ADVERTISEMENT

ಚಿಕ್ಕನಾಯಕನಹಳ್ಳಿ: ರಿಂಗ್ ರಸ್ತೆ ಬೇಡ, ಬೈಪಾಸ್ ಸಾಕು; ಜೆ.ಸಿ.ಮಾಧುಸ್ವಾಮಿ

ಜಿಲ್ಲಾ ಉಸ್ತುವಾರಿ ಸಚಿವ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 4:48 IST
Last Updated 3 ಜುಲೈ 2020, 4:48 IST
ಚಿಕ್ಕನಾಯಕನಹಳ್ಳಿ ಪಟ್ಟಣದ ಪುರಸಭೆ ಮುಂಭಾಗ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳು ಹಾಗೂ ಪುರಸಭಾ ಸದಸ್ಯರ ಬಳಿ ಪಟ್ಟಣದ ಬಗ್ಗೆ ಚರ್ಚಿಸಿದರು
ಚಿಕ್ಕನಾಯಕನಹಳ್ಳಿ ಪಟ್ಟಣದ ಪುರಸಭೆ ಮುಂಭಾಗ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳು ಹಾಗೂ ಪುರಸಭಾ ಸದಸ್ಯರ ಬಳಿ ಪಟ್ಟಣದ ಬಗ್ಗೆ ಚರ್ಚಿಸಿದರು   

ಚಿಕ್ಕನಾಯಕನಹಳ್ಳಿ: ರಾಷ್ಟ್ರೀಯ ಹೆದ್ದಾರಿ 150ಎ ಬೈಪಾಸ್ ಆಗಲಿದ್ದು, ಪಟ್ಟಣದಲ್ಲಿ ಯಾವುದೇ ಕಟ್ಟಡಗಳನ್ನು ತೆರವುಗೊಳಿಸದೆ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಪಟ್ಟಣದ ಕಸ ವಿಲೇವಾರಿ ಮಾಡುವ ಪುರಸಭೆಯ ಹೊಸ ಎರಡು ಟ್ರಾಕ್ಟರ್‌ಗಳ ಚಾಲನೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ನಗರ ಯೋಜನಾ ಪ್ರಾಧಿಕಾರದ ಜಿಲ್ಲಾ ಅಧಿಕಾರಿ ಹನುಮಂತರಾಯಪ್ಪ ಸಚಿವರಿಗೆ ಪಟ್ಟಣದ ಅಭಿವೃದ್ಧಿ ಯೋಜನೆಯಲ್ಲಿ ಪಟ್ಟಣಕ್ಕೆ ಹೊಸ ರಿಂಗ್ ರಸ್ತೆ ಯೋಜನೆಯ ನಕ್ಷೆ ವಿವರಿಸಿದರು.

ADVERTISEMENT

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದುರ್ಗಾ ಡಾಬಾದ ಮುಂಭಾಗದಿಂದ ಸಾಗುವ ರಿಂಗ್ ರಸ್ತೆ, ದಬ್ಬೇಘಟ್ಟ ಕೆರೆಯ ಪಕ್ಕದಿಂದ ನವೋದಯ ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಿಂಭಾಗದಿಂದ ಕುರುಬರಹಳ್ಳಿ ಪಕ್ಕದಲ್ಲಿ ಹಾದು ಹೋಗಿ ಮಾಳಿಗೆಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆಗೆ ಸೇರುವುದು. ಆದ್ದರಿಂದ ಪಟ್ಟಣದಲ್ಲಿ ರಿಂಗ್ ರಸ್ತೆ ಮಾಡುವ ಯೋಜನೆ ಇದೆ ಎಂದರು.

ಈ ನಕ್ಷೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಸಚಿವರು, ಈ ರಿಂಗ್ ರಸ್ತೆಯ ಅವಶ್ಯಕತೆ ಇಲ್ಲ ಎಂದರು.

ಈಗಾಗಲೆ ಪಟ್ಟಣದಲ್ಲಿ 150ಎ ರಾಷ್ಟ್ರೀಯ ಹೆದ್ದಾರಿ ಹಾದು ಹೊಗಲಿದೆ. ಆದರೆ, ರಸ್ತೆಯಲ್ಲಿ ಕಟ್ಟಡ ತೆರವುಗೊಳಿಸಿ ವಿಸ್ತರಣೆ ಮಾಡುವುದಿಲ್ಲ. ಬದಲಾಗಿ ಮಾಳಿಗೆಹಳ್ಳಿ, ಕುರುಬರಹಳ್ಳಿ, ದಬ್ಬೇಘಟ್ಟ, ತರಬೇನಹಳ್ಳಿಗಳ ಆಸುಪಾಸಿನಲ್ಲಿ ಬೈಪಾಸ್ ರಸ್ತೆ ಮಾಡಲು ತೀರ್ಮಾನಿಸಿದೆ. ಕೇವಲ ಅರ್ಧ ಕಿ.ಮೀ. ಅಂತರದಲ್ಲಿ ಬೈಪಾಸ್ ಆಗುವುದರಿಂದ ಪಟ್ಟಣಕ್ಕೆ ರಿಂಗ್ ರಸ್ತೆ ಅನವಶ್ಯಕ ಎಂದು ವಿವರಿಸಿದರು.

ಎಸ್.ಶ್ರೀನಿವಾಸ್, ಸಿ.ಬಸವರಾಜು, ಸಿ.ಡಿ.ಸುರೇಶ್, ಉಮಾ, ಪುಷ್ಪಾ, ಬಾಬು, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.