ತುಮಕೂರು: ವೈದ್ಯರು, ಶುಶ್ರೂಷಕಿ, ಸಿಬ್ಬಂದಿ ಕೊರತೆಯಿಂದ ನಲುಗುತ್ತಿದ್ದ ‘ನಮ್ಮ ಕ್ಲಿನಿಕ್’ ನಿಧಾನವಾಗಿ ಸುಸ್ಥಿತಿಗೆ ಮರಳುತ್ತಿವೆ. ಆದರೆ, ಔಷಧಿ ಕೊರತೆ ಮಾತ್ರ ನೀಗುತ್ತಿಲ್ಲ.
ಸಣ್ಣ–ಪುಟ್ಟ ಕಾಯಿಲೆಗೂ ಜಿಲ್ಲಾ ಆಸ್ಪತ್ರೆಗೆ ಅಲೆಯುವುದನ್ನು ತಪ್ಪಿಸುವ, ರೋಗಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿ, ತಡೆಗಟ್ಟುವ ಉದ್ದೇಶದಿಂದ ಎಲ್ಲೆಡೆ ‘ನಮ್ಮ ಕ್ಲಿನಿಕ್’ ಆರಂಭಿಸಲಾಗಿದೆ. ಪ್ರಾರಂಭದಲ್ಲಿ ವೈದ್ಯರ ಕೊರತೆಯಿಂದ ಕ್ಲಿನಿಕ್‌ಗಳು ನರಳುತ್ತಿದ್ದವು. ಈಗ ಬಹುತೇಕ ಕಡೆಗಳಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ.
ಜಿಲ್ಲೆಯಾದ್ಯಂತ ಒಟ್ಟು 25 ಕ್ಲಿನಿಕ್ ಆರಂಭಕ್ಕೆ ಯೋಜನೆ ರೂಪಿಸಿದ್ದು, ಸದ್ಯ 22 ಕ್ಲಿನಿಕ್‌ಗಳಿವೆ. ನಗರದಲ್ಲಿ 13 ಕಾರ್ಯನಿರ್ವಹಿಸುತ್ತಿವೆ. ತುರುವೇಕೆರೆ, ಕೊರಟಗೆರೆ, ಪಾವಗಡ, ಚಿಕ್ಕನಾಯಕನಹಳ್ಳಿ, ತಿಪಟೂರು ಹೊರೆತುಪಡಿಸಿದರೆ ಎಲ್ಲ ಕಡೆಗಳಲ್ಲಿ ವೈದ್ಯರಿದ್ದಾರೆ. ಆದರೆ ಕ್ಲಿನಿಕ್‌ಗಳಲ್ಲಿ ಔಷಧಿಗಳೇ ಸಿಗುತ್ತಿಲ್ಲ.
ಕನಿಷ್ಠ ಮಧುಮೇಹ, ರಕ್ತದೊತ್ತಡ ನಿಯಂತ್ರಣಕ್ಕೆ ನೀಡುವ ಮಾತ್ರೆಗಳು ಸರಬರಾಜು ಮಾಡಲು ಆಗುತ್ತಿಲ್ಲ. ಕಳೆದ ಮಾರ್ಚ್‌ನಲ್ಲಿ ಕೊನೆಯದಾಗಿ ಔಷಧಿ ಸರಬರಾಜು ಮಾಡಲಾಗಿದೆ. ಜನರು ನಿರೀಕ್ಷೆಗೂ ಮೀರಿ ನಮ್ಮ ಕ್ಲಿನಿಕ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ನಿವಾರಣೆಗೆ ಬೇಕಾದ ಮಾತ್ರೆ ವಿತರಿಸಲಾಗುತ್ತಿಲ್ಲ.
ನಗರದ ಜಯಪುರದ ಕ್ಲಿನಿಕ್‌ಗೆ ದಿನಕ್ಕೆ ಕನಿಷ್ಠ 30 ಜನ ಚಿಕಿತ್ಸೆಗೆ ಬರುತ್ತಾರೆ. ಅಲ್ಲಿನ ವೈದ್ಯರು ಎಲ್ಲರನ್ನು ಪರೀಕ್ಷಿಸಿ ಕಳುಹಿಸುತ್ತಾರೆ. ಕಳೆದ ಕೆಲ ದಿನಗಳಿಂದ ಔಷಧಿ ಕೊರತೆ ಎದುರಾಗಿದೆ. ಆರೋಗ್ಯ ಇಲಾಖೆಯಿಂದ ಪೂರೈಸುವ ಮಾತ್ರೆಗಳು ಸ್ವಲ್ಪ ದಿನಕ್ಕೆ ಖಾಲಿಯಾಗುತ್ತಿವೆ. ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ಹೆಚ್ಚಾಗಿದ್ದು, ಅವರಿಗೆ ವಿತರಿಸಲು ಬೇಕಾದ ಮಾತ್ರೆಗಳೇ ಕ್ಲಿನಿಕ್‌ನಲ್ಲಿ ಇಲ್ಲ. ಜನ ಬರಿಗೈನಲ್ಲಿ ವಾಪಸ್ ಹೋಗುತ್ತಿದ್ದಾರೆ.
ಕ್ಲಿನಿಕ್‌ನಲ್ಲಿ ರೋಗಿಗಳು ಕುಳಿತುಕೊಳ್ಳಲು ಹಾಕಿರುವ ಬೆಂಚ್ ಮುರಿದು ಹೋಗಿದೆ. ವಿಶ್ರಾಂತಿ ಪಡೆಯಲು ಆಸನಗಳ ವ್ಯವಸ್ಥೆ ಮಾಡಿಲ್ಲ. ವೃದ್ಧರು, ಮಹಿಳೆಯರು, ಮಕ್ಕಳು ಕ್ಲಿನಿಕ್‌ಗೆ ಬರುತ್ತಿದ್ದು, ಅಗತ್ಯ ಸೌಲಭ್ಯಗಳು ಮರೀಚಿಕೆಯಾಗಿವೆ. ವೈದ್ಯರು, ಸಿಬ್ಬಂದಿ ಇದ್ದಾರೆ, ಅಗತ್ಯ ಔಷಧಿಯೇ ಇಲ್ಲ ಎಂದು ಜಯಪುರದ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.
ಮೆಳೆಕೋಟೆ ಕ್ಲಿನಿಕ್‌ನಲ್ಲಿ ಔಷಧಿ ಉಗ್ರಾಣ ಖಾಲಿಯಾಗಿದೆ. ಎರಡು ತಿಂಗಳ ಹಿಂದೆ ಕೊನೆಯ ಬಾರಿಗೆ ಔಷಧಿ ಸರಬರಾಜು ಮಾಡಲಾಗಿತ್ತು. ಅಲ್ಲಿಂದ ಇದುವರೆಗೆ ಅಗತ್ಯ ಔಷಧಿ ಪೂರೈಕೆಯಾಗಿಲ್ಲ. ಹಲವು ದಿನಗಳಿಂದ ಶುಶ್ರೂಷಕಿ ಹುದ್ದೆ ಖಾಲಿ ಇತ್ತು. ಕಳೆದ ವಾರವಷ್ಟೇ ಭರ್ತಿ ಮಾಡಲಾಗಿದೆ. ಅಧಿಕಾರಿಗಳು ಅಗತ್ಯ ಸಿಬ್ಬಂದಿ ನಿಯೋಜಿಸಿದ್ದು, ಔಷಧಿ ಪೂರೈಕೆಗೆ ಮಾತ್ರ ಗಮನ ಹರಿಸುತ್ತಿಲ್ಲ ಎಂದು ಈ ಭಾಗದ ಜನ ಅಳಲು ತೋಡಿಕೊಂಡರು.
ಬಸ್ ನಿಲ್ದಾಣದಲ್ಲಿ ಹೊಸ ಕ್ಲಿನಿಕ್
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ಜತೆಗೆ ನಗರದಲ್ಲಿ ಮತ್ತೆರಡು ಕ್ಲಿನಿಕ್ ಪ್ರಾರಂಭಕ್ಕೆ ಯೋಜನೆ ತಯಾರಾಗಿದೆ. ಇನ್ನೂ ಸ್ಥಳ ಅಂತಿಮವಾಗಿಲ್ಲ. ಬಸ್ ನಿಲ್ದಾಣದಲ್ಲಿ ಕ್ಲಿನಿಕ್ ತೆರೆಯಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ನಿತ್ಯ ಸಾವಿರಾರು ಜನರು ಇಲ್ಲಿಂದ ರಾಜ್ಯದ ವಿವಿಧೆಡೆಗೆ ಪ್ರಯಾಣಿಸುತ್ತಾರೆ. ತುರ್ತು ಸಮಯದಲ್ಲಿ ಅಗತ್ಯ ಚಿಕಿತ್ಸೆ ನೀಡುವ ಉದ್ದೇಶದಿಂದ ಕ್ಲಿನಿಕ್ ಆರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಬಾಡಿಗೆಯೇ ಅಧಿಕ
ಸದ್ಯ ಕಾರ್ಯನಿರ್ವಹಿಸುತ್ತಿರುವ 22 ಕ್ಲಿನಿಕ್‌ಗಳ ಪೈಕಿ ನಾಲ್ಕು ಮಾತ್ರ ಸ್ವಂತ ಕಟ್ಟಡದಲ್ಲಿವೆ. ಉಳಿದಂತೆ ಎಲ್ಲ ಕ್ಲಿನಿಕ್‌ಗಳಿಗೆ ಪ್ರತಿ ತಿಂಗಳು ಬಾಡಿಗೆ ಪಾವತಿಸಲಾಗುತ್ತಿದೆ. ದಿಬ್ಬೂರು ಜಯಪುರ ದೇವರಾಯಪಟ್ಟಣದಲ್ಲಿ ಸಮುದಾಯ ಭವನದಲ್ಲಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೆ ಯಾವುದೇ ಬಾಡಿಗೆ ಕೊಡುತ್ತಿಲ್ಲ. ಸತ್ಯಮಂಗಲದಲ್ಲಿ ಸ್ವಂತ ಕಟ್ಟಡ ಇದೆ. ಉಳಿದ ಕ್ಲಿನಿಕ್‌ಗಳಿಗೆ ಸ್ವಂತ ಸೂರು ಕಲ್ಪಿಸಲು ಆಗಿಲ್ಲ. ಪ್ರತಿ ತಿಂಗಳು ₹5 ಲಕ್ಷ ಬಾಡಿಗೆ ಹಣ ಸಂದಾಯವಾಗುತ್ತಿದೆ.
ತೊಂದರೆ ಇಲ್ಲ ವೈದ್ಯರು ರೋಗಿಗಳ ಜತೆಗೆ ಉತ್ತಮವಾಗಿ ನಡೆದುಕೊಳ್ಳುತ್ತಿದ್ದಾರೆ. ಇಲ್ಲಿಗೆ ಬಂದರೆ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಸಿಬ್ಬಂದಿಯೂ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ಈಗ ಯಾವುದೇ ತೊಂದರೆ ಇಲ್ಲ. ಎಲ್ಲ ಕೆಲಸಗಳು ಚೆನ್ನಾಗಿ ನಡೆಯುತ್ತಿವೆ.ನಿಜಗುಣಯ್ಯ, ಜಯಪುರ
ಅಲೆಯುವುದು ತಪ್ಪಿದೆ ದೇವರಾಜ ಅರಸು ಬಡಾವಣೆಯ ಎಲ್ಲರು ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇಲ್ಲಿ ಅಗತ್ಯ ಔಷಧಿ ನೀಡುತ್ತಾರೆ. ಕ್ಲಿನಿಕ್ ಇರುವುದರಿಂದ ಬಡಾವಣೆ ಜನರಿಗೆ ತುಂಬಾ ಪ್ರಯೋಜನವಾಗಿದೆ. ಜ್ವರ ಬಂದರೂ ದೊಡ್ಡಾಸ್ಪತ್ರೆಗೆ ಹೋಗಬೇಕಿತ್ತು. ಈಗ ಆಸ್ಪತ್ರೆಗೆ ಅಲೆಯುವುದು ತಪ್ಪಿದೆ.-ರಾಜು, ದಿಬ್ಬೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.