ADVERTISEMENT

ಕೆಂಪೇಗೌಡರ ಜೀವನ ಪಠ್ಯವಾಗಲಿ: ನಂಜಾವಧೂತ ಸ್ವಾಮೀಜಿ

ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 16:19 IST
Last Updated 24 ಆಗಸ್ಟ್ 2024, 16:19 IST
<div class="paragraphs"><p>ತುಮಕೂರಿನಲ್ಲಿ ಶನಿವಾರ ಒಕ್ಕಲಿಗರ ಸಂಘ, ಒಕ್ಕಲಿಗರ ನೌಕರರ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ನಂಜಾವಧೂತ ಸ್ವಾಮೀಜಿ, ಸಿದ್ದರಾಮ ಚೈತನ್ಯ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಶಾಸಕ ಸಿ.ಎನ್.ಬಾಲಕೃಷ್ಣ, ಮುಖಂಡರಾದ ಎಚ್.ನಿಂಗಪ್ಪ,  ಮೊದಲಾದವರು ಪಾಲ್ಗೊಂಡಿದ್ದರು</p></div>

ತುಮಕೂರಿನಲ್ಲಿ ಶನಿವಾರ ಒಕ್ಕಲಿಗರ ಸಂಘ, ಒಕ್ಕಲಿಗರ ನೌಕರರ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ನಂಜಾವಧೂತ ಸ್ವಾಮೀಜಿ, ಸಿದ್ದರಾಮ ಚೈತನ್ಯ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಶಾಸಕ ಸಿ.ಎನ್.ಬಾಲಕೃಷ್ಣ, ಮುಖಂಡರಾದ ಎಚ್.ನಿಂಗಪ್ಪ, ಮೊದಲಾದವರು ಪಾಲ್ಗೊಂಡಿದ್ದರು

   

ತುಮಕೂರು: ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿ, ಎಲ್‌ಕೆಜಿಯಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ಹಂತದ ಮಕ್ಕಳಿಗೆ ಅವರ ಆದರ್ಶ ತಿಳಿಸಬೇಕು ಎಂದು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಸಲಹೆ ಮಾಡಿದರು.

ನಗರದಲ್ಲಿ ಶನಿವಾರ ಒಕ್ಕಲಿಗರ ಸಂಘ, ಒಕ್ಕಲಿಗರ ನೌಕರರ ವೇದಿಕೆಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ಒಕ್ಕಲಿಗರ ಮತ ಬೇಕು, ಕಾರ್ಯಕ್ರಮ ಬೇಡ ಎಂದರೆ ಹೇಗೆ? ಸಮಾಜ ಇಲ್ಲದಿದ್ದರೆ ನೀವಿಲ್ಲ. ಸಮಾಜ ಕರೆ ಕೊಟ್ಟಾಗ ಶಾಸಕರು, ಮಂತ್ರಿಗಳು ಬರಲಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ಒಕ್ಕಲಿಗರ ಸಂಘ ಯಾವ ಕಡೆ ಸಾಗುತ್ತಿದೆ ಎಂಬ ಬಗ್ಗೆ ಗಾಬರಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಶಿಕ್ಷಣಮುಖಿ ಕೆಲಸ ಮಾಡಿ, ಸಾಧ್ಯವಾದರೆ ಇನ್ನೆರಡು ಎಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು ಆರಂಭಿಸಿ. ಪ್ರತಿ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಾಲೆ ತೆರೆದು ಸಮುದಾಯದ ಜನರಿಗೆ ಕೈಗೆ ಎಟಕುವಂತಹ ಶಿಕ್ಷಣ ನೀಡಬೇಕು ಎಂದು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ, ಶಾಸಕ ಸಿ.ಎನ್.ಬಾಲಕೃಷ್ಣ, ‘ಸಂಘದ ಸದಸ್ಯತ್ವದ ಹಣ ₹100 ಕೋಟಿಗೂ ಅಧಿಕ ಇದೆ. ಪ್ರತಿ ಜಿಲ್ಲೆಯಲ್ಲಿ 10 ಎಕರೆ ಭೂಮಿ ಖರೀದಿಸಿ, ವಿದ್ಯಾಸಂಸ್ಥೆ ಆರಂಭಿಸಲಾಗುವುದು. ಯುಪಿಎಸ್‌ಸಿ ಪ್ರಿಲೀಮ್ಸ್‌ ಉತ್ತೀರ್ಣರಾದ ಸಮುದಾಯದ ಯುವಕ– ಯುವತಿಯರಿಗೆ ನವದೆಹಲಿಯಲ್ಲಿ ಉಚಿತವಾಗಿ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

ರಾಜ್ಯದಲ್ಲಿ 1.30 ಕೋಟಿ ಒಕ್ಕಲಿಗರ ಜನಸಂಖ್ಯೆ ಇದೆ. ಸರ್ಕಾರದಿಂದ ಸರಿಯಾದ ರೀತಿಯಲ್ಲಿ ಜಾತಿ ಜನಗಣತಿ ಆಗಿಲ್ಲ. ಗಣತಿಯನ್ನು ಮತ್ತೊಮ್ಮೆ ಪರಾಮರ್ಶಿಸಬೇಕು. ನಿಜವಾದ ಸಮೀಕ್ಷೆಯ ವರದಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಕುಣಿಗಲ್‌ ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಮರಿಯಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮಾ, ಒಕ್ಕಲಿಗ ನೌಕರರ ವೇದಿಕೆ ಅಧ್ಯಕ್ಷ ಅಶ್ವತ್ಥಕುಮಾರ್, ಮುಖಂಡರಾದ ಡಿ.ಲೋಕೇಶ್ ನಾಗರಾಜಯ್ಯ, ಪ್ರಕಾಶ್, ಎನ್.ನರಸಿಂಹರಾಜು, ಮುರಳೀಧರ್‌ ಹಾಲಪ್ಪ, ಡಾ.ಆಂಜಿನಪ್ಪ, ಟಿ.ಆರ್.ನಾಗರಾಜು, ಧರಣೇಂದ್ರಕುಮಾರ್, ಜೆ.ಕುಮಾರ್ ಮೊದಲಾದವರು ಹಾಜರಿದ್ದರು. ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು.

ತುಮಕೂರಿನಲ್ಲಿ ಶನಿವಾರ ಒಕ್ಕಲಿಗರ ಸಂಘ ಒಕ್ಕಲಿಗರ ನೌಕರರ ವೇದಿಕೆಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಮುದಾಯದ ಜನರು ಭಾಗವಹಿಸಿದ್ದರು

ಬಸ್‌ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಿ ನಗರದ ಖಾಸಗಿ ಬಸ್‌ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ನಾಮಕರಣ ಮಾಡಬೇಕು. ಒಕ್ಕಲಿಗರ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡಬೇಕು. ಬಿಜಿಎಸ್ ವೃತ್ತದ ಬಳಿ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಅನಾವರಣಗೊಳಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಆರ್.ಹನುಮಂತರಾಯಪ್ಪ ಮನವಿ ಮಾಡಿದರು. ಸಮನ್ವಯದ ಕೊರತೆಯಿಂದ ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ಅವ್ಯವಸ್ಥೆಯಾಗಿದೆ.‌ ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆ ನಿವಾರಿಸಿ ವ್ಯವಸ್ಥಿತವಾಗಿ ಸಂಘ ಮುನ್ನಡೆಸಲಾಗುವುದು ಎಂದರು. ಮಾಜಿ ಶಾಸಕ ಎಚ್.ನಿಂಗಪ್ಪ ‘ಒಕ್ಕಲಿಗರ ಸಂಘದ ಜಿಲ್ಲಾ ಘಟಕ ವಿವಾದಕ್ಕೆ ಒಳಪಟ್ಟು ಕೋರ್ಟ್ ಸೇರಿದೆ. ಸಮುದಾಯದ ಸ್ವಾಮೀಜಿಗಳು ಆಸಕ್ತಿ ವಹಿಸಿ ವಿವಾದ ಬಗೆಹರಿಸಬೇಕು. ಸಂಘದ ಕಟ್ಟಡ ಪೂರ್ಣಗೊಳಿಸಿ ಚುನಾವಣೆಗೆ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಎಚ್‌ಡಿಕೆ ಡಿಕೆಶಿಯಿಂದ ಸಮಾಜಕ್ಕೆ ಮುಜುಗರ ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಬ್ಬರ ಮಾತನ್ನು ಸಮಾಜದ ಜನ ಗಮನಿಸುತ್ತಿದ್ದಾರೆ. ಸಮುದಾಯಕ್ಕೆ ಮುಜುಗರ ಉಂಟು ಮಾಡುವಂತಹ ಮಾತುಗಳನ್ನಾಡಬೇಡಿ’ ಎಂದು ನಂಜಾವಧೂತ ಸ್ವಾಮೀಜಿ ಎಚ್ಚರಿಸಿದರು. ಸಮುದಾಯದ ಯಾವುದೇ ಜನಪ್ರತಿನಿಧಿ ಸಮಾಜಕ್ಕೆ ಮುಜುಗರ ಆಗುವಂತೆ ನಡೆದುಕೊಳ್ಳಬಾರದು. ಸಮಾಜಕ್ಕಿಂತ ನಾವು ಯಾರೂ ದೊಡ್ಡವರಲ್ಲ ಎಂಬುದನ್ನು ಅರಿತುಕೊಂಡು ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.