ADVERTISEMENT

ಮನಸ್ಸಿನ ಸ್ಥಿರತೆಗೆ ಧ್ಯಾನ ಅಗತ್ಯ: ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 4:51 IST
Last Updated 18 ಅಕ್ಟೋಬರ್ 2021, 4:51 IST
ಧ್ಯಾನ ಹಾಗೂ ಶೈಕ್ಷಣಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಶಿಕ್ಷಕರು
ಧ್ಯಾನ ಹಾಗೂ ಶೈಕ್ಷಣಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಶಿಕ್ಷಕರು   

ಗುಬ್ಬಿ: ‘ಯೋಗ ಮತ್ತು ಧ್ಯಾನದಿಂದ ಮನಸ್ಸಿನ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಹೇಳಿದರು.

ಪಟ್ಟಣದ ಚಿದಂಬರಾಶ್ರಮದಲ್ಲಿ ಏರ್ಪಡಿಸಿದ್ದ ಧ್ಯಾನ ಶಿಬಿರ ಹಾಗೂ ಶೈಕ್ಷಣಿಕ ಸಮಾವೇಶದಲ್ಲಿ ಶಿಕ್ಷಣ ತಜ್ಞ ತಿಪ್ಪೇಸ್ವಾಮಿ ಅವರ‘ಸಮಗ್ರ ಶಿಕ್ಷಣ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶಿಕ್ಷಕರು ಉತ್ತಮ ಪುಸ್ತಕಗಳನ್ನು ಸದಾಕಾಲ ಓದುತ್ತಾ ಪ್ರಬುದ್ಧತೆ ಹೊಂದಿದರೆ ಮಾತ್ರ ಮಕ್ಕಳಿಗೆ ಗುಣಮಟ್ಟದ ಬೋಧನೆ ಮಾಡಲು ಸಾಧ್ಯ. ಕೋವಿಡ್‌ನಿಂದಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆ ಹಿಂದುಳಿದಿದೆ. ಅವರನ್ನು ಮತ್ತೆ ಓದಿನ ಕಡೆ ಸೆಳೆಯುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ಒತ್ತಡರಹಿತವಾಗಿ ಕರ್ತವ್ಯ ನಿರ್ವಹಿಸಲು ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ರಾಜ್ಯ ಡಿಎಸ್‌ಆರ್‌ಟಿಸಿಯ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ್ ಮಾತನಾಡಿ, ಸಮಗ್ರ ಶಿಕ್ಷಣ ಎಂದರೆ ಪ್ರಜ್ಞೆಯ ಎಲ್ಲಾ ಹಂತಗಳನ್ನೂ ಪರಿಪೂರ್ಣವಾಗಿ ವ್ಯಕ್ತಗೊಳಿಸುವುದೇ ಆಗಿದೆ ಎಂದು ಹೇಳಿದರು.

ಮಾನವನ ಅಂತರ್ ಶಕ್ತಿ ಹೆಚ್ಚಿಸಿ ಸತ್ಯವೂ ಮತ್ತು ಸುಂದರವೂ ಆಗಿರುವುದನ್ನು ಅರಿತುಕೊಳ್ಳಬೇಕು. ಆಗ ವ್ಯಕ್ತಿ ಸಮಗ್ರವಾಗಿ ವಿಕಾಸವಾಗುತ್ತಾನೆ. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಬದಲಾವಣೆಯ ಅಗತ್ಯವಿದೆ ಎಂದು ತಿಳಿಸಿದರು.

ಆಧುನಿಕವಾದ ಶೈಕ್ಷಣಿಕ ಚಿಂತನೆ ಹಾಗೂ ವಿಚಾರಧಾರೆಗಳನ್ನು ಸಮಗ್ರ ಶಿಕ್ಷಣ ಕೃತಿಯಲ್ಲಿ ತಿಪ್ಪೇಸ್ವಾಮಿ ಅವರು ಉಲ್ಲೇಖ ಮಾಡಿದ್ದಾರೆ. ಇಂದಿನ ಹೊಸ ಶಿಕ್ಷಣ ನೀತಿಯ ಅಂಶಗಳಿಗೆ ಪೂರಕವಾಗಿ ಅರ್ಥೈಸಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.

ಸಾಹಿತಿ ಶೈಲ ನಾಗರಾಜು ಮಾತನಾಡಿ, ಇಲ್ಲಿಯವರೆಗೆ ಹಲವು ರಾಜಕೀಯ ಸುಧಾರಕರು, ಆರ್ಥಿಕ ತಜ್ಞರು, ಸಮಾಜ ಸುಧಾರಕರು, ಧಾರ್ಮಿಕ ಹಾಗೂ ಶಿಕ್ಷಣ ಸುಧಾರಕರು ಬಂದು ಹೋಗಿದ್ದರೂ ಮನುಷ್ಯ ತನ್ನ ಮನಸ್ಥಿತಿ ಅರಿಯಲು ವಿಫಲವಾಗಿದ್ದಾನೆ ಎಂದು ವಿಷಾದಿಸಿದರು.

ಜಗತ್ತಿನಲ್ಲಿ ಹಿಂಸೆ, ಅಶಾಂತಿ, ಯುದ್ಧ ಭಯ, ಕ್ರೌರ್ಯ ಇಂದಿಗೂ ತಾಂಡವವಾಡುತ್ತಿದೆ. ಧ್ಯಾನ ಹಾಗೂ ಯೋಗಾಭ್ಯಾಸಗಳಿಂದ ಇದಕ್ಕೆಲ್ಲಾ ಉತ್ತರ ಕಂಡುಕೊಳ್ಳಲು ಸಾಧ್ಯ ಎಂದರು.

ಶಿಕ್ಷಕ ಹಾಗೂ ವಿದ್ಯಾರ್ಥಿಗಳು ತಮ್ಮ ಕೆಲಸದಲ್ಲಿ ತನ್ಮಯರಾದಾಗ ಇಂದ್ರಿಯಗಳೂ ಒಟ್ಟಿಗೆ ಕೆಲಸ ಮಾಡುತ್ತವೆ. ಅದಕ್ಕೆ ಇಂತಹ ಧ್ಯಾನ ಶಿಬಿರಗಳು ಪೂರಕವಾಗಿವೆ ಎಂದು ತಿಳಿಸಿದರು.

ಶಿಬಿರದಲ್ಲಿ ಧ್ಯಾನ ಶಿಕ್ಷಣ, ಶಾಲೆಯ ಮಾರ್ಗದರ್ಶಕರಾದ ದಕ್ಷಿಣಮೂರ್ತಿ, ನರಸಿಂಗಪ್ಪ, ವೀರಣ್ಣ, ಚಿಕ್ಕವೀರಯ್ಯ, ಚಂದ್ರಶೇಖರ್, ಮಧುಸೂದನ್, ಶ್ರೀನಿವಾಸ್, ಶಕುಂತಲಾ, ಎ.ಆರ್. ರಂಗಸ್ವಾಮಿ, ಹುಳಿಯಾರ್‌ ಗೋಪಾಲ್-ಜಗದೀಶ್, ಯಡೆಯೂರು ಯೋಗ ಶಿಕ್ಷಕ ಜಗದೀಶ, ಡಿವೈಪಿಸಿ ಬಂಡೀವೀರಪ್ಪ ಪ್ರಾಯೋಗಿಕವಾಗಿ ತರಬೇತಿ ನೀಡಿದರು.

ಬಿಆರ್‌ಪಿಗಳಾದ ಗಿರೀಶ್, ಈಶ್ವರಪ್ಪ, ಚಂದ್ರಶೇಖರ್, ಸಿಆರ್‌ಪಿಗಳಾದ ರಂಗಪ್ಪ, ಲಕ್ಷ್ಮಣ, ಶಿವಣ್ಣ, ಶಿಕ್ಷಕರಾದ ಹೊನ್ನಮ್ಮ, ಪ್ರಕಾಶ್, ಎಚ್.ಡಿ. ಹೇಮಾವತಿ, ವೀರಣ್ಣ, ನಟರಾಜು, ಪ್ರಗತಿಪರ ರೈತ ಬಿಸಿಲಳ್ಳಿ ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.