ADVERTISEMENT

ಮಾತೃವಂದನಾ ಅನುಷ್ಠಾನ; ತುಮಕೂರು ಪ್ರಥಮ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 12:17 IST
Last Updated 9 ಜನವರಿ 2020, 12:17 IST

ತುಮಕೂರು: ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಕಳೆದ ನಾಲ್ಕು ತಿಂಗಳಿನಿಂದಲೂ ಪ್ರಥಮ ಸ್ಥಾನವನ್ನು ಜಿಲ್ಲೆ ಕಾಯ್ದುಕೊಂಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಭಾಗಿತ್ವದ ಈ ಕಾರ್ಯಕ್ರಮವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನಗೊಳ್ಳುತ್ತಿದೆ. ಇಲ್ಲಿಯವರೆಗೆ ಜಿಲ್ಲೆಯ 36,797 ಫಲಾನುಭವಿಗಳ ಖಾತೆಗೆ ₹ 15.7 ಕೋಟಿಯನ್ನು ‘ನೇರ ನಗದು ವರ್ಗಾವಣೆ’ ಮೂಲಕ ಜಮೆ ಮಾಡಲಾಗಿದೆ.

ಪ್ರತಿ ತಿಂಗಳು 1,033 ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಗುರಿ ಇದೆ. ಜಿಲ್ಲೆಯಲ್ಲಿ ಪ್ರತಿ ತಿಂಗಳು 1,300ಕ್ಕೂ ಹೆಚ್ಚು ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸಲಾಗುತ್ತಿದೆ.

ADVERTISEMENT

ಕಾರ್ಯಕ್ರಮದ ಯಶಸ್ವಿಗಾಗಿ ಮಾತೃವಂದನಾ ಸಪ್ತಾಹ, ತಾಯಂದಿರ ಸಭೆ, ಜಾಗೃತಿ ಜಾಥಾ, ಬೀದಿ ನಾಟಕ, ಮನೆ-ಮನೆಗೆ ಭೇಟಿ ನೀಡಿ ಫಲಾನುಭವಿಗಳಿಂದ ಖುದ್ದಾಗಿ ಅರ್ಜಿ ಸಂಗ್ರಹ, ಸಾಮೂಹಿಕ ಸೀಮಂತ, ರೇಡಿಯೊ ಕಾರ್ಯಕ್ರಮ, ನೇರ ಫೋನ್ ಇನ್ ಕಾರ್ಯಕ್ರಮ, ಕರಪತ್ರ, ಭಿತ್ತಿಪತ್ರ ವಿತರಣೆ, ಗೋಡೆಬರಹ ಮತ್ತಿತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ತಿಳಿಸಿದರು.

‘ಯೋಜನೆಯಡಿ ಫಲಾನುಭವಿಗಳಿಂದ ಹೆಚ್ಚು ಅರ್ಜಿ ಸಂಗ್ರಹಿಸಿದ ಪ್ರತಿ ತಾಲ್ಲೂಕಿನ ಒಬ್ಬ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಗೆ ಜಿಲ್ಲಾ ಮಟ್ಟದಲ್ಲಿ ಅಭಿನಂದನಾ ಪತ್ರ ವಿತರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.