ADVERTISEMENT

ತುಮಕೂರು | 11 ಮಂಗಗಳ ಹತ್ಯೆ: ವಿಷಪ್ರಾಶನ ಶಂಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 7:00 IST
Last Updated 5 ಜನವರಿ 2026, 7:00 IST
ತುಮಕೂರು ತಾಲ್ಲೂಕಿನ ದೇವರಾಯನದುರ್ಗದಲ್ಲಿ ಪತ್ತೆಯಾದ ಮಂಗಗಳ ಕಳೇಬರ
ತುಮಕೂರು ತಾಲ್ಲೂಕಿನ ದೇವರಾಯನದುರ್ಗದಲ್ಲಿ ಪತ್ತೆಯಾದ ಮಂಗಗಳ ಕಳೇಬರ   

ತುಮಕೂರು: ತಾಲ್ಲೂಕಿನ ದೇವರಾಯನ ದುರ್ಗ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳಲ್ಲಿ 11 ಮಂಗಗಳ ಕಳೇಬರ ಪತ್ತೆಯಾಗಿದೆ. ವಿಷಪ್ರಾಶನದ ಶಂಕೆ ವ್ಯಕ್ತವಾಗಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯ ನಡೆಸಿದರು. 400 ಮೀಟರ್‌ನಿಂದ 500 ಮೀಟರ್‌ ಅಂತರದಲ್ಲಿ 9 ಮಂಗ, 2 ಲಂಗೂರಗಳು ಮೃತಪಟ್ಟಿವೆ. ದೇವರಾಯನದುರ್ಗ–ದುರ್ಗದಹಳ್ಳಿ ಅರಣ್ಯ ಭಾಗದಲ್ಲಿ ಜ. 2ರಂದು 7, ಜ. 3ರಂದು 4 ಮಂಗಗಳ ಕಳೇಬರ ಸಿಕ್ಕಿದೆ.

ಊರ್ಡಿಗೆರೆ ಪಶು ಆಸ್ಪತ್ರೆ ವೈದ್ಯರು ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿದರು. ದೇಹ ಮತ್ತು ಹೊಟ್ಟೆಯ ಕರುಳಿನ ಭಾಗದಲ್ಲಿ ಅನ್ನದ ಪದಾರ್ಥ ಇರುವುದು ಕಂಡು ಬಂದಿದೆ. ವಿಷಪ್ರಾಶನದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮಂಗಗಳ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿನ ಪಶು ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ.

ADVERTISEMENT

‘ಯಾವುದೇ ಮಂಗಗಳು ಮಂಗನ ಕಾಯಿಲೆಯಿಂದ ಮೃತಪಟ್ಟಿರುವುದು ಕಂಡು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಬಂದ ನಂತರ ಮತ್ತಷ್ಟು ಮಾಹಿತಿ ತಿಳಿಯಲಿದೆ. ಈ ಕುರಿತು ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ಪ್ರತಿಕ್ರಿಯಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭಾನುವಾರ ಸಹ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಯಾವುದೇ ಕಳೇಬರ ಪತ್ತೆಯಾಗಿಲ್ಲ.

ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅರಣ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದರು. ಮಂಗಗಳ ಕಳೇಬರ ಪತ್ತೆಯಾದ ಬಗ್ಗೆ ಅಗತ್ಯ ಮಾಹಿತಿ ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.