ ಬೆಲೆ ಸ್ಥಿರತೆ ಕಾಯ್ದುಕೊಳ್ಳುವುದೆ? ಎಂಬ ಪ್ರಶ್ನೆ ರೈತರ ಮನದಲ್ಲಿ ಮೂಡಿದೆ. ನಮ್ಮ ಭಾಗದಲ್ಲಿ ಇಳುವರಿ ಇಲ್ಲದೆಯೇ ಬೆಲೆ ಕುಸಿದಿತ್ತು. ಈ ಸಲ ಏನಾಗುವುದೋ? ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಈ ಎಲ್ಲ ಚಿಂತೆ, ಬೆಲೆ ಕುಸಿತದ ಆತಂಕದ ನಡುವೆ ಉತ್ತಮ ಇಳುವರಿಯ ಕನಸು ಕಾಣುತ್ತಿದ್ದಾರೆ. ಉತ್ತಮ ದರ ಸಿಕ್ಕರೆ ರೈತರ ಮುಖದಲ್ಲಿ
ನಗು ತರಿಸಲಿದೆ.
ಔಷಧಿ ಸಿಂಪಡಿಸಿ
ಮರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂವು ಕಾಣಿಸಿಕೊಂಡಿದೆ. ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ. ಮುಂದೆ ಉಷ್ಣಾಂಶ ಹೆಚ್ಚಾದರೆ ಗಾಳಿ ಮಳೆಗೆ ಸಿಲುಕಿದರೆ ಫಸಲು ಕಾಪಾಡಿಕೊಳ್ಳುವುದು ಕಷ್ಟಕರವಾಗಬಹುದು. ಮುಂದಿನ ದಿನಗಳಲ್ಲಿ ಹುಳು ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆಗಳಿದ್ದು ಔಷಧಿ ಸಿಂಪಡಿಸಬೇಕು. ಈಗಿನಿಂದಲೇ ಎಚ್ಚರಿಕೆ ವಹಿಸಬೇಕು. ಬಿ.ಸಿ.ಶಾರದಮ್ಮ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.