ತುಮಕೂರು: ಗಣಿಗಾರಿಕೆ ಕಂಪನಿಗಳ ಜತೆ ಸರ್ಕಾರ ಅಪವಿತ್ರ ಮೈತ್ರಿ ಹೊಂದಿದೆ. ಮನುಷ್ಯನ ದುರಾಸೆಯಿಂದ ಜೈವಿಕ ವೈವಿಧ್ಯತೆ ವಿನಾಶದ ಅಂಚಿಗೆ ಬಂದಿದೆ. ಪರಿಸರ ಉಳಿಸಲು ಸಂಘಟಿತ ಹೋರಾಟ ಅನಿವಾರ್ಯ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.
ನಗರದಲ್ಲಿ ಶುಕ್ರವಾರ ಜನಾಂದೋಲನ ಮಹಾಮೈತ್ರಿ, ಜನಸಂಗ್ರಾಮ ಪರಿಷತ್, ಸಮಾನ ಮನಸ್ಕ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಗಣಿ ಬಾಧಿತ ಪ್ರದೇಶದ ಪುನಶ್ಚೇತನಾ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಗಣಿಗಾರಿಕೆ ನಿಲ್ಲಬೇಕು. ಗಣಿಗಾರಿಕೆ ಕಂಪನಿಗಳ ಮೇಲೆ ನಿಯಂತ್ರಣ ಹೇರಬೇಕು. ಪರಿಸರದ ಮೇಲೆ ಮುಂದಿನ ಪೀಳಿಗೆಗೂ ಹಕ್ಕಿದೆ, ಅದನ್ನು ಜವಾಬ್ದಾರಿಯಿಂದ ಕಾಪಾಡಬೇಕು. ವ್ಯಾಪಕ ಹೋರಾಟದಿಂದ ಅರಣ್ಯ ಉಳಿಸಬಹುದು. ರೈತರು, ಮಹಿಳೆಯರು, ದಲಿತರು, ವಿದ್ಯಾರ್ಥಿಗಳು ಮತ್ತು ದುಡಿಯುವ ಕಾರ್ಮಿಕ ಸಂಘಟನೆಗಳನ್ನು ಕೂಡಿಸಿಕೊಂಡು ಹೋರಾಟ ರೂಪಿಸಬೇಕು ಎಂದು ಸಲಹೆ ಮಾಡಿದರು.
ಅಕ್ರಮ ಗಣಿಗಾರಿಕೆ ನಿಂತರೂ ಸಮಸ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಕಾನೂನು ಅನುಮತಿ ಪಡೆದು ನಡೆಯುವ ಗಣಿಗಾರಿಕೆಯಿಂದಲೂ ಈ ಭಾಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೊಸದಾಗಿ ಸಂಡೂರಿನ ದೇವದಾರಿ, ರಾಮಘಡ, ಚಿಕ್ಕನಾಯಕನಹಳ್ಳಿಯ ಸಾರಂಗಪಾಣಿಯಲ್ಲಿ ಗಣಿಗಾರಿಕೆಗೆ ಅನುಮೋದನೆ ನೀಡಲಾಗಿದೆ. ಇದು ಜನ, ಪರಿಸರದ ಮೇಲೆ ಯುದ್ಧ ಸಾರಿದಂತೆ ಇದೆ. ಹೋರಾಟದಿಂದ ಮಾತ್ರ ಇದನ್ನು ತಡೆಯಲು ಸಾಧ್ಯ ಎಂದರು.
ಕರ್ನಾಟಕ ಗಣಿ ಪರಿಸರ ಪುನಶ್ಚೇತನಾ ನಿಗಮದ (ಕೆಎಂಇಆರ್‌ಸಿ) ₹30 ಸಾವಿರ ಕೋಟಿ ಹಣ ದುರುಪಯೋಗ ಆಗಬಾರದು. ಪರಿಸರ ಪುನಶ್ಚೇತನಾ, ಗಣಿಗಾರಿಕೆಯಿಂದ ತತ್ತರಿಸಿದ, ದುರ್ಬಲರಾದ ಜನರ ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಮಾತ್ರ ಬಳಸಬೇಕು. ಗಿಡಗಳ ಮಾರಣಹೋಮ ಇಲ್ಲಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಪರಿಸರವಾದಿ ಸಿ.ಯತಿರಾಜು, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ಜನಾಂದೋಲನ ಮಹಾಮೈತ್ರಿಯ ಎನ್.ಎಸ್.ಪಂಡಿತ್ ಜವಹಾರ್, ವೇಣುಗೋಪಾಲ್ ಭಟ್ ಇತರರು ಹಾಜರಿದ್ದರು.
16ರಂದು ರಾಜ್ಯ ಸಮಾವೇಶ
‘ಗಣಿಗಾರಿಕೆ ನಿಲ್ಲಿಸಿ ಪರಿಸರ ರಕ್ಷಿಸಿ’ ಎಂದು ಆಗ್ರಹಿಸಿ ಆ. 16ರಂದು ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಆರ್.ಹಿರೇಮಠ ಮಾಹಿತಿ ನೀಡಿದರು. ಹೊಸದಾಗಿ ಕುದುರೆಮುಖ ಭದ್ರಾವತಿ ಉಕ್ಕು ಕಾರ್ಖಾನೆ ಜಿಂದಾಲ್ ವೇದಾಂತ್ ಮತ್ತು ಇನ್ನಿತರ ಖಾಸಗಿ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಗಣಿಗಾರಿಕೆ ನಡೆಸಲು ಪರವಾನಗಿ ನೀಡಬಾರದು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಗಣಿಗಾರಿಕೆಯನ್ನು ವಾರ್ಷಿಕ 20 ಮಿಲಿಯನ್ ಟನ್‌ಗೆ ಮಿತಿಗೊಳಿಸಬೇಕು. ಗಣಿ ಬಾಧಿತ ಪ್ರದೇಶದ ಜನರ ಸಭೆ ನಡೆಸಿ ಅಹವಾಲು ಆಲಿಸಬೇಕು. ವೈಜ್ಞಾನಿಕ ನೀಲಿ ನಕಾಶೆ ತಯಾರಿಸಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.