ADVERTISEMENT

ತುಮಕೂರು ಪ್ಯಾರಾ ಮೆಡಿಕಲ್‌ ಕಾಲೇಜು: 420 ಮಂದಿಗೆ ಸಭಾಂಗಣವೇ ಕೊಠಡಿ!

ಪ್ಯಾರಾ ಮೆಡಿಕಲ್‌ ಕಾಲೇಜಿಗಿಲ್ಲ ಕಟ್ಟಡ; ವಿದ್ಯಾರ್ಥಿಗಳ ಅಲೆದಾಟ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 16:25 IST
Last Updated 31 ಜುಲೈ 2024, 16:25 IST
ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಸಭಾಂಗಣ
ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಸಭಾಂಗಣ   

ತುಮಕೂರು: ಸರ್ಕಾರಿ ಪ್ಯಾರಾ ಮೆಡಿಕಲ್‌ ಕಾಲೇಜಿಗೆ ಪ್ರತ್ಯೇಕವಾದ ಕಟ್ಟಡ, ಕೊಠಡಿ ವ್ಯವಸ್ಥೆ ಇಲ್ಲದೆ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲೇ ತರಗತಿ ನಡೆಸಲಾಗುತ್ತಿದೆ.

ಪ್ಯಾರಾ ಮೆಡಿಕಲ್‌ನ 7 ಕೋರ್ಸ್‌ಗಳಿಗೆ 420 ಮಂದಿ ಪ್ರವೇಶ ಪಡೆದಿದ್ದಾರೆ. ಇಷ್ಟು ವಿದ್ಯಾರ್ಥಿಗಳು ಸಭಾಂಗಣವನ್ನೇ ನೆಚ್ಚಿಕೊಂಡಿದ್ದಾರೆ. ಇಲ್ಲಿ ಒಂದು ಕಾರ್ಯಕ್ರಮ ನಡೆದರೆ ಇಡೀ ದಿನ ತರಗತಿ ನಡೆಸಲು ಅವಕಾಶ ಸಿಗುವುದಿಲ್ಲ. ಇದರಿಂದಾಗಿ ಸಕಾಲಕ್ಕೆ ಪಾಠ ಪ್ರವಚನ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಸುತ್ತಮುತ್ತಲಿನ ಗದ್ದಲ ಸಹ ಕಾಡುತ್ತದೆ.

ಮೂರು ವರ್ಷದ ಶಿಕ್ಷಣ ಪ್ರಾರಂಭದಲ್ಲಿಯೇ ತೆವಳುತ್ತಾ ಸಾಗುತ್ತಿದೆ. ಕಾಲೇಜು ಆರಂಭವಾದ ಸಮಯದಿಂದ ಇದೇ ರೀತಿಯ ಸಮಸ್ಯೆಯಾಗುತ್ತಿದೆ. ಒಂದು ಜಾಗ ಗುರುತಿಸಿ, ಕಟ್ಟಡ ನಿರ್ಮಿಸಲು ಆಡಳಿತ ವ್ಯವಸ್ಥೆ ಮುಂದಾಗಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ADVERTISEMENT

‘ಡಿಪ್ಲೊಮಾ ಇನ್‌ ಮೆಡಿಕಲ್‌ ಲ್ಯಾಬೋರೇಟರಿ ಟೆಕ್ನಾಲಜಿ’, ‘ಡಿಪ್ಲೊಮಾ ಇನ್‌ ಹೆಲ್ತ್‌ ಇನ್‌ಸ್ಪೆಕ್ಟರ್‌’, ‘ಡಿಪ್ಲೊಮಾ ಇನ್‌ ಮೆಡಿಕಲ್‌ ಎಕ್ಸ್‌ರೇ ಟೆಕ್ನಾಲಜಿ’, ‘ಡಿಪ್ಲೊಮಾ ಇನ್‌ ಆಪರೇಷನ್‌ ಥಿಯೇಟರ್‌ ಟೆಕ್ನಾಲಜಿ’, ‘ಡಿಪ್ಲೊಮಾ ಇನ್‌ ಮೆಡಿಕಲ್‌ ರೆಕಾರ್ಡ್ಸ್‌ ಟೆಕ್ನಾಲಜಿ’, ‘ಡಿಪ್ಲೊಮಾ ಇನ್‌ ಮೆಡಿಕಲ್‌ ಆಪ್ತಾಲ್ಮಿಕ್‌ ಟೆಕ್ನಾಲಜಿ’, ‘ಡಿಪ್ಲೊಮಾ ಇನ್‌ ಡಯಾಲಿಸಿಸ್‌ ಟೆಕ್ನಾಲಜಿ’ ಸೇರಿ ಏಳು ಕೋರ್ಸ್‌ಗೆ ತಲಾ 20 ಮಂದಿಗೆ ಪ್ರವೇಶ ನೀಡಲಾಗಿದೆ.

ಎಲ್ಲ ಕೋರ್ಸ್‌ಗೆ ಕನಿಷ್ಠ ತಲಾ ಒಂದೊಂದು ಕೊಠಡಿಯಾದರೂ ಅಗತ್ಯವಿದೆ. ಕನಿಷ್ಠ ಸೌಲಭ್ಯ ಒದಗಿಸಲು ಆಗಿಲ್ಲ. ಒಂದು ಕೋರ್ಸ್‌ನ ತರಗತಿ ನಡೆಯುತ್ತಿದ್ದರೆ ಇನ್ನುಳಿದ 6 ಕೋರ್ಸ್‌ ವಿದ್ಯಾರ್ಥಿಗಳು ಖಾಲಿ ಕೂರುತ್ತಾರೆ. ಇದರಲ್ಲಿ ಕೆಲವರು ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಉಳಿದವರು ಆಸ್ಪತ್ರೆ ಆವರಣದಲ್ಲಿ ಕೂತು ಕಾಲಹರಣ ಮಾಡುವಂತಾಗಿದೆ.

ಜಿಲ್ಲೆ ಸೇರಿದಂತೆ ಹಾವೇರಿ, ರಾಮನಗರ, ಚಿಕ್ಕಬಳ್ಳಾಪುರ ಇತರೆ ಜಿಲ್ಲೆಗಳ ವಿದ್ಯಾರ್ಥಿಗಳು ಪ್ಯಾರಾ ಮೆಡಿಕಲ್‌ ಕಾಲೇಜಿಗೆ ದಾಖಲಾಗಿದ್ದಾರೆ. ದೊಡ್ಡಾಸ್ಪತ್ರೆಯಲ್ಲೇ ಕಾಲೇಜು ಇರುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಕೋರ್ಸ್‌ ಮುಗಿದ ತಕ್ಷಣಕ್ಕೆ ಬದುಕಿಗೆ ಒಂದು ದಾರಿ ಕಂಡುಕೊಳ್ಳಬಹುದು ಎಂಬ ಕನಸು ಹೊತ್ತು ಬಂದಿದ್ದ ವಿದ್ಯಾರ್ಥಿಗಳು ಮೂಲ ಸೌಲಭ್ಯ ಕೊರತೆಯಿಂದಾಗಿ ಅರ್ಧಕ್ಕೆ ಓದು ಬಿಟ್ಟು ಬೇರೆ ಕಡೆ ಹೋಗುವ ನಿರ್ಧಾರಕ್ಕೆ ಬರುವಂತಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಇಲ್ಲ. ತರಗತಿಗಳು ನಡೆಯುವ ಸಭಾಂಗಣದ ಮುಂಭಾಗದಲ್ಲೇ ಮಳೆ ಬಂದರೆ ನೀರು ನಿಲ್ಲುತ್ತಿದ್ದು, ತುಂಬಾ ಸಮಸ್ಯೆಯಾಗುತ್ತಿದೆ. ನೀರು ಸಮರ್ಪಕವಾಗಿ ಹರಿದು ಹೋಗದೆ ಗಬ್ಬು ವಾಸನೆ ಬರುತ್ತದೆ. ಹಲವು ದಿನಗಳ ಕಾಲ ನಿಂತಲ್ಲೇ ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ರೋಗ ವಾಸಿಮಾಡಿಕೊಳ್ಳಲು ಆಸ್ಪತ್ರೆಗೆ ಬರುವವರು ವಿಶ್ರಾಂತಿಗಾಗಿ ಆವರಣದಲ್ಲಿ ಕೂತರೆ ಹೊಸ ರೋಗಗಳು ಅಂಟಿಕೊಳ್ಳುತ್ತವೆ.

‘ಊರಿಗೆಲ್ಲ ಸ್ವಚ್ಛತೆಯ ಬಗ್ಗೆ ಪಾಠ ಮಾಡುವ ವೈದ್ಯರು, ಜಿಲ್ಲಾ ಶಸ್ತ್ರ ಚಿಕಿತ್ಸಕರು ತಮ್ಮ ಆವರಣವನ್ನೇ ಸ್ವಚ್ಛವಾಗಿ ಇಟ್ಟುಕೊಂಡಿಲ್ಲ. ಮಳೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು’ ಎಂದು ಚಿಕಿತ್ಸೆಗೆ ಬಂದಿದ್ದ ತಿಪಟೂರಿನ ಹೊನ್ನವಳ್ಳಿಯ ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲಾ ಆಸ್ಪತ್ರೆ ಸಭಾಂಗಣದ ಮುಂಭಾಗ ಮಳೆ ನೀರು ನಿಂತಿರುವುದು

ಕೊಠಡಿ ಸಮಸ್ಯೆ ಇಲ್ಲ

‘ಪ್ಯಾರಾ ಮೆಡಿಕಲ್‌ ಕಾಲೇಜಿಗೆ ಕಟ್ಟಡದ ಸಮಸ್ಯೆ ಇಲ್ಲ. ನರ್ಸಿಂಗ್‌ ಕಾಲೇಜಿನ ಕೊಠಡಿಗಳು ಪ್ರಯೋಗಾಲಯಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಐ.ಅಸ್ಗರ್‌ಬೇಗ್‌ ಪ್ರತಿಕ್ರಿಯಿಸಿದರು. ‘ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳೇ ಕೊಠಡಿಗಳ ಕೊರತೆ ಎದುರಿಸುತ್ತಿದ್ದಾರೆ. 3 ಕೊಠಡಿಗಳಲ್ಲಿ 338 ಮಂದಿ ಕಲಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಲ್ಲಿ ಪ್ಯಾರಾ ಮೆಡಿಕಲ್‌ ಕಾಲೇಜು ತರಗತಿಗಳು ನಡೆಯಲು ಹೇಗೆ ಸಾಧ್ಯ? ಅಧಿಕಾರಿಗಳು ತಮ್ಮ ಲೋಪ ಮುಚ್ಚಿಕೊಳ್ಳಲು ಸಮಸ್ಯೆ ಇಲ್ಲವೆಂದು ಹೇಳುತ್ತಿದ್ದಾರೆ’ ಎಂದು ವಿದ್ಯಾರ್ಥಿಗಳು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.