ADVERTISEMENT

ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಜೆ.ಸಿ.ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 2:56 IST
Last Updated 25 ನವೆಂಬರ್ 2021, 2:56 IST
ಜೆ.ಸಿ. ಮಾಧುಸ್ವಾಮಿ
ಜೆ.ಸಿ. ಮಾಧುಸ್ವಾಮಿ   

ತುಮಕೂರು: ಬೆಲೆ ಏರಿಕೆ ಸಹಜ. ಕಾಲಕ್ಕೆ ಅನುಗುಣವಾಗಿ ಬೆಲೆ ಏರಿಕೆಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಮರ್ಥಿಸಿ ಕೊಂಡರು.

ಬೆಲೆ ಏರಿಕೆ ವಿಧಾನ ಪರಿಷತ್ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನೋಟಿನ ಮೌಲ್ಯ ಕಡಿಮೆಯಾದಂತೆ ಉತ್ಪನ್ನಗಳ ಬೆಲೆ ಹೆಚ್ಚಳವಾಗುತ್ತದೆ. ಇದು ಎಲ್ಲಾ ಸರ್ಕಾರಗಳು ಇದ್ದಾಗಲೂ ಆಗುತ್ತದೆ. ನಿರಂತರವಾಗಿ ಬೆಲೆ ಏರಿಕೆ ಆಗುತ್ತಲೇ ಬಂದಿದೆ’ ಎಂದುಹೇಳಿದರು.

ನೆರೆ ಪೀಡಿತ ಜಿಲ್ಲೆ: ಈವರೆಗೆ ಜಿಲ್ಲೆ ಬರ ಪೀಡಿತ ಎಂದೇ ಹೇಳಲಾಗುತಿತ್ತು. ಆದರೆ ಈ ಬಾರಿ ಹೆಚ್ಚು ಮಳೆಯಾಗಿದ್ದು, ನೆರೆಪೀಡಿತ ಜಿಲ್ಲೆ ಎಂದು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಜಿಲ್ಲೆಯಲ್ಲಿ ಶೇ 80ರಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ರಾಗಿ, ಹುರುಳಿ, ಜೋಳ, ಶೇಂಗಾ ಸೇರಿದಂತೆ ಸಾಕಷ್ಟು ಬೆಳೆಗಳು ಮಳೆಗೆ ತುತ್ತಾಗಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ADVERTISEMENT

ಬೆಳೆ ವಿಮೆ ಸೌಲಭ್ಯ ಇರುವ ಬೆಳೆಗಳಿಗೆ ಆ ಮೂಲಕ ಪರಿಹಾರ ಒದಗಿಸಲಾಗುವುದು. ಬೆಳೆ ವಿಮೆ ಇಲ್ಲದ ಬೆಳೆಗಳಿಗೆ ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ಕಲ್ಪಿಸಲಾಗುವುದು. ಈ ಬಗ್ಗೆ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಬಿದ್ದಿರುವ ಮನೆಗಳನ್ನು ತಕ್ಷಣ ನಿರ್ಮಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಸಹಾಯ ಮಾಡಲ್ಲ: ‘ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಿಂದಿನ ಚುನಾವಣೆಗಳಲ್ಲಿ ನಮಗೆ ಸಹಾಯ ಮಾಡಿದ್ದಾರೆ. ನಾವೂ ಅವರಿಗೆ ಸಹಾಯ ಮಾಡಿದ್ದೇವೆ. ಈಗ ಅವರ ಮಗ ರಾಜೇಂದ್ರ ವಿಧಾನ ಪರಿಷತ್‌ಗೆ ಸ್ಪರ್ಧಿಸಿದ್ದು, ಈ ಸಂದರ್ಭದಲ್ಲಿ ಸಹಾಯ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ಎಲ್ಲರೂ ಪಕ್ಷ ನಿಷ್ಠರಾಗಿ ಕೆಲಸ ಮಾಡುತ್ತಿದ್ದೇವೆ. ನಾನಾಗಲಿ, ಉಳಿದ ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ಸಹಾಯಕ್ಕೆ ನಿಲ್ಲುವುದಿಲ್ಲ. ಪಕ್ಷದ ವಿಚಾರ ಬಂದಾಗ ರಾಜಿಯಾಗುವುದಿಲ್ಲ. ಪಕ್ಷಕ್ಕೆ ದ್ರೋಹ ಬಗೆಯುವುದೂ ಒಂದೇ, ಹೆತ್ತ ತಾಯಿಗೆ ದ್ರೋಹ ಮಾಡುವುದೂ ಒಂದೇ’ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ ಹೇಳಿದ್ದಾರೆ ಎನ್ನಲಾದ ‘ಬಡವರು ಬಿಜೆಪಿಗೆ ವೋಟು ಹಾಕುವುದಿಲ್ಲ. ಏನಿದ್ದರೂ ಶ್ರೀಮಂತರೇ ವೋಟು ಹಾಕುವುದು’ ಎಂಬ ಮಾತುಗಳಿರುವ ಆಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವುದಕ್ಕೆ ಸ್ಪಷ್ಟನೆ ನೀಡಿ, ಐದಾರು ವರ್ಷಗಳ ಹಿಂದಿನ ಆಡಿಯೊ, ಅದಕ್ಕೆ ಈಗ ಸಂಬಂಧವಿಲ್ಲ. ಎಲ್ಲಕ್ಕೂ ಉತ್ತರ ಕೊಟ್ಟುಕೊಂಡು ಕುಳಿತುಕೊಳ್ಳಲಾಗದು ಎಂದರು.

ಹಿಂದೆ ಯಾರೋ ಸಿಗರೇಟ್ ಸೇದುತ್ತಿದ್ದು, ವಿಸ್ಕಿ ಕುಡಿಯುತ್ತಿದ್ದರು ಎಂದರೆ ಈಗ ಉತ್ತರ ಹೇಳಲಾಗದು. ಜನರ ಬಳಿ ಹೋಗಿ ಹೇಳುತ್ತೇವೆ. ಜೆಡಿಎಸ್ ಅಭ್ಯರ್ಥಿ ಜನಸೇವೆ ಮಾಡಿ ಬಂದಿದ್ದಾರೆಯೆ? ಜಿಲ್ಲೆಗೆ ಏನು ಕಾಣಿಕೆ ಕೊಟ್ಟಿದ್ದಾರೆ? ಕೆಐಎಡಿಬಿಯಿಂದ ನೇರವಾಗಿ ಇಲ್ಲಿಗೆ ಬಂದಿದ್ದಾರೆ. ಎಲ್ಲವೂ ನಮಗೂ ಗೊತ್ತಿದೆ ಎಂದು ಹೇಳಿದರು.

ಮೈತ್ರಿ ಇಲ್ಲ: ಜೆಡಿಎಸ್ ಜತೆಗೆ ನಾವು ಮೈತ್ರಿ ಮಾಡಿಕೊಂಡಿಲ್ಲ. ಜಿಲ್ಲೆಯಲ್ಲಿ ಐದು ಜನ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಹೊಂದಿದ್ದೇವೆ. ಹೊಂದಾಣಿಕೆ ಮಾಡಿಕೊಂಡರೆ ನಮಗೆ ನಾಚಿಕೆಯಾಗುತ್ತದೆ ಎಂದರು.

ರಾಜಣ್ಣ ಅವರಿಗೆ ಸಹಕಾರ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಂಸದ ಜಿ.ಎಸ್.ಬಸವರಾಜು, ‘ಅವರು ಮಾಡುವ ಕೆಟ್ಟ ರಾಜಕೀಯ ನಾನು ಮಾಡುವುದಿಲ್ಲ’ ಎಂದು ಹೇಳಿದರು.

ಮುಖಂಡರಾದ ಎಂ.ಬಿ.ನಂದಿಶ್, ಸೊಗಡು ಶಿವಣ್ಣ, ಹೆಬ್ಬಾಕ ರವಿಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.