ADVERTISEMENT

ಜಿಲ್ಲೆಯ ಹಿತಕ್ಕೆ ಪ್ರಧಾನಿ ಸ್ಪಂದಿಸಲಿ

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮನವಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 10:04 IST
Last Updated 31 ಡಿಸೆಂಬರ್ 2019, 10:04 IST
ಎಸ್.ಪಿ.ಮುದ್ದಹನುಮೇಗೌಡ
ಎಸ್.ಪಿ.ಮುದ್ದಹನುಮೇಗೌಡ   

ತುಮಕೂರು: ಜಿಲ್ಲೆಗೆ ಮೂರನೇ ಬಾರಿ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಆದರೂ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಅಗತ್ಯ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮನವಿ ಮಾಡಿದರು.

ಈ ಹಿಂದೆ ಪ್ರಧಾನಿಗಳೇ ತಿಳಿಸಿದಂತೆ 2018ರೊಳಗೆ ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನಲ್ಲಿನ ಎಚ್‌ಎಎಲ್ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಪ್ರಾರಂಭವಾಗಬೇಕಿತ್ತು. ಆದರೆ, ಈವರೆಗೂ ಘಟಕ ಪ್ರಾರಂಭವಾಗಿಲ್ಲ. ಶೀಘ್ರವೇ ಈ ಬಗ್ಗೆ ಕ್ರಮವಹಿಸಿ ಪ್ರಾರಂಭೋತ್ಸವಕ್ಕೆ ದಿನಾಂಕ ನಿಗದಿಪಡಿಸಬೇಕು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಲ್ಪತರು ನಾಡಿನಲ್ಲಿ ಕೊಬ್ಬರಿ, ತೆಂಗು ಬೆಳೆಗಾರರ ಹಿತದೃಷ್ಟಿಯಿಂದ ಕೊಬ್ಬರಿಗೆ ಕನಿಷ್ಠ ₹ 20 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು. ಅಡಿಕೆ ಮತ್ತು ರೇಷ್ಮೆ ಹೊರದೇಶಗಳಿಂದ ಅಕ್ರಮವಾಗಿ ನುಸುಳಿ ಬರುತ್ತಿದೆ. ದೇಶದ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಕಠಿಣ ಕ್ರಮ ಜರುಗಿಸಬೇಕು ಮತ್ತು ಸಂಬಂಧಿಸಿದ ನೀತಿ ರೂಪಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಇಸ್ರೊ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಆ ಮೂಲಕ ಜಿಲ್ಲೆ ಜನರಿಗೆ ಉದ್ಯೋಗ ಮತ್ತು ಇತರ ಆರ್ಥಿಕ ಚಟುವಟಿಕೆಗಳನ್ನು ಸೃಷ್ಟಿಸಲು ಕ್ರಮವಹಿಸಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ 206 ಮತ್ತು ತುಮಕೂರು ರೈಲು ಯೋಜನೆಗಳು ಅನುದಾನ ಕೊರತೆ ಎದುರಿಸುತ್ತಿವೆ. ಈ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಆದೇಶಿಸಬೇಕು. ಜ.2 ರಂದು ಪ್ರಧಾನಿ ಬಂದಾಗ ಇಲ್ಲಿನ ಸಂಸದರು ವೇದಿಕೆಯಲ್ಲೇ ಈ ಎಲ್ಲ ಯೋಜನೆಗಳ ಬಗ್ಗೆ ಪ್ರಧಾನಿ ಅವರ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೆಬ್ಬೂರು ಚಿಕ್ಕಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ರಂಗಸ್ವಾಮಿ, ಮುಖಂಡ ರಾಯಸಂದ್ರ ರವಿಕುಮಾರ್ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.