ADVERTISEMENT

ತುಮಕೂರು: ತೆವಳುತ್ತಾ ಸಾಗಿರುವ ಮನೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 5:06 IST
Last Updated 21 ನವೆಂಬರ್ 2023, 5:06 IST
ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ
ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ   

ತುಮಕೂರು: ಮೀನುಗಾರರಿಗೆ ಸ್ವಂತ ಸೂರು ಕಲ್ಪಿಸುವ ಸದುದ್ದೇಶದಿಂದ ಸರ್ಕಾರ ಆರಂಭಿಸಿರುವ ‘ಮತ್ಸ್ಯಾಶ್ರಯ’ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಅಧಿಕಾರಿ ವರ್ಗ ತಿಣುಕಾಡುತ್ತಿದೆ. ಯೋಜನೆ ರೂಪಿಸಿ ಆರು ವರ್ಷಗಳೇ ಕಳೆದಿದ್ದರೂ ಈವರೆಗೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಮೀನುಗಾರರು ಸ್ವಂತ ಸೂರು ಹೊಂದುವ ಕಣಸು ಸಾಕಾರಗೊಂಡಿಲ್ಲ.

2014–15ನೇ ಸಾಲಿನಿಂದ ಈವರೆಗೆ 587 ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಇದರಲ್ಲಿ 409 ಮನೆಗಳು ಮಾತ್ರ ಮುಕ್ತಾಯಗೊಂಡಿವೆ. 17 ಮನೆಗಳು ಛಾವಣಿಯ ಹಂತದಲ್ಲಿ, 41 ಮನೆಗಳು ಇನ್ನೂ ಅಡಿಪಾಯದ ಹಂತದಲ್ಲಿವೆ. ಕಳೆದ ಸಾಲಿನಲ್ಲಿ 107 ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಇದುವರೆಗೆ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.

ಮನೆ ಕಟ್ಟಿಕೊಡಲು ಮತ್ಸ್ಯಾಶ್ರಯ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ₹1.20 ಲಕ್ಷ, ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹1.57 ಲಕ್ಷ, ನಗರ ಪ್ರದೇಶದಲ್ಲಿ ವಾಸಿಸುವವರಿಗೆ ₹2 ಲಕ್ಷ ಸಹಾಯಧನ ನೀಡಲಾಗುತ್ತದೆ. ಮೀನುಗಾರಿಕೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 30 ಸಾವಿರ ಮೀನುಗಾರರಿದ್ದಾರೆ. 12,250 ಪೂರ್ಣ ಕಾಲಿಕ, 17,750 ಅರೆಕಾಲಿಕ ಮೀನುಗಾರರು ಈ ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಮೀನುಗಾರರಿಗೆ ವಾಸಕ್ಕೆ ಯೋಗ್ಯವಾದ ಮನೆಗಳಿಲ್ಲ. ಜಿಲ್ಲೆಯಲ್ಲಿ ಮೀನುಗಾರರ ಸಂಖ್ಯೆ ಕಡಿಮೆ ಇದೆ. ಇರುವವರಿಗೂ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಇಲಾಖೆ ಹಿಂದೆ ಬಿದ್ದಂತೆ ಕಾಣುತ್ತಿದೆ.

ADVERTISEMENT

ಇಂದಿಗೂ ಹಲವರು ಮೀನುಗಾರರು ಬಾಡಿಗೆ ಕಟ್ಟಡದಲ್ಲಿ ವಾಸ ಮಾಡುತ್ತಿದ್ದಾರೆ. ಮೀನುಗಾರಿಕೆಯಿಂದ ಬರುವ ಆದಾಯದಲ್ಲಿ ಅರ್ಧ ಹಣವನ್ನು ಬಾಡಿಗೆಗೆ ಕಟ್ಟಬೇಕಾದ ಪರಿಸ್ಥಿತಿಯಲ್ಲಿ ಇದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಮನೆ ಕಟ್ಟಿಕೊಡುವ ಕೆಲಸವೂ ವೇಗ ಪಡೆದುಕೊಳ್ಳುತ್ತಿಲ್ಲ. ಆರು ವರ್ಷಗಳಿಂದ ಹಲವಾರು ಮನೆಗಳ ನಿರ್ಮಾಣ ಕಾಮಗಾರಿ ಬಾಕಿ ಇದೆ. 2018–19ನೇ ಸಾಲಿನಿಂದ 2021–22ನೇ ಸಾಲಿನ ವರೆಗೆ (ಮೂರು ವರ್ಷಗಳ ಕಾಲ) ಯಾವುದೇ ಮನೆಗಳು ಮಂಜೂರಾಗಿಲ್ಲ. ನಂತರ 2022–2023ನೇ ಸಾಲಿನಲ್ಲಿ ಮನೆ ಮಂಜೂರು ಮಾಡಲಾಗಿದೆ.

ಮೂರು ವರ್ಷಗಳ ತರುವಾಯ 2022–23ನೇ ಸಾಲಿನಲ್ಲಿ ಮತ್ತೆ ಮತ್ಸ್ಯಾಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಗುರಿ ನಿಗದಿ ಪಡಿಸಲಾಗಿತ್ತು. ವಸತಿಗಾಗಿ ಅರ್ಜಿ ಸಲ್ಲಿಸಿದ ಮೀನುಗಾರರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಹಲವರು ಯೋಜನೆಯಿಂದ ಹೊರಗುಳಿಯುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಕಾರ್ಯಕ್ರಮ ಅನುಷ್ಠಾನ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ.

ಕಳೆದ ವರ್ಷ 107 ಮನೆಗಳ ನಿರ್ಮಾಣಕ್ಕೆ ಅನುಮೋದನೆ ಸೂರಿಗಾಗಿ ಮೀನುಗಾರರು ಪರದಾಟ ನೆರವಾಗದ ಮತ್ಸ್ಯಾಶ್ರಯ ಯೋಜನೆ
ದಾಖಲೆ ಸಲ್ಲಿಕೆ ವಿಳಂಬ ಮನೆಗಳ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ. ಅರ್ಹರನ್ನು ಗುರುತಿಸಿ ವಸತಿ ಹಂಚಿಕೆ ಮಾಡಲಾಗಿದೆ. ಸೂಕ್ತ ದಾಖಲೆಗಳನ್ನು ಸಲ್ಲಿಸುವುದಕ್ಕೆ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಕೆಲವು ಕಡೆಗಳಲ್ಲಿ ಕಾಮಗಾರಿ ನಿಧಾನವಾಗಿದೆ.
ಶಿವಶಂಕರ್‌ ಉಪನಿರ್ದೇಶಕ ಮೀನುಗಾರಿಕೆ ಇಲಾಖೆ
ಯಾವುದೇ ಸೌಲಭ್ಯ ಸಿಗುತ್ತಿಲ್ಲ ಮೀನುಗಾರಿಕೆ ಇಲಾಖೆಯಿಂದ ಮೀನುಗಾರರಿಗೆ ಯಾವುದೇ ಮನೆ ಮಂಜೂರು ಮಾಡಿಲ್ಲ. ಇಲಾಖೆಯ ವತಿಯಿಂದ ಯಾವುದೊಂದು ಸೌಲಭ್ಯವೂ ಸಿಗುತ್ತಿಲ್ಲ. ಸರ್ಕಾರ ಸಂಪೂರ್ಣವಾಗಿ ಮೀನುಗಾರರನ್ನು ನಿರ್ಲಕ್ಷ್ಯಿಸುತ್ತಿದೆ. ಅರ್ಹರಿಗೆ ಮನೆಗಳ ಹಂಚಿಕೆ ಮಾಡುವ ಕೆಲಸವಾಗಬೇಕು. ಎಲ್ಲರಿಗೂ ಈ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು.
ತಿಮ್ಮಣ್ಣ ಮೀನುಗಾರ ಶಿರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.