ADVERTISEMENT

ಹೊರಗಿನ ಅಭ್ಯರ್ಥಿ ಗೆಲ್ಲಿಸಿಲ್ಲ: ರಾಜಣ್ಣ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 3:18 IST
Last Updated 19 ಮಾರ್ಚ್ 2024, 3:18 IST
ತುಮಕೂರು ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದರು. ಮುಖಂಡರಾದ ಎಸ್.ಷಫಿಅಹ್ಮದ್, ಚಂದ್ರಶೇಖರ್‌ಗೌಡ, ಇಕ್ಬಾಲ್ ಅಹ್ಮದ್ ಇತರರು ಉಪಸ್ಥಿತರಿದ್ದರು
ತುಮಕೂರು ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದರು. ಮುಖಂಡರಾದ ಎಸ್.ಷಫಿಅಹ್ಮದ್, ಚಂದ್ರಶೇಖರ್‌ಗೌಡ, ಇಕ್ಬಾಲ್ ಅಹ್ಮದ್ ಇತರರು ಉಪಸ್ಥಿತರಿದ್ದರು   

ತುಮಕೂರು: ‘ಹೊರಗಿನಿಂದ ಬಂದು ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದವರು ಗೆಲುವು ಸಾಧಿಸಿಲ್ಲ. ಅಂತಹ ಉದಾಹರಣೆಗಳು ತೀರ ಕಡಿಮೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನಗರ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಹೊರಗಿನಿಂದ ಬಂದು ಬಿಜೆಪಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ. ಹೊರಗಿನಿಂದ ಬಂದವರಿಗೆ ಜಿಲ್ಲೆಯ ಜನರು ಮನ್ನಣೆ ನೀಡಿಲ್ಲ’ ಎಂದರು.

‘1996ರ ಚುನಾವಣೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಅವರು ಹೊರಗಿನಿಂದ ಆರ್.ಮಂಜುನಾಥ್ ಅವರನ್ನು ಕರೆತಂದು ನಿಲ್ಲಿಸಿದರು. ಹೊರ ಜಿಲ್ಲೆಯಿಂದ ಬಂದು ಕೋದಂಡರಾಮಯ್ಯ ಸ್ಪರ್ಧಿಸಿದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸಹ ಕಣಕ್ಕೆ ಇಳಿದಿದ್ದರು. ಅವರೆಲ್ಲರೂ ಸೋಲು ಕಂಡಿದ್ದಾರೆ. ಹೊರಗಿನವರು ಎಂಬ ಕಾರಣಕ್ಕೆ ಮತದಾರರು ಮಣೆ ಹಾಕುವುದಿಲ್ಲ’ ಎಂದು ತಿಳಿಸಿದರು.

ADVERTISEMENT

‘ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಪಿ.ಮುದ್ದಹನುಮೇಗೌಡ ಎಲ್ಲಾ ಪಕ್ಷಗಳಿಗೆ ಹೋಗಿ ಬಂದಿದ್ದಕ್ಕೆ ನಮಗೂ ಬೇಜಾರಿದೆ. ಇದು ಕ್ಲಿಷ್ಟಕರ ಚುನಾವಣೆ. ಗೆಲ್ಲುವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂಬ ಕಾರಣಕ್ಕೆ ಗೌಡರಿಗೆ ಅವಕಾಶ ನೀಡಲಾಗಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ 20 ಸ್ಥಾನಗಳನ್ನು ಗೆಲ್ಲದಿದ್ದರೆ ಸರ್ಕಾರ ನಡೆಸಲು ನಮಗೆ ನೈತಿಕತೆ ಇರುವುದಿಲ್ಲ. ನಮ್ಮ ಸಂವಿಧಾನವನ್ನು ಬಿಜೆಪಿಯರು ಎಂದೂ ಒಪ್ಪುವುದಿಲ್ಲ. ವಿಧಿ ಇಲ್ಲ ಎಂದು ಇಟ್ಟುಕೊಂಡಿದ್ದಾರೆ. ಬಿಜೆಪಿ ಸಿದ್ಧಾಂತಗಳಿಗೆ ಸೋಲಾಗಬೇಕು. ಹಾಗಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಬೇಕು’ ಎಂದು ಕೇಳಿಕೊಂಡರು.

‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎಂದೂ ಜಾತ್ಯತೀತರಲ್ಲ. ಚುನಾವಣೆಯಲ್ಲಿ ಎರಡು ಕಡೆ ಮೊಮ್ಮಕ್ಕಳು, ಒಂದು ಕಡೆ ಅಳಿಯ ನಿಲ್ಲುತ್ತಿದ್ದಾರೆ. ಹಾಗಾದರೆ ಪಕ್ಷದಲ್ಲಿ ಸ್ಪರ್ಧಿಸಲು ಯಾರು ಇರಲಿಲ್ಲವೆ ಎಂದು ಪ್ರಶ್ನಿಸಿದರು. ಹಾಸನದಲ್ಲಿ ಕಾಂಗ್ರೆಸ್ ಗೆಲ್ಲಿಸದಿದ್ದರೆ ಯಾರಿಗೂ ಮುಖ ತೋರಿಸುವುದಿಲ್ಲ ಎಂದು ಹೇಳಿದ್ದೇನೆ. ಹಿಂದೆ ದೇವೇಗೌಡರನ್ನು ಪುಟ್ಟಸ್ವಾಮಿಗೌಡ ಸೋಲಿಸಿದ್ದರು. ಈ ಬಾರಿ ಜೆಡಿಎಸ್‌ನಿಂದ ದೇವೇಗೌಡರ ಮೊಮ್ಮಗ, ಕಾಂಗ್ರೆಸ್‌ನಿಂದ ಪುಟ್ಟಸ್ವಾಮಿಗೌಡರ ಮೊಮ್ಮಗ ನಿಲ್ಲುತ್ತಿದ್ದಾರೆ. ಅಲ್ಲಿ ಪಕ್ಷಕ್ಕೆ ಎರಡು ದಶಕಗಳಿಂದ ಅಧಿಕಾರ ಸಿಕ್ಕಿಲ್ಲ. ಆದರೂ ಕಾರ್ಯಕರ್ತರಲ್ಲಿ ಉತ್ಸಾಹ ಕಡಿಮೆಯಾಗಿಲ್ಲ’ ಎಂದು ಹೇಳಿದರು.

‘ಬಿಜೆಪಿಯವರು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ, ಮಹಾಭಾರತ ರಚಿಸಿದ ವ್ಯಾಸ, ಭಗವದ್ಗೀತೆ ಬರೆದ ಕೃಷ್ಣ ಶೂದ್ರ ಸಮುದಾಯಕ್ಕೆ ಸೇರಿದವರು. ಶ್ರೀರಾಮನ ಮೂರ್ತಿ ಕೆತ್ತಿದವರು, ಗುಡಿ ಕಟ್ಟಿದವರು ಶೂದ್ರರು. ಆದರೆ ಅವರಿಗೆ ಗರ್ಭಗುಡಿಗೆ ಬಿಡುವುದಿಲ್ಲ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.