ADVERTISEMENT

ಚಿಕ್ಕನಾಯಕನಹಳ್ಳಿ | ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:57 IST
Last Updated 6 ಡಿಸೆಂಬರ್ 2025, 6:57 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದ ಧಾರ್ಮಿಕ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದ ಧಾರ್ಮಿಕ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠವು ಗುರು ಮರುಳಸಿದ್ಧೇಶ್ವರನ ಪವಾಡ ಕ್ಷೇತ್ರ. ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯರು ತಮ್ಮ ತಪಸ್ಸಿನ ಫಲವನ್ನು ಮಠಕ್ಕೆ ಧಾರೆ ಎರೆದಿದ್ದಾರೆ ಎಂದು ಉಜ್ಜೈನಿ ಪೀಠದ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ತಾಲ್ಲೂಕಿನಲ್ಲಿ ಕುಪ್ಪೂರು ಗದ್ದಿಗೆ ಮರುಳಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಭಾವೈಕ್ಯ ಧಾರ್ಮಿಕ ಸಮಾರಂಭದದಲ್ಲಿ ಗುರುವಾರ ಅವರು ಮಾತನಾಡಿದರು.

ಗದ್ದಿಗೆ ಮಠದಲ್ಲಿ ಮರುಳಸಿದ್ಧರು ನಂಬಿದವರನ್ನು ಕೈಹಿಡಿದಿದ್ದಾರೆ. ಲಿಂಗೈಕ್ಯ ಹಿರಿಯ ಶ್ರೀಗಳು ತತ್ವಜ್ಞಾನ ಮತ್ತು ವಿಜ್ಞಾನವನ್ನು ಅಳವಡಿಸಿಕೊಂಡು ಮಠದ ಅಭಿವೃದ್ಧಿಗೆ ಜೀವನವನ್ನು ಮುಡಿಪಾಗಿಟ್ಟಿದ್ದರು. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹೋರಾಟಗಾರರಾಗಿದ್ದರು ಎಂದರು.

ADVERTISEMENT

ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಲಿಂ. ಚಂದ್ರಶೇಖರ ಶಿವಾಚಾರ್ಯರ ಸರಳತೆ ಮತ್ತು ನಿಷ್ಕಲ್ಮಶ ಸೇವೆ ಮಾಡಿದ್ದಾರೆ. ಮಠದ ಕಟ್ಟಡಕ್ಕಿಂತ ಭಕ್ತರ ಮನಸ್ಸಿನ ಕಟ್ಟಡವೇ ಶ್ರೇಷ್ಠವಾಗಿದೆ. ತೇಜೇಶ್ವರ ಶಿವಾಚಾರ್ಯರು ಲಿಂ. ಹಿರಿಯ ಶ್ರೀಗಳ ಮಾರ್ಗದರ್ಶನ ಅನುಸರಿಸಿ ಭಕ್ತರಲ್ಲಿ ಭಕ್ತಿ ಮೂಡಿಸಬೇಕು ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಮಠದಲ್ಲಿ ನಿತ್ಯ ದಾಸೋಹ ನಡೆಯುತ್ತಿದೆ. ಶೈಕ್ಷಣಿಕ ಅನುಕೂಲಕ್ಕಾಗಿ ಮಠದ ಭಕ್ತರ ಮಕ್ಕಳಿಗೆ ಹಾಲಪ್ಪ ಪ್ರತಿಷ್ಠಾನದಿಂದ ಪ್ರತಿವರ್ಷ ಧನಸಹಾಯ ನೀಡಲು ನಿಗದಿಪಡಿಸಿದ ಠೇವಣಿಯಲ್ಲಿ ಹಣ ಇರಿಸುವುದಾಗಿ ಭರವಸೆ ನೀಡಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಪ್ಪೂರು ಮರುಳಸಿದ್ಧಶ್ರೀ ಪ್ರಶಸ್ತಿ– ಪ್ರೊ. ಎಂ. ಕೃಷ್ಣೇಗೌಡ, ಧರ್ಮರತ್ನಾಕರ ಪ್ರಶಸ್ತಿ– ಡಾ.ಪರಮೇಶ್ (ಸಿದ್ಧಗಂಗಾ ಆಸ್ಪತ್ರೆ), ಧರ್ಮನಂದಿನಿ ಪ್ರಶಸ್ತಿ– ಡಾ. ವಿಜಯಲಕ್ಷ್ಮೀ ಹಾಗೂ ಕಲಾ ಶಿರೋಮಣಿ ಪ್ರಶಸ್ತಿಯನ್ನು ನಟಿ ಪ್ರೇಮಾ ಅವರಿಗೆ ನೀಡಲಾಯಿತು.

ಸಮಾರಂಭದಲ್ಲಿ ಶಿವಗಂಗೆ ಮಠದ ಮಲಯಶಾಂತಮುನಿ ಶಿವಾಚಾರ್ಯ, ಬೀರೂರು ಮಠದ ರುದ್ರಮುನಿ ಶಿವಾಚಾರ್ಯ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಹಣ್ಣೇಮಠದ ಮರುಳಸಿದ್ಧೇಶ್ವರ ಶಿವಾಚಾರ್ಯ, ಗಾಯಕ ನಟರಾಜ್ ಶೆಟ್ಟೀಕೆರೆ, ಕಿರುತೆರೆ ನಟ ದಯಾನಂದಸಾಗರ್, ಭಕ್ತರು ಮತ್ತು ಕಲಾವಿದರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.