ADVERTISEMENT

ಕೆಡಿಪಿ ಸಭೆ ಮರೆತ ಸಚಿವರು: ತುಮಕೂರು ಜಿಲ್ಲೆಯ ಶಾಸಕರಿಗೆ ವೋಟಿನ ಚಿಂತೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 15:40 IST
Last Updated 27 ಮಾರ್ಚ್ 2023, 15:40 IST
ತುಮಕೂರು ಜಿಲ್ಲಾ ಪಂಚಾಯಿತಿ
ತುಮಕೂರು ಜಿಲ್ಲಾ ಪಂಚಾಯಿತಿ   

ತುಮಕೂರು: ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಮುಖಂಡರಿಗೆ ಅಭಿವೃದ್ಧಿಗಿಂತ ಚುನಾವಣೆ ಮುಖ್ಯವಾಗಿದೆ. ವೋಟಿನ ಚಿಂತೆ ಬಿಟ್ಟರೆ ಪ್ರಗತಿ ಯಾರಿಗೂ ಬೇಕಾಗಿಲ್ಲ ಎನಿಸುತ್ತದೆ. ಕೆಡಿಪಿ ಸಭೆ ನಡೆಸಿ ಜಿಲ್ಲೆಯ ಪ್ರಗತಿ ಯಾವ ದಿಕ್ಕಿನತ್ತ ಸಾಗಿದೆ ಎಂಬುದನ್ನು ಗಮನಿಸುವ ಕನಿಷ್ಠ ಕಾಳಜಿ ಯಾರಲ್ಲೂ ಕಾಣುತ್ತಿಲ್ಲ.

ಜಿಲ್ಲೆಯ ಅಭಿವೃದ್ಧಿ ನೊಗ ಹೊತ್ತು ಸಾಗುತ್ತಿರುವ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬಹುತೇಕ ಇಲಾಖೆಗಳು ಬರುತ್ತವೆ. ಇಡೀ ಅಭಿವೃದ್ಧಿಯ ಕಣ್ಣೋಟ ಜಿ.ಪಂ ಮೇಲೆ ಇರುತ್ತದೆ. ಯಾವ ಇಲಾಖೆಗಳು ಎಷ್ಟು ಪ್ರಗತಿ ಸಾಧಿಸಿವೆ? ನೀಡಿದ ಗುರಿ ಮುಟ್ಟಿವೆಯೇ? ಹಿಂದುಳಿಯಲು ಕಾರಣಗಳೇನು? ಪ್ರಗತಿಯಾಗದಿದ್ದರೆ ಏನು ಮಾಡಬಹುದು? ಎಂಬ ಬಗ್ಗೆ ಚರ್ಚಿಸಿ, ಅಧಿಕಾರಿ ವರ್ಗಕ್ಕೆ ಚುರುಕು ಮುಟ್ಟಿಸಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಪ್ರತಿ ಮೂರು ತಿಂಗಳಿಗೆ ಒಮ್ಮೆ (ತ್ರೈಮಾಸಿಕ) ಕೆಡಿಪಿ ಸಭೆ ನಡೆಸಲಾಗುತ್ತದೆ.

ದಶಕಗಳಿಂದಲೂ ಕೆಡಿಪಿ ಸಭೆ ನಡೆಸಿಕೊಂಡು ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಪ್ರಗತಿ ಪರಿಶೀಲಿಸಿ, ಅಗತ್ಯ ನಿರ್ದೇಶನ ನೀಡುತ್ತಿದ್ದಾರೆ. ತೀರಾ ಹಿಂದುಳಿದ, ಕೆಲಸ ಮಾಡದ ಇಲಾಖೆ, ಅಧಿಕಾರಿಗಳ ವಿರುದ್ಧ ಚಾಟಿ ಬೀಸುತ್ತಾರೆ. ರಾಜ್ಯದಲ್ಲೇ ತುಮಕೂರು ಎರಡನೇ ಅತಿ ದೊಡ್ಡ ಜಿಲ್ಲೆಯಾಗಿದ್ದರೂ, ಇಲ್ಲಿ ಮಾತ್ರ ಅಭಿವೃದ್ಧಿಯ ಚಿಂತೆಯನ್ನೇ ಸರ್ಕಾರ ಮರೆತಿದೆ.

ADVERTISEMENT

ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ ನಿಯಮಿತವಾಗಿ ಸಭೆಗಳನ್ನು ನಡೆಸಿ ಪ್ರಗತಿಗೆ ವೇಗ ನೀಡಿದ್ದರು. ಕೆಲಸ ಮಾಡದ ಅಧಿಕಾರಿಗಳಿಗೆ ಸಭೆಯಲ್ಲೇ ಚಳಿ ಬಿಡಿಸುತ್ತಿದ್ದರು. ಮಾಧುಸ್ವಾಮಿ ಬದಲಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ ನಂತರ ಅಭಿವೃದ್ಧಿ ಚಟುವಟಿಕೆಗಳು ಎಲ್ಲಿ ನಿಂತಿದ್ದವೊ ಅಲ್ಲೇ ಇವೆ. ಕಳೆದ ಎರಡು ವರ್ಷಗಳ ಬೆಳವಣಿಗೆ ಗಮನಿಸಿದರೆ ಜಿಲ್ಲೆ ಅಭಿವೃದ್ಧಿಯಲ್ಲಿ ಹತ್ತು ವರ್ಷ ಹಿಂದಕ್ಕೆ ಹೋಗಿದೆ ಎಂಬುದು ಹಲವರ ಆರೋಪ.

2022–2023ನೇ ಸಾಲಿನ ಮೊದಲ (ಏಪ್ರಿಲ್– ಜೂನ್) ತ್ರೈಮಾಸಿಕ ಸಭೆ ಜುಲೈನಲ್ಲಿ ನಡೆಯಬೇಕಿತ್ತು. ಆದರೆ, ಮೂರು ತಿಂಗಳು ತಡವಾಗಿ ಸೆಪ್ಟೆಂಬರ್ ಕೊನೆಯಲ್ಲಿ ನಡೆಯಿತು. ಅದೂ ಎರಡು ಗಂಟೆಗೆ ಸೀಮಿತ. ಎರಡನೇ (ಜುಲೈ– ಸೆಪ್ಟೆಂಬರ್‌) ತ್ರೈಮಾಸಿಕ ಸಭೆ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದು, ಸಭೆ ನಿಗದಿಪಡಿಸಿ ಮುಂದೂಡುತ್ತಲೇ ಬಂದು ಕೊನೆಗೆ ಡಿಸೆಂಬರ್‌ನಲ್ಲಿ ನಡೆಯಿತು. ಸಭೆಗೆ 2 ಗಂಟೆ ತಡವಾಗಿ ಬಂದ ಸಚಿವ ಆರಗ ಜ್ಞಾನೇಂದ್ರ, ಅಷ್ಟೇ ವೇಗದಲ್ಲಿ ಸಭೆ ಮುಗಿಸಿದ್ದರು. ಮೂರನೇ (ಅಕ್ಟೋಬರ್– ಡಿಸೆಂಬರ್) ತ್ರೈಮಾಸಿಕ ಸಭೆ ಜನವರಿಯಲ್ಲಿ ನಡೆಯಬೇಕಿದ್ದು, ಈವರೆಗೂ ನಡೆದಿಲ್ಲ. ಇನ್ನೂ ಮಾರ್ಚ್ ಅಂತ್ಯಕ್ಕೆ ನಾಲ್ಕನೇ ತ್ರೈಮಾಸಿಕವೂ ಪೂರ್ಣಗೊಳ್ಳಲಿದ್ದು, ಅಷ್ಟರಲ್ಲಿ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಆ ಸಭೆಯೂ ನಡೆಯುವುದಿಲ್ಲ.

ಪ್ರಸಕ್ತ ಸಾಲಿನಲ್ಲಿ ಎರಡು ಕೆಡಿಪಿ ಸಭೆಗಳು ಮಾತ್ರ ನಡೆದಿವೆ. 2021– 2022ನೇ ಸಾಲಿನಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ನಾಲ್ಕನೇ ತ್ರೈಮಾಸಿಕ ಸಭೆ ನಡೆಸಿ ಎಲ್ಲವೂ ‘ಚೆನ್ನಾಗಿದೆ’ ಎಂದು ಹೇಳಿ ಸಭೆ ಮುಗಿಸಲಾಗಿತ್ತು. ಹಿಂದಿನ ವರ್ಷವೂ ಸಚಿವರು ಜಿಲ್ಲೆಯತ್ತ ಬಂದಿದ್ದು ಅಪರೂಪ. ಈ ಸಾಲಿನಲ್ಲೂ ಇದೇ ಪರಿಸ್ಥಿತಿ ಮುಂದುವರಿಯಿತು. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಕ್ಕೆ ಸಚಿವರು ಕಾಯಂ. ಜನವರಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿ ಹೋದ ನಂತರ ಇತ್ತ ತಿರುಗಿಯೂ ನೋಡಿಲ್ಲ. ಬಿಜೆಪಿ ಕಾರ್ಯಕ್ರಮಗಳು ಇದ್ದಾಗ, ಮುಖ್ಯಮಂತ್ರಿ, ಪ್ರಧಾನಿ ಬಂದಾಗ ಬಂದಿದ್ದಾರೆ. ಬೆರಳೆಣಿಕೆಯಷ್ಟು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಇತ್ತ ಬರುತ್ತಿಲ್ಲ’ ಎಂದು ಪತ್ರಕರ್ತರು ಪ್ರಶ್ನಿಸಿದರೆ, ‘ಸದಾ ಜಿಲ್ಲೆಗೆ ಬರುತ್ತಿದ್ದೇನೆ. ಶಿವಮೊಗ್ಗಕ್ಕೆ ಹೋಗುವಾಗ ಜಿಲ್ಲೆಯ ಮೇಲೆ ಹೋಗುತ್ತೇನೆ. ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವಾಗಲೂ ಜಿಲ್ಲೆಯ ಮೂಲಕವೇ ತೆರಳುತ್ತೇನೆ. ಸದಾ ಅಧಿಕಾರಿಗಳ ಸಂಪರ್ಕದಲ್ಲಿ ಇದ್ದೇನೆ. ಏನೂ ಸಮಸ್ಯೆ ಇಲ್ಲವಲ್ಲ’ ಎನ್ನುತ್ತಾರೆ.

**

ಯಾರಿಗೂ ಬೇಡವಾಗಿದೆ

ಆಡಳಿತರೂಢ ಬಿಜೆಪಿ ನಾಯಕರು ಚುನಾವಣೆ ಸಿದ್ಧತೆಗಷ್ಟೇ ಸೀಮಿತರಾಗಿದ್ದು, ಗೆಲುವಿನ ತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ವಿರೋಧ ಪಕ್ಷಗಳೂ ಈ ಬಗ್ಗೆ ಸೊಲ್ಲೆತ್ತಿಲ್ಲ.

ಹಿರಿಯ ಶಾಸಕರಾದ ಕಾಂಗ್ರೆಸ್‌ನ ಡಾ.ಜಿ. ಪರಮೇಶ್ವರ, ಜೆಡಿಎಸ್‌ನ ಎಸ್.ಆರ್. ಶ್ರೀನಿವಾಸ್ ಕೆಡಿಪಿ ಸಭೆಯತ್ತ ಸುಳಿದಿಲ್ಲ. ಮಧುಗಿರಿ ಶಾಸಕ ಎಂ.ವಿ. ವೀರಭದ್ರಯ್ಯ, ಪಾವಗಡದ ವೆಂಕಟರಮಣಪ್ಪ, ಗ್ರಾಮಾಂತರದ ಡಿ.ಸಿ. ಗೌರಿಶಂಕರ್ ಆಗಾಗ ಮುಖ ತೋರಿಸುವಷ್ಟಕ್ಕೇ ಸೀಮಿತರಾಗಿದ್ದಾರೆ.

**

ಜಿ.ಪಂ ಸದಸ್ಯರೂ ಇಲ್ಲ

ಜಿಲ್ಲಾ ಪಂಚಾಯಿತಿಗೆ ಚುನಾಯಿತ ಪ್ರತಿನಿಧಿಗಳು ಇದ್ದರೆ ಅವರಾದರೂ ಕಾಲಕಾಲಕ್ಕೆ ಸಭೆ ನಡೆಸಿ ಪ್ರಗತಿ ಪರಾಮರ್ಶೆ ಮಾಡುತ್ತಿದ್ದರು. ಆಗ ಸಚಿವರು ನಡೆಸುವ ಕೆಡಿಪಿ ಸಭೆ ಮೇಲೆ ಹೆಚ್ಚು ಅವಲಂಬಿಸುತ್ತಿರಲಿಲ್ಲ.

ಆದರೆ ಜಿ.ಪಂ ಸದಸ್ಯರ ಅಧಿಕಾರ ಅವಧಿ ಅಂತ್ಯಗೊಂಡು ಎರಡು ವರ್ಷವಾಗಿದೆ. ಕಳೆದ ಎರಡು ವರ್ಷದಿಂದ ಚುನಾವಣೆ ನಡೆದಿಲ್ಲ. ಒಂದೊಂದು ನೆಪ ಹೇಳಿಕೊಂಡು ಚುನಾವಣೆ ಮುಂದೂಡಿಕೊಂಡು ಬರಲಾಗಿದೆ. ಹಾಗಾಗಿ ಚುನಾಯಿತ ಪ್ರತಿನಿಧಿಗಳು ಸಭೆ ನಡೆಸಿ ಪ್ರಗತಿ ಚಿಂತನೆ ನಡೆಸಿಲ್ಲ. ಇತ್ತ ಜಿಲ್ಲಾ ಉಸ್ತುವಾರಿ ಸಚಿವರು ಸಹ ಪ್ರಗತಿ ಪರಿಶೀಲನೆಯಿಂದ ದೂರವೇ ಉಳಿದಿದ್ದಾರೆ. ಗಂಡ– ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಸ್ಥಿತಿಗೆ ಜಿಲ್ಲೆಯ ಅಭಿವೃದ್ಧಿ ವಿಚಾರ ಸಿಲುಕಿಕೊಂಡು ನರಳಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.