ADVERTISEMENT

ತುಮಕೂರು: ಸಿರಿಧಾನ್ಯ ಸೊಬಗು; ಸಾವಯವ ಜಾಗೃತಿ

‘ಸಾವಯವ ಗೊಬ್ಬರ ಬಳಸಿ, ಮಣ್ಣು ಉಳಿಸಿ’ ರೈತರಿಗೆ ಅರಿವು

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 6:25 IST
Last Updated 8 ಜನವರಿ 2026, 6:25 IST
ತುಮಕೂರಿನ ಗಾಜಿನಮನೆಯಲ್ಲಿ ಬುಧವಾರ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬದ ಪ್ರಯುಕ್ತ ಸಿದ್ಧಪಡಿಸಿದ್ದ ಕಿರು ಧಾನ್ಯಗಳ ರಾಶಿ
ತುಮಕೂರಿನ ಗಾಜಿನಮನೆಯಲ್ಲಿ ಬುಧವಾರ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬದ ಪ್ರಯುಕ್ತ ಸಿದ್ಧಪಡಿಸಿದ್ದ ಕಿರು ಧಾನ್ಯಗಳ ರಾಶಿ   

ತುಮಕೂರು: ಸಿರಿಧಾನ್ಯ ಉತ್ಪನ್ನಗಳ ಬಳಕೆ ಕುರಿತು ಜಾಗೃತಿ, ಸ್ವ–ಸಹಾಯ ಸಂಘದ ಮಹಿಳೆಯರು ತಯಾರಿಸಿದ ವಿವಿಧ ಉತ್ಪನ್ನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ, ಪ್ರಗತಿಪರ ರೈತರ ಸಮಾಗಮ, ರೈತರು ಮತ್ತು ಗ್ರಾಹಕರ ಮಧ್ಯೆ ನೇರ ವಹಿವಾಟು...

ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆಯಿಂದ ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ, ವಾಣಿಜ್ಯ ಮೇಳ ಹಾಗೂ ‘ಬೆಳೆ ಉತ್ಪಾದನೆಯಾಚೆಗಿನ ರೈತರ ಸಬಲೀಕರಣ’ ಕಾರ್ಯಾಗಾರ ಗಮನ ಸೆಳೆಯಿತು.

ಬರಗು, ಊದಲು, ಸಾಮೆ, ಹಾರಕ, ಕೊರಲೆ, ನವಣೆ, ಸಜ್ಜೆ, ಜೋಳ, ರಾಗಿ ಇತರೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಸಿರಿ ಧಾನ್ಯ ಹಬ್ಬ ವೇದಿಕೆ ಕಲ್ಪಿಸಿತು. ‘ಸಾವಯವ ಗೊಬ್ಬರ ಬಳಸಿ, ಮಣ್ಣು ಉಳಿಸಿ’ ಎಂದು ರೈತರಲ್ಲಿ ಅರಿವು ಮೂಡಿಸಲಾಯಿತು. ಮಷಣಾಪುರದ ಪ್ರಗತಿಪರ ರೈತ ಚನ್ನಕೇಶವ ಅವರು ತಂದಿದ್ದ ಬ್ಲೂ ಬೆರಿ, ಮೂರು–ನಾಲ್ಕು ಬಗೆಯ ಹಲಸಿನ ಸಸಿ, ಮೆಣಸು ಸಸಿಗಳಿಗೆ ಬೇಡಿಕೆ ಕಂಡುಬಂತು.

ADVERTISEMENT

ಜಿಲ್ಲೆಯ ವಿವಿಧ ಭಾಗಗಳು ರೈತರು, ರೈತ ಮಹಿಳೆಯರು, ಸ್ವ–ಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು. ಕೃಷಿ, ತೋಟಗಾರಿಕೆ, ಪಶುಪಾಲನೆ, ರೇಷ್ಮೆ, ಮೀನುಗಾರಿಕೆ ಸೇರಿ ಹಲವು ಇಲಾಖೆಗಳಿಂದ ಮಳಿಗೆ ತೆರೆಯಲಾಗಿತ್ತು. ಕೃಷಿಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಸುಧಾರಣಾ ಕ್ರಮಗಳ ಕುರಿತು ರೈತರಿಗೆ ತಿಳಿಸಿ ಕೊಡಲಾಯಿತು.

ಬಾಗಲಕೋಟೆ, ಶಿರಾ, ಬೆಂಗಳೂರು, ತಿಪಟೂರು ಒಳಗೊಂಡಂತೆ ಜಿಲ್ಲೆ, ಹೊರ ಜಿಲ್ಲೆಗಳ ಸ್ವ–ಸಹಾಯ ಗುಂಪುಗಳ ಮಹಿಳೆಯರು ಮನೆಯಲ್ಲಿ ತಯಾರಿಸಿದ ಉತ್ಪನ್ನ ಮಾರಾಟ ಮಾಡಲಾಯಿತು. ರಾಗಿ ಹಪ್ಪಳ, ರಾಗಿ ಬಿಸ್ಕೆಟ್, ಅಕ್ಕಿ ರೊಟ್ಟಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಇತರೆ ಆಹಾರ ಪದಾರ್ಥಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಭೂಪಟ: ಗಾಜಿನಮನೆಯಲ್ಲಿ ಕಿರು ಧಾನ್ಯಗಳ ರಾಶಿ ಮಾಡಲಾಗಿತ್ತು. ಜಿಲ್ಲೆಯ ಆಯಾ ತಾಲ್ಲೂಕಿನಲ್ಲಿ ಪ್ರಧಾನವಾಗಿ ಬೆಳೆಯುವ ಉತ್ಪನ್ನಗಳನ್ನು ಬಳಸಿಕೊಂಡು ಜಿಲ್ಲೆಯ ಭೂಪಟ ಸಿದ್ಧಪಡಿಸಲಾಗಿತ್ತು. ಪಾವಗಡದಲ್ಲಿ ಶೇಂಗಾ ಹೆಚ್ಚಾಗಿ ಬೆಳೆಯುತ್ತಿದ್ದು, ಭೂಪಟದಲ್ಲಿನ ತಾಲ್ಲೂಕಿನ ಭಾಗವನ್ನು ಶೇಂಗಾ ಬೀಜದಿಂದ ಅಲಂಕರಿಸಲಾಗಿತ್ತು. ಜಿಲ್ಲೆಯಲ್ಲಿ ಬೆಳೆಯುವ ಸಿರಿ ಧಾನ್ಯದ ಚಿತ್ರಣ ಕಟ್ಟಿ ಕೊಡಲಾಯಿತು.

ತುಮಕೂರಿನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬದಲ್ಲಿ ರೈತರಿಗೆ ಪ್ರಶಸ್ತಿ ವಿತರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್ ಮೌರ್ಯ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಎಸ್ಪಿ ಕೆ.ವಿ.ಅಶೋಕ್‌ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಮಂಜುನಾಥ್ ಮೊದಲಾದವರು ಹಾಜರಿದ್ದರು
ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ | ಜಿಲ್ಲೆಯ ರೈತರಿಗೆ ಕಾರ್ಯಾಗಾರ | ಕಿರುಧಾನ್ಯ ಬಳಕೆಯ ಅರಿವು

1.70 ಲಕ್ಷ ಹೆಕ್ಟೇರ್‌ನಲ್ಲಿ ಸಿರಿಧಾನ್ಯ

ಜಿಲ್ಲೆಯಲ್ಲಿ ರಾಗಿ ಸೇರಿದಂತೆ 1.70 ಲಕ್ಷ ಹೆಕ್ಟೇರ್‌ನಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಸರ್ಕಾರ ಬೆಳೆಗಾರರಿಗೆ ಅಗತ್ಯ ಪ್ರೋತ್ಸಾಹ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು. ಸಿರಿಧಾನ್ಯ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು. ‘ರಾಜ್ಯದಲ್ಲಿ ಪ್ರತಿ ವರ್ಷ 20 ಲಕ್ಷ ಹೆಕ್ಟೇರ್‌ನಲ್ಲಿ ಕಿರುಧಾನ್ಯ ಬೆಳೆಯಲಾಗುತ್ತಿದೆ. ಇದರಲ್ಲಿ ಜಿಲ್ಲೆಯ ಪಾಲು ಹೆಚ್ಚಿದೆ. ವಾಣಿಜ್ಯ ಬೆಳೆಗೆ ಬೇಡಿಕೆ ಹೆಚ್ಚಿದ ನಂತರ ಸಿರಿಧಾನ್ಯ ಕಡಿಮೆಯಾಗಿದೆ. ಕಿರು ಧಾನ್ಯಗಳಲ್ಲಿ ವಿವಿಧ ಬಗೆಯ ಉತ್ಪನ್ನ ತಯಾರಿಸಿ ಮಾರುಕಟ್ಟೆಗೆ ತರುತ್ತಿದ್ದು ಇದು ಬೆಳೆಗಾರರ ಆದಾಯ ವೃದ್ಧಿಸಿದೆ. ಇಂತಹ ಉತ್ಪನ್ನಗಳ ಬಳಕೆ ಹೆಚ್ಚಾಗಬೇಕು’ ಎಂದರು. ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್ ಮೌರ್ಯ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಮಂಜುನಾಥ್ ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್ ಎಸ್.ಕಳ್ಳೆನ್ನವರ ಉಪನಿರ್ದೇಶಕ ಎಚ್‌.ಹುಲಿರಾಜ್‌ ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಬಿ.ಸಿ.ಶಾರದಮ್ಮ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.