ADVERTISEMENT

ಸೌತೆ, ನಿಂಬೆ, ಶುಂಠಿ ದುಬಾರಿ

ಏರಿಕೆ ಕಂಡ ಸೊಪ್ಪು, ಕುಸಿದ ತರಕಾರಿ ಧಾರಣೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 15:30 IST
Last Updated 4 ಮಾರ್ಚ್ 2023, 15:30 IST
ಸೌತೆ ಕಾಯಿ ಮಾರಾಟ
ಸೌತೆ ಕಾಯಿ ಮಾರಾಟ   

ತುಮಕೂರು: ಬೇಸಿಗೆ ಬಿಸಿಲ ತಾಪ ತೀವ್ರವಾಗುತ್ತಿದ್ದಂತೆ ದಾಹ ತಣಿಸಲು ಬಳಸುವ ಹಣ್ಣುಗಳ ಬೆಲೆ ಮತ್ತಷ್ಟು ದುಬಾರಿಯಾಗಿದೆ. ತರಕಾರಿ ದರ ಮತ್ತೆ ಇಳಿಕೆಯಾಗಿದ್ದರೆ, ಸೊಪ್ಪು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ. ಶುಂಠಿ, ಸೌತೆಕಾಯಿ, ನಿಂಬೆ ಹಣ್ಣು ಧಾರಣೆ ಏರಿಕೆಯತ್ತ ಮುಖ ಮಾಡಿದೆ. ಇಳಿಕೆ ಕಂಡಿದ್ದ ಕೋಳಿ, ಮೀನು ದರ ಹೆಚ್ಚಳವಾಗಿದೆ.

ಮಾರುಕಟ್ಟೆಯಲ್ಲಿ ತರಕಾರಿ ಆವಕ ಹೆಚ್ಚುತ್ತಲೇ ಇದ್ದು, ಬೆಲೆ ಇಳಿಕೆಯತ್ತಲೇ ಸಾಗಿದೆ. ಬೀನ್ಸ್, ಕ್ಯಾರೇಟ್, ಗೆಡ್ಡೆಕೋಸು, ಬೆಂಡೆ ಕಾಯಿ, ತೊಂಡೆಕಾಯಿ, ಹಾಗಲ ಕಾಯಿ ಧಾರಣೆ ಮತ್ತೆ ಇಳಿಕೆಯಾಗಿದೆ. ನುಗ್ಗೆ ಕಾಯಿ ಬೆಲೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಕಳೆದ ಆರು ತಿಂಗಳಿಂದ ಇಳಿಕೆಯತ್ತಲೇ ಸಾಗಿದ್ದ ಟೊಮೆಟೊ ದರ ಕೊಂಚ ಸುಧಾರಣೆ ಕಂಡಿದೆ.

ಕಳೆದ ಕೆಲ ವಾರಗಳಿಂದ ಚೇತರಿಕೆ ದಾರಿಯಲ್ಲಿ ಸಾಗುತ್ತಿದ್ದ ಶುಂಠಿ ಈಗ ದುಬಾರಿಯಾಗಿದ್ದು, ಫಾರಂ ಕೆ.ಜಿ ₹40, ನಾಟಿ ಕೆ.ಜಿ ₹70ಕ್ಕೆ ಜಿಗಿದಿದೆ. ಸೌತೆಕಾಯಿ ಒಂದು ₹10–12, ನಿಂಬೆ ಹಣ್ಣು ಒಂದಕ್ಕೆ ₹4–5ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಇತರೆ ಮಾರುಕಟ್ಟೆಗಳಲ್ಲಿ ಇವು ಮತ್ತಷ್ಟು ದುಬಾರಿಯಾಗಿವೆ.

ADVERTISEMENT

ಸೊಪ್ಪು ಚೇತರಿಕೆ: ಬೇಸಿಗೆಯಲ್ಲಿ ಸೊಪ್ಪಿನ ದರವೂ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಮೆಂತ್ಯ ಸೊಪ್ಪು ಬಿಟ್ಟರೆ ಉಳಿದ ಸೊಪ್ಪುಗಳ ಬೆಲೆ ಹೆಚ್ಚಳವಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹25–30, ಸಬ್ಬಕ್ಕಿ ಕೆ.ಜಿ ₹30–35, ಮೆಂತ್ಯ ಸೊಪ್ಪು ಕೆ.ಜಿ ₹15–20, ಪಾಲಕ್ ಸೊಪ್ಪು (ಕಟ್ಟು) ₹20ಕ್ಕೆ ಮಾರಾಟವಾಗುತ್ತಿದೆ.

ಹಣ್ಣು ಮತ್ತಷ್ಟು ದುಬಾರಿ: ಬೇಸಿಗೆಯಲ್ಲಿ ದೇಹದ ದಾಹ ತಣಿಸಲು ಹಣ್ಣಿನ ರಸಕ್ಕೆ ಜನರು ಮೊರೆ ಹೋಗುತ್ತಿದ್ದು, ಬಳಕೆ, ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಧಾರಣೆ ಗಗನದತ್ತ ಮುಖ ಮಾಡಿದೆ. ಸೇಬು, ದಾಳಿಂಬೆ, ಮೋಸಂಬಿ, ಕಲ್ಲಂಗಡಿ ಹಣ್ಣು ಮತ್ತಷ್ಟು ದುಬಾರಿಯಾಗಿದೆ.

ಬೇಳೆ ಯಥಾಸ್ಥಿತಿ: ಕಳೆದ ಎರಡು ವಾರದಿಂದ ಹೆಚ್ಚಳ ಕಂಡಿದ್ದ ತೊಗರಿ ಬೇಳೆ ಈ ವಾರ ಯಥಾಸ್ಥಿತಿ ಕಾಯ್ದುಕೊಂಡಿದೆ. ಧಾನ್ಯ, ಬೆಳೆ ಕಾಳುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಅಡುಗೆ ಎಣ್ಣೆ: ಕಳೆದ ವಾರ ಏರಿಕೆ ಕಂಡಿದ್ದ ಅಡುಗೆ ಎಣ್ಣೆ ಬೆಲೆಯಲ್ಲೂ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಸನ್‌ಫ್ಲವರ್ ಕೆ.ಜಿ ₹130–140, ಪಾಮಾಯಿಲ್ ಕೆ.ಜಿ ₹99–102, ಕಡಲೆಕಾಯಿ ಎಣ್ಣೆ ಕೆ.ಜಿ ₹159–162ಕ್ಕೆ ಮಾರಾಟವಾಗುತ್ತಿದೆ.

ಮಸಾಲೆ ಪದಾರ್ಥ: ಈ ವಾರ ಮಸಾಲೆ ಪದಾರ್ಥಗಳ ಧಾರಣೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಮಾರುಕಟ್ಟೆಗೆ ಹೊಸದಾಗಿ ಹುಣಸೆ ಹಣ್ಣು ಬರುತ್ತಿದ್ದು, ದರ ನಿಧಾನವಾಗಿ ಕಡಿಮೆಯಾಗುತ್ತಿದೆ.

ಧನ್ಯ ಕೆ.ಜಿ ₹110–170, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹400–450, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹245–250, ಕರಿಮೆಣಸು ಕೆ.ಜಿ ₹560–600, ಜೀರಿಗೆ ಕೆ.ಜಿ ₹360–380, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹85–90, ಚಕ್ಕೆ ಕೆ.ಜಿ ₹265–300, ಲವಂಗ ಕೆ.ಜಿ ₹740–780, ಗುಣಮಟ್ಟದ ಗಸಗಸೆ ಕೆ.ಜಿ ₹1,350–1400, ಬಾದಾಮಿ ಕೆ.ಜಿ ₹550–600, ಗೋಡಂಬಿ ಕೆ.ಜಿ ₹680–750, ದ್ರಾಕ್ಷಿ ಕೆ.ಜಿ ₹230–240, ಹುಣಸೆಹಣ್ಣು ₹80–140ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಏರಿಕೆ: ಕಳೆದ ಕೆಲ ವಾರಗಳಿಂದ ಇಳಿಕೆಯಾಗಿದ್ದ ಕೋಳಿ ಮಾಂಸದ ದರ ಈ ವಾರ ಕೆ.ಜಿಗೆ ₹10 ಹೆಚ್ಚಳವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹110, ರೆಡಿ ಚಿಕನ್ ಕೆ.ಜಿ ₹160, ಸ್ಕಿನ್‌ಲೆಸ್ ಕೆ.ಜಿ ₹180, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹90ಕ್ಕೆ ಮಾರಾಟವಾಗುತ್ತಿದೆ.

ಮೀನು ದುಬಾರಿ: ಹಿಂದಿನ ಕೆಲ ವಾರಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದ್ದ ಮೀನಿನ ಬೆಲೆ ಈಗ ಏರಿಕೆಯತ್ತ ಮುಖ ಮಾಡಿದೆ. ಬೂತಾಯಿ, ಅಂಜಲ್ ಮೀನು ದುಬಾರಿಯಾಗಿದ್ದು, ಅಂಜಲ್ ಒಮ್ಮೆಲೆ ಕೆ.ಜಿಗೆ ₹150 ಹೆಚ್ಚಳವಾಗಿದೆ. ಬಂಗುಡೆ ಕೆ.ಜಿ ₹220, ಬೂತಾಯಿ ಕೆ.ಜಿ ₹180, ಅಂಜಲ್ ಕೆ.ಜಿ ₹950, ಬೊಳಿಂಜರ್ ಕೆ.ಜಿ ₹270, ಬಿಳಿಮಾಂಜಿ ಕೆ.ಜಿ ₹1,170, ಕಪ್ಪುಮಾಂಜಿ ಕೆ.ಜಿ ₹690, ಸೀಗಡಿ ಕೆ.ಜಿ ₹520, ಏಡಿ ₹340ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.