
ತುಮಕೂರು: ಮನುಸ್ಮೃತಿಯು ಕಗ್ಗತ್ತಲ ಭಾಗವಾಗಿದ್ದು, ಅಂತಹ ಕೃತಿ ಓದಲು ಅಕ್ಷರಸ್ಧರಾಗಬೇಕಿಲ್ಲ ಎಂದು ಲೇಖಕ ನಟರಾಜ ಬೂದಾಳ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಪ್ರತಿಪದ ಪ್ರಕಾಶನ ಹೊರ ತಂದಿರುವ ಕಥೆಗಾರ ಜಿ.ವಿ.ಆನಂದಮೂರ್ತಿ ನಿರೂಪಿಸಿರುವ ಕೆ.ದೊರೈರಾಜ್ ಅವರ ‘ನಮ್ಮ ಹಟ್ಟಿ’- ಒಂದು ಹಟ್ಟಿಯ ಆತ್ಮ ಕಥಾನಕ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಾಳ ಕತ್ತಲೆಯಲ್ಲಿ ಇರುವ ಶೂದ್ರ ಸಮೂಹಕ್ಕೆ ತಮ್ಮ ಕತ್ತಲು ಗೊತ್ತಾಗುವುದು ಯಾವಾಗ? ಭಾರತೀಯ ಶೂದ್ರ ಹಾಗೂ ವೈದಿಕ ಜಾತಿಯವರು ಮನುಸ್ಮೃತಿಯ ಬೇರೆ ಬೇರೆ ಆವೃತ್ತಿಯ ಪುಸ್ತಕಗಳ ರೀತಿ ಇದ್ದಾರೆ. ಅವರ ಮನೋಸ್ಮೃತಿಯಲ್ಲಿ ಇರುವ ಪುಸ್ತಕವಾಗಿದೆ. ಹಾಗಾಗಿ ಅದನ್ನು ಓದಬೇಕಾಗಿಲ್ಲ ಎಂದು ಸಲಹೆ ಮಾಡಿದರು.
ಹಟ್ಟಿ, ಕಾಲೊನಿ ವಿಚಾರ ಪ್ರಸ್ತಾಪಿಸಿದ ಅವರು, ‘ಬ್ರಿಟಿಷರಿಗೆ ಭಾರತವೇ ಒಂದು ಕಾಲೊನಿಯಾಗಿತ್ತು. ವೈದಿಕರಿಗೆ ಇಡಿಯಾಗಿ ಶೂದ್ರರು, ದಲಿತರು, ಮಹಿಳೆಯರು ಒಂದು ಕಾಲೊನಿ ಆಗಿದ್ದಾರೆ. ಈ ನಮ್ಮ ಹಟ್ಟಿ ತುಮಕೂರಿಗೆ ಕಾಲೊನಿ. ಹೀಗೆಂದ ತಕ್ಷಣ ಒಳಗೆ ಸಿಟ್ಟು ಕುದಿಯುತ್ತದೆ. ನಮ್ಮ ಹಟ್ಟಿಯೇಕೆ ತುಮಕೂರಿಗೆ ಕಾಲೊನಿ ಆಗಬೇಕು? ಇಡಿಯಾಗಿ ಶೂದ್ರ, ದಲಿತ, ಮಹಿಳೆಯರು ವೈದಿಕರಿಗೆ ಏಕೆ ಕಾಲೊನಿ ಆಗಬೇಕು? ಎಂಬ ಪ್ರಶ್ನೆ ಎದುರಾಗುತ್ತದೆ’ ಎಂದು ಹೇಳುವ ಮೂಲಕ ತಾರತಮ್ಯ, ಅಸ್ಪೃಶ್ಯತೆಯನ್ನು ಪ್ರಸ್ತಾಪಿಸಿದರು.
ದೇಶಕ್ಕೆ ಕಾಲೊನಿಯ ರಾಜಕೀಯ ಅವಸ್ಥೆಯಿಂದ ಮಾತ್ರ ಬಿಡುಗಡೆಯಾಗಿದೆ. ಆದರೆ ಅದು ಈಗಲೂ ಧಾರ್ಮಿಕ ಕಾಲೊನಿಯಾಗಿಯೇ ಮುಂದುವರಿದಿದೆ. ತುಮಕೂರಿಗೆ ಹಟ್ಟಿ ಹೇಗೆ ಕಾಲೊನಿಯೋ ಭಾರತವೂ ಒಂದು ರೀತಿಯಲ್ಲಿ ಧಾರ್ಮಿಕವಾಗಿ ಕಾಲೊನಿ ಸ್ಥಿತಿಯಲ್ಲೇ ಇದೆ ಎಂದು ವಿಷಾದಿಸಿದರು.
‘ಹಟ್ಟಿಯಲ್ಲಿ ದೀಪ ಉರಿಯಲು ಆರಂಭವಾದದ್ದು ಹೇಗೆ? ಯಾರ ಪ್ರಭಾವದಿಂದ? ಎಂಬ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ದೊರೈರಾಜ್ ಅವರೂ ಕೊಟ್ಟಿಲ್ಲ. ನಮ್ಮ ಹಟ್ಟಿ ಪುಸ್ತಕವೂ ಕೊಟ್ಟಿಲ್ಲ. ಆದರೆ ಇದನ್ನು ನಮ್ಮದನ್ನಾಗಿಸಿ ಓದಿದಾಗ ಈ ಹಟ್ಟಿಗೆ ಒಂದು ವಿವೇಕವಿದೆ ಎಂಬುದು ಗೊತ್ತಾಗುತ್ತದೆ. ಅಂತಹ ದೀಪ ಹಚ್ಚಿದವರು ದೊರೈರಾಜ್. ಆ ದೀಪವನ್ನು ಅಂಗೈ, ಮುಂಗೈ ಮೇಲೆ ಇಟ್ಟುಕೊಂಡು ಬದುಕಿ ತಮ್ಮ ಹಟ್ಟಿಯನ್ನೂ ಬದುಕಿಸಿಕೊಂಡಿದ್ದಾರೆ’ ಎಂದು ನೆನಪಿಸಿಕೊಂಡರು.
ಹಟ್ಟಿಯ ಮಕ್ಕಳು ಪುಸ್ತಕ ಬಿಡುಗಡೆ ಮಾಡಿದರು. ಮಕ್ಕಳೇ ಮುಂದೆ ನಿಂತು ದೊರೈರಾಜ್ ಅವರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು. ಕಥೆಗಾರ ಜಿ.ವಿ.ಆನಂದಮೂರ್ತಿ, ಲೇಖಕಿ ಬಾ.ಹ.ರಮಾಕುಮಾರಿ, ನಿವೃತ್ತ ವಿಶೇಷ ಅಧಿಕಾರಿಗಳಾದ ಎಸ್.ಮೂರ್ತಿ, ವೈ.ಕೆ.ಬಾಲಕೃಷ್ಣಪ್ಪ, ಎ.ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಎಚ್ಚರ ಅಗತ್ಯ
‘ಬೌದ್ಧಿಕವಾಗಿ ಬೆಳೆದವರು ಸಾಂಸ್ಕೃತಿಕವಾಗಿ ತಿಳಿದುಕೊಂಡವರು ದೇಶ ಆಳುತ್ತಿದ್ದಾರೆ. ಶೇ 95ರಷ್ಟು ಜನ ಈ ತಿಳಿವಳಿಕೆ ಇಲ್ಲದೆ ನರಳುತ್ತಿದ್ದಾರೆ. ಸಾಂಸ್ಕೃತಿಕ ಎಚ್ಚರವಿಲ್ಲದ ಜನಾಂಗಕ್ಕೆ ಭವಿಷ್ಯ ಇರುವುದಿಲ್ಲ. ನಮಗೆ ಸಾಂಸ್ಕೃತಿಕ ಎಚ್ಚರ ಅಗತ್ಯ’ ಎಂದು ಚಿಂತಕ ಕೆ.ದೊರೈರಾಜ್ ಪ್ರತಿಪಾದಿಸಿದರು. ಹಟ್ಟಿಯ ಕಾರ್ಮಿಕ ದುಡಿಯುವ ವರ್ಗದ ಶ್ರಮ ಕೌಶಲದ ಕೊಡುಗೆಯಿಂದ ಜಗತ್ತು ಸೃಷ್ಟಿಯಾಗಿದೆ. ಇದನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಅವರ ಬಗ್ಗೆ ಚರಿತ್ರೆಯಲ್ಲೂ ಉಲ್ಲೇಖವಿಲ್ಲ. ಸ್ವಾಭಿಮಾನದಿಂದ ಬದುಕುವವರ ಚರಿತ್ರೆಯ ದಾಖಲೆ ಕಡಿಮೆ ಎಂದರು. ನಮ್ಮನ್ನು ನಾವು ಅವಮಾನಿಸಿಕೊಳ್ಳುವುದು ಗುಲಾಮಗಿರಿಯ ಸಂಕೇತ. ಯಜಮಾನಿಕೆ ಸಂಸ್ಕೃತಿಯ ವಿರುದ್ಧ ಸೆಟೆದು ನಿಲ್ಲಬೇಕು. ಸಮಾನತೆ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಮಾನವೀಯಕರಣ ಆಗಬೇಕು ಎಂದು ಆಶಿಸಿದರು.
ವೈದಿಕ ಸಂಸ್ಕೃತಿಯಿಂದ ಬಿಡುಗಡೆ ಅಗತ್ಯ
‘ನಾವು ಸಂಪೂರ್ಣವಾಗಿ ವೈದಿಕ ಸಂಸ್ಕೃತಿಯ ಆಚರಣೆ ತೊರೆಯುವ ತನಕ ನಮ್ಮ ವಿಮೋಚನೆ ಸಾಧ್ಯವಿಲ್ಲ’ ಎಂದು ಕಥೆಗಾರ ಜಿ.ವಿ.ಆನಂದಮೂರ್ತಿ ಹೇಳಿದರು. ನಮಗೆ ಸಾಂಸ್ಕೃತಿಕ ಬೇಡಿ ಹಾಕಿ ಬೀಗವನ್ನು ನಮ್ಮ ಜೇಬಲ್ಲಿ ಹಾಕಿದ್ದಾರೆ. ಇದರ ಬಗ್ಗೆ ನಮಗೆ ಅರಿವಿಲ್ಲ. ನಮ್ಮ ಆಲೋಚನೆ ಮನಸು ಕೈ-ಕಾಲುಗಳಿಗೆ ಹಾಕಿರುವ ಕೋಳದ ಬೀಗದ ಕೈ ನಮ್ಮಲ್ಲಿದ್ದರೂ ಇದರ ಅರಿವಿಲ್ಲದೆ ತೆಗೆಯಲು ಸಾಧ್ಯವಾಗುತ್ತಿಲ್ಲ. ತಳ ಸಮುದಾಯ ಶೂದ್ರರು ದಲಿತರು ಎಲ್ಲರೂ ಒಗ್ಗೂಡಬೇಕು. ವೈದಿಕ ಸಂಸ್ಕೃತಿಯಿಂದ ಬಿಡುಗಡೆ ಪಡೆದು ಮುನ್ನಡೆಯಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.